ತ್ಯಾಗ, ಸಹನೆ, ಪರಿಶ್ರಮ ಸಾರುವ ಬಕ್ರೀದ್: ಖಾದರಸಾಬ್ ಮುಲ್ಲಾ

| Published : Jun 18 2024, 12:50 AM IST

ಸಾರಾಂಶ

ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಧರ್ಮಗುರು ಖಾದರಸಾಬ್ ಮುಲ್ಲಾ ಹೇಳಿದರು.

ಡಂಬಳ: ಬಕ್ರೀದ್ ತ್ಯಾಗ, ಬಲಿದಾನಗಳ ಸಂಕೇತವಾಗಿದೆ. ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದ್‌ ಇತಿಹಾಸ ವಿಶ್ವದ ಜನತೆಗೆ ಸಾರುತ್ತದೆ ಎಂದು ಧರ್ಮಗುರು ಖಾದರಸಾಬ್ ಮುಲ್ಲಾ ಹೇಳಿದರು.

ಡಂಬಳ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಈದ್-ಉಲ್-ಅಧಾ, ಅರಾಫತ್ ದಿನವಾದ ಹಜ್‌ನ ಮುಖ್ಯ ಆಚರಣೆಯ ಪ್ರತೀಕ ಆಚರಿಸಲಾಗುವ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಹೇಳಿದರು.

ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹುವಿನ ಆಪ್ತರು. ಅಲ್ಲಾಹು ಒಡ್ಡಿದ ಹಲವು ಬಗೆಯ ಪರೀಕ್ಷೆಗಳಲ್ಲಿ ಜಯಿಸಿದವರು. ಅಲ್ಲಾಹುವಿನ ಇಚ್ಛೆಯಂತೆ ಎಲ್ಲ ಪ್ರೀತಿಯ ವಸ್ತುಗಳನ್ನು ತ್ಯಾಗ ಮಾಡಿದವರು ಎಂದು ನಂಬಲಾಗುತ್ತದೆ. ಒಂದು ದಿನ ಇಬ್ರಾಹಿಂ ಅವರ ಕನಸಿನಲ್ಲಿ ಬಂದ ಅಲ್ಲಾಹು ನಿನಗೆ ಅಮೂಲ್ಯ ಎನಿಸುವುದನ್ನು ನನಗೆ ಸಮರ್ಪಿಸು ಎಂದು ಆದೇಶಿಸುತ್ತಾರೆ. ಹೀಗಾಗಿ ತಮಗೆ ಅಮೂಲ್ಯವಾಗಿರುವ ಹಾಗೂ ಏಕೈಕ ಪುತ್ರ ಇಸ್ಮಾಯಿಲ್ ಅವರನ್ನು ಬಲಿ ನೀಡಲು ಇಬ್ರಾಹಿಂ ನಿರ್ಧರಿಸುತ್ತಾರೆ. ಇಸ್ಮಾಯಿಲ್ ಕತ್ತಿನ ಮೇಲೆ ಎಷ್ಟೇ ಸಲ ಕತ್ತಿ ಚಲಾಯಿಸಿದರೂ ಅದು ಹರಿಯುವುದಿಲ್ಲ. ಪುತ್ರ ವಾತ್ಸಲ್ಯದಿಂದ ಹೀಗಾಗುತ್ತಿದೆ ಎಂದುಕೊಂಡ ಇಬ್ರಾಹಿಂ ಅವರು ತಮ್ಮ ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡು ಕತ್ತಿ ಪ್ರಯೋಗಿಸುತ್ತಾರೆ. ಅಷ್ಟೊತ್ತಿಗೆ ಆತನ ಪರೀಕ್ಷೆ ನಿಲ್ಲಿಸಿದ್ದ ಅಲ್ಲಾಹು ಜಿಬ್ರಾಯಿಲ್‌ನನ್ನು ಕಳುಹಿಸಿರುತ್ತಾನೆ. ಜಿಬ್ರಾಯಿಲ್‌ ಅವರು ಬಂದು ಇಸ್ಮಾಯಿಲ್‌ ಅವರ ಜಾಗದಲ್ಲಿ ಕುರಿಯೊಂದನ್ನು ಇಟ್ಟಿರುತ್ತಾರೆ. ಇಬ್ರಾಹಿಂ ಕಣ್ತೆರೆದಾಗ ಅಲ್ಲಿ ಕುರಿಯ ಬಲಿ ನಡೆದಿತ್ತು. ಅಲ್ಲಾಹು ಒಡ್ಡಿದ ಸತ್ವ ಪರೀಕ್ಷೆಯನ್ನು ಇಬ್ರಾಹಿಂ ಗೆದ್ದಿದ್ದರು. ಅಂದಿನಿಂದ ಬಲಿ ಕರ್ಮ ಇಸ್ಲಾಮಿನ ಭಾಗವಾಗಿದ್ದು, ಬಕ್ರೀದ್ ದಿನ ಪ್ರಾಣಿ ಬಲಿ ನೀಡಲಾಗುತ್ತಿದೆ ಎಂದು ಬಕ್ರೀದ್ ಆಚರಣೆಯ ಹಿನ್ನೆಲೆಯ ಕುರಿತು ಹೇಳಿದರು.

ಪ್ರಾರ್ಥನೆಯಲ್ಲಿ ಅಂಜುಮನ್ ಅಧ್ಯಕ್ಷ ಬಶೀರಹಮ್ಮದ ತಾಂಬೋಟಿ, ಖಾಜಾಹುಸೇನ ಹೋಸಪೇಟಿ, ಮೋಹದ್ದೀನ್‌ ಅಳವುಂಡಿ, ಅಲ್ಲಿಸಾಬ್‌ ಸರಕಾವಾಸ, ಹುಸೇನಸಾಬ್‌ ಮೂಲಿಮನಿ, ನೂರಹಮ್ಮದ ಸರಕಾವಾಸ, ಬುಡ್ನೆಸಾಬ ಜಲಾಲನವರ, ಬಾಬುಸಾಬ ಸರಕಾವಾಸ, ಜಾಕೀರ ಮೂಲಿಮನಿ, ಅಲ್ಲಾವುದ್ದೀನ್ ಹೊಂಬಳ, ಮಹಮ್ಮದ ರಫೀಕಸಾಬ್‌ ಹೊಸಪೇಟಿ, ಹುಸೇನಸಾಬ ಹೊಸಬಾವಿ, ರಜಾಕಸಾಬ ದೊಡ್ಡಮನಿ, ಪೀರಸಾಬ ಮಕಾಂದಾರ, ಬುಡ್ನೆಸಾಬ ಅತ್ತಾರ, ರಾಯಸಾಬ ಕಾಸ್ತಾರ, ಇಬ್ರಾಹಿಂಸಾಬ ಸರಕಾವಾಸ, ರಜಾಕಸಾಬ ತಾಂಬೋಟಿ, ರಫೀಕ ಮನಿಯಾರ, ಚಾಂದಸಾಬ ಮಿರ್ಜಾನವರ, ಬಾಬುಸಾಬ ಸರಕಾವಾಸ, ಎಂ.ಆರ್. ಆಲೂರ, ಇಬ್ರಾಹಿಂ ಹೊಸಪೇಟಿ ಇದ್ದರು.