ರಾಮನಗರ ಜಿಲ್ಲಾದ್ಯಂತ ಸಂಭ್ರಮದ ಬಕ್ರೀದ್

| Published : Jun 18 2024, 12:45 AM IST

ಸಾರಾಂಶ

ರಾಮನಗರ: ತ್ಯಾಗ, ಬಲಿದಾನದ ಹಾಗೂ ಸೋದರತ್ವದ ಸಂಕೇತವಾದ ಈದ್ ಉಲ್ ಅಜ್ಹಾ (ಬಕ್ರೀದ್) ಹಬ್ಬವನ್ನು ಮುಸ್ಲಿಂ ಬಾಂಧವರು ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ರಾಮನಗರ: ತ್ಯಾಗ, ಬಲಿದಾನದ ಹಾಗೂ ಸೋದರತ್ವದ ಸಂಕೇತವಾದ ಈದ್ ಉಲ್ ಅಜ್ಹಾ (ಬಕ್ರೀದ್) ಹಬ್ಬವನ್ನು ಮುಸ್ಲಿಂ ಬಾಂಧವರು ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಈದ್ಗಾ ಮೈದಾನಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಸ್ಲೀಮರು ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಈದ್ಗಾ ಮೈದಾನಕ್ಕೆ ತಂಡೋಪತಂಡವಾಗಿ ಆಗಮಿಸಿದ ಮುಸ್ಲೀಮರು ಸಹಸ್ರಾರು ಸಂಖ್ಯೆಯಲ್ಲಿ ಮೈದಾನಗಳಲ್ಲಿ ಜಮಾಯಿಸಿ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು.

ಜಿಲ್ಲಾ ಕೇಂದ್ರವಾದ ರಾಮನಗರದ ಬೆಂ-ಮೈ ಹೆದ್ದಾರಿಯಲ್ಲಿನ ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲೀಂ ಧರ್ಮಗುರುಗಳು ಉಪದೇಶದಂತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು. ಪ್ರಾರ್ಥನೆಯ ನಂತರ ಪರಸ್ಪರರನ್ನು ಆಲಂಗಿಸಿ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆಗಳನ್ನು ತೊಟ್ಟ ಚಿಣ್ಣರು ಸಂಭ್ರಮಿಸಿದರು. ಪ್ರಮುಖ ಮುಸ್ಲೀಂ ಮುಖಂಡರು ಸೇರಿದಂತೆ ಯುವಕರು, ಮಕ್ಕಳು, ವೃದ್ಧರೂ ಎಲ್ಲರೂ ಸಂಭ್ರಮದಿಂದ ಬಕ್ರೀದ್ ಆಚರಣೆಯಲ್ಲಿ ಭಾಗವಹಿಸಿದರು.

ಹಲವು ರಾಜಕೀಯ ನಾಯಕರು ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಸಹ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಸಾಮೂಹಿಕ ಪ್ರಾರ್ಥನೆ ನಡೆದ ಎಲ್ಲೆಡೆ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು. ಚನ್ನಪಟ್ಟಣದಲ್ಲಿ ಸಂಭ್ರಮದ ಬಕ್ರೀದ್:

ಮುಸ್ಲೀಮರ ಪವಿತ್ರ ಹಬ್ಬವಾದ ಬಕ್ರೀದ್ ಅನ್ನು ತಾಲೂಕಿನ ಮುಸ್ಲೀಮರು ಶ್ರದ್ಧಾ, ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಿದರು. ಸೋಮವಾರ ನಗರದ ಕೋಟೆಯ ಈದ್ಗಾ ಮೈದಾನ, ಮೆಹೆದವಿಯ ಈದ್ಗಾ ಮೈದಾನಗಳಲ್ಲಿ ಜಮಾಯಿಸಿದ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ಬೆಳಿಗ್ಗೆಯಿಂದಲೇ ಈದ್ಗಾ ಮೈದಾನಗಳಿಗೆ ತಂಡೋಪತಂಡವಾಗಿ ಆಗಮಿಸಿದ ಮುಸ್ಲಿಂ ಸಮುದಾಯದವರು ಧರ್ಮಗುರುಗಳ ಉಪದೇಶದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಈದ್ಗಾ ಮೈದಾನಗಳಲ್ಲಿ ಮುಸ್ಲಿಂ ಧರ್ಮಗುರುಗಳು ಪ್ರವಚನ ನೀಡಿದರು. ಹಿರಿಯರು, ಚಿಣ್ಣರು ಸೇರಿದಂತೆ ಎಲ್ಲ ವಯೋಮಾನದವರು ಹೊಸಬಟ್ಟೆಗಳನ್ನು ತೊಟ್ಟ ಸಂಭ್ರಮಿಸಿದರು. ಪ್ರಾರ್ಥನೆ ನಂತರ ಮುಸ್ಲಿಂರು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಬಕ್ರೀದ್ ಶುಭಾಶಯ ವಿನಿಮಯ ಮಾಡಿಕೊಂಡರು.

ತಾಲೂಕಿನ ಹೊಂಗನೂರು, ಕೋಡಂಬಹಳ್ಳಿ, ಮಹಮದ್‌ಖಾನ್‌ ದೊಡ್ಡಿಗಳಲ್ಲೂ ಸಹ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಮಾಗಡಿಯಲ್ಲಿ ಬಕ್ರೀದ್‌:

ಮಾಗಡಿ ಪಟ್ಟಣದಲ್ಲಿರುವ ಈದ್ಗಾ ಮೈದಾನದಲ್ಲಿ ಪವಿತ್ರ ಹಬ್ಬ ಬಕ್ರೀದ್ ಪ್ರಯುಕ್ತ ಮುಸ್ಲೀಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆಯ ನಂತರ ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಕನಕಪುರದಲ್ಲಿ ಬಕ್ರೀದ್‌:

ಪವಿತ್ರ ಬಕ್ರೀದ್ ಹಬ್ಬವನ್ನು ಕನಕಪುರದಲ್ಲಿ ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬೆಳಗ್ಗೆ ಕನಕಪುರದ ನಾನಾ ಭಾಗಗಳಲ್ಲಿಂದ ಆಗಮಿಸಿದ ಮುಸ್ಲೀಮರು ಇಲ್ಲಿನ ಈದ್ಗಾ ಮೈದಾನದಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ಕೋರಿದರು.ಪೋಟೊ೧೭ಕೆಸಿಪಿಟಿ೧:

ರಾಮನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯವದವರು ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಪೋಟೋ೧೭ಕೆಸಿಪಿಟಿ೨:

ಚನ್ನಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಬಕ್ರೀದ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದರು.