ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಹಾವೇರಿ: ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ನಗರದ ಅಂಜುಮನ್ ಏ ಇಸ್ಲಾಂ ಕಮಿಟಿಯ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಹಾವೇರಿಯ ನಾಗೇಂದ್ರನಮಟ್ಟಿ, ಮೆಹಬೂಬ್ ಸುಬಾನಿ ದರ್ಗಾ, ಶಿವಾಜಿನಗರ, ವಿದ್ಯಾನಗರ, ಲಕಮಾಪೂರ, ಸುಭಾಷ್ ಸರ್ಕಲ್, ಶಿವಯೋಗಿಶ್ವರ ನಗರ, ಹೊಸನಗರ, ತಾಜ್ ನಗರ, ಮಕಾನಗಲ್ಲಿ, ಸೂಲಮಟ್ಟಿ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಹೊಸಬಟ್ಟೆ ತೊಟ್ಟು, ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡು ಆಗಮಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ ಬಂಧು-ಬಾಂಧವರನ್ನು ಪರಸ್ಪರ ಭೇಟಿಯಾಗಿ ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಸಮಾಜದ ಧರ್ಮಗುರುಗಳಾದ ಹಜರತ್ ಮೌಲಾಲಿ ಮುಲ್ಲಾ, ದಾದಾಪೀರ ಮುಲ್ಲಾ ಹಾಗೂ ಮಣ್ಣಮಸೂತಿ ಮೌಲಾನಾ ಅವರು ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಪ್ರವಾದಿ ಇಬ್ರಾಹಿಂರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ಈ ದಿನವನ್ನು ಬಕ್ರೀದ್ ಎಂದು ಆಚರಿಸಲಾಗುತ್ತದೆ. ಬಕ್ರೀದ್ ಹಬ್ಬ ತ್ಯಾಗ ಬಲಿದಾನದ ಸಂಕೇತವಾಗಿದ್ದು, ಭಾರತ ಸೇರಿದಂತೆ ವಿಶ್ವದಾದ್ಯಂತ ಭಕ್ತಿಯಿಂದ ಆಚರಿಸಲಾಗುತ್ತದೆ. ಇಂತಹ ಹಬ್ಬಗಳಲ್ಲಿ ಜಾತಿ-ಧರ್ಮ ಬಿಟ್ಟು ಎಲ್ಲ ವರ್ಗದ ಜನರು ಒಗ್ಗೂಡಿಕೊಂಡು ಸೌಹಾರ್ದಯುತವಾಗಿ ಆಚರಣೆ ಮಾಡಿದಾಗ ಒಂದೊಳ್ಳೆ ಅರ್ಥಬರುತ್ತದೆ ಎಂದರು.ಈ ವರ್ಷ ಮುಂಗಾರು ಆರಂಭಗೊಂಡಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚೆನ್ನಾಗಿ ನಡೆಯುತ್ತಿದೆ. ಅನ್ನದಾತ ಸುಖದಿಂದಿದ್ದರೇ ಎಲ್ಲರೂ ಚೆನ್ನಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಉತ್ತಮ ಮಳೆಯಾಗಿ, ಸಮೃದ್ಧ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸೋಣ. ಜತೆಗೆ ಜಿಲ್ಲೆಯ ಬಡಜನರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿ ಸಂಕಷ್ಟಗಳು, ಕಷ್ಟ ಕಾರ್ಪಣ್ಯಗಳು ಬಾರದ ಹಾಗೆ, ಮಕ್ಕಳಾಗದವರಿಗೆ ಸಂತಾನ ಭಾಗ್ಯವನ್ನು ಅಲ್ಲಾಹ ದೇವರು ಕರುಣಿಸಲೆಂದು ಸಾಮೂಹಿಕವಾಗಿ ಬೋಧನೆ ಮಾಡುವ ಮೂಲಕ ವಿಶೇಷವಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿಯ ಅಧ್ಯಕ್ಷ ಇರ್ಫಾನಖಾನ್ ಪಠಾಣ್, ಉಪಾಧ್ಯಕ್ಷ ಇಮಾಮ್‌ಹುಸೇನ್ ಬಾಲೇಬಾಯಿ, ಕಾರ್ಯದರ್ಶಿ ಮುಜಾಫರ್ ಕೊಟ್ಟಿಗೇರಿ, ಖಜಾಂಚಿ ಚಮನ್‌ಶರೀಫ ಮುಲ್ಲಾ, ಹುಡಾ ನಾಮನಿರ್ದೇಶಿತ ಸದಸ್ಯ ಜಮೀರ್‌ಅಹ್ಮದ ಜಿಗರಿ, ಅನ್ವರ್ ಕಡೇಮನಿ, ಇಸ್ಮಾಯಿಲ್‌ಸಾಬ್ ಲಬ್ಬೇರ, ಸಾಧಿಕ ಸವಣೂರ, ಕಮರ್‌ಅಲಿ ಕಲ್ಯಾಣಿ, ಸಮಾಜದ ಮುಂಡರಾದ ಪೀರಸಾಬ ಚೋಪದಾರ್, ಬಾಬುಸಾಬ್ ಮೊಮಿನಗಾರ, ಅಸ್ಸು ಖಾಜಿ, ದಾದಾಪೀರ ಚೂಡಿಗಾರ, ನಜೀರ ನದಾಫ್, ಅಲ್ಲಾಭಕ್ಷ ತಿಮ್ಮಾಪೂರ, ಅತಾವುಲ್ಲಾ ಖಾಜಿ, ಬಾಬುಲಾಲ್ ಬಾಲೇಬಾಯಿ, ಐಸ್ಪಾಕ್ ಹಸೀನವಾಲೆ, ಹಸನ್‌ರಜಾ ಅತ್ತಾರ, ಇಮ್ರಾನ್ ಹೊಂಬರಡಿ, ಅಮೀರ್‌ಜಾನ್ ಬೇಪಾರಿ, ಗೌಸ್ ಹತ್ತಿಕಾಳ ಸೇರಿದಂತೆ ನಗರದ ಎಲ್ಲಾ ಮಸೀದಿಗಳ ಮೌಲಾನಾಗಳು, ಸಮಾಜದ ಮುಖಂಡರು ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.