ಭಟ್ಕಳದಲ್ಲಿ ಸಂಭ್ರಮದಿಂದ ಬಕ್ರೀದ್ ಹಬ್ಬ ಆಚರಣೆ

| Published : Jun 08 2025, 01:53 AM IST

ಸಾರಾಂಶ

ಪ್ರತಿಯೊಂದು ಧರ್ಮಕ್ಕೂ ಕೆಲವು ರೀತಿಯ ತ್ಯಾಗವಿದೆ.

ಭಟ್ಕಳ: ತಾಲೂಕಿನಾದ್ಯಂತ ಈದುಲ್ ಅದ್ಹಾ ವಿಶೇಷ ಪ್ರಾರ್ಥನೆಯನ್ನು ಮುಸ್ಲಿಮರು ಶನಿವಾರ ಮಳೆಯ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ನಡೆಸದೇ ವಿವಿಧ ಮಸೀದಿಗಳಲ್ಲಿ ನಡೆಸಿ ಬಕ್ರೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಜಾಮೀಯಾ ಮಸೀದಿಯಲ್ಲಿ (ಚಿನ್ನದ ಪಳ್ಳಿ) ಬಕ್ರೀದ್ ಹಬ್ಬದ ಪ್ರಯುಕ್ತ ಮೌಲಾನ ಅಬ್ದುಲ್ ಅಲೀಂ ಖತೀಬಿ ನದ್ವಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಈದ್ ಸಂದೇಶ ನೀಡಿದರು.

ಪ್ರತಿಯೊಂದು ಧರ್ಮಕ್ಕೂ ಕೆಲವು ರೀತಿಯ ತ್ಯಾಗವಿದೆ. ಆದರೆ ಅಲ್ಲಾಹನನ್ನು ಒಲಿಸಿಕೊಳ್ಳುವುದು, ವಿಪತ್ತುಗಳನ್ನು ನಿವಾರಿಸುವುದು, ವಿಪತ್ತುಗಳನ್ನು ತಪ್ಪಿಸುವುದು ಇತ್ಯಾದಿ ಹೆಸರಿನಲ್ಲಿ ತ್ಯಾಗದ ಕ್ರಿಯೆ ಕಂಡುಬರುತ್ತದೆ. ಇಸ್ಲಾಂ ನಿಜವಾಗಿಯೂ ತ್ಯಾಗಕ್ಕೆ ಸರಿಯಾದ ನಿರ್ದೇಶನವನ್ನು ನೀಡಿದೆ ಎಂದರು.

ಖಲೀಫಾ ಜಾಮಿಯಾ ಮಸೀದಿಯಲ್ಲಿ (ಗುರುಗಳ ಪಳ್ಳಿ) ಮೌಲಾನ ಕ್ವಾಜಾ ಅಕ್ರಮಿ ಮದನಿ ನದ್ವಿ, ನವಾಯತ್ ಕಾಲೋನಿಯ ತಂಝೀಂ ಮಿಲಿಯಾ ಮಸೀದಿಯಲ್ಲಿ ಮೌಲಾನ ಅನ್ಸಾರ್ ಖತೀಬ್ ಮದನಿ, ಹುರಳಿಸಾಲಿನ ಮಸ್ಜೀದ್ ಅಹ್ಮದ್ ಸಯಿದ್ ಮಸ್ಜೀದನಲ್ಲಿ ಮೌಲಾನ ಜಾಫರ್ ಪಕ್ಕಿ ಬಾವ್ ನದ್ವಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮೌಲಾನಗಳು ವಿಶೇಷ ಪ್ರಾರ್ಥನೆ ನೆರವೇರಿಸಿ ಬಕ್ರೀದ್ ಹಬ್ಬದ ಮಹತ್ವ ಮತ್ತು ಸಂದೇಶ ನೀಡಿದರು.

ಹೆಬಳೆ, ಶಿರಾಲಿ, ಮುರ್ಡೇಶ್ವರದ ಮಸೀದಿಯಲ್ಲೂ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಶನಿವಾರ ಬೆಳಿಗ್ಗೆ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಹೊರ ತಾಲೂಕಿನಿಂದಲೂ ಪೊಲೀಸರು ಆಗಮಿಸಿ ಬಂದೋಬಸ್ತನಲ್ಲಿದ್ದಾರೆ.