ಇಂದಿನ ಮಕ್ಕಳಿಗೆ ಬಾಲಗೋಕುಲ ಶಿಕ್ಷಣ ಅನಿವಾರ್ಯ

| Published : Jan 13 2025, 12:46 AM IST

ಸಾರಾಂಶ

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ತಮಟಕಲ್ಲು ವಿದ್ಯಾಸಿರಿ ಮಾಂಟೆಸ್ಸರಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾಸಿರಿ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ:

ಇಂದಿನ ಮಕ್ಕಳು ಮುಂದಿನ ಸಮಾಜದ ಸತ್ಕಾರ್ಯಕ್ಕಾಗಿ ದೊರಕಬೇಕಾದರೆ ಬಾಲ ಗೋಕುಲ ಶಿಕ್ಷಣ ಅನಿವಾರ್ಯ. ನಮ್ಮ ಮಕ್ಕಳನ್ನು ವಿಶ್ವದ ಶ್ರೇಷ್ಠ ನಾಗರೀಕರಾಗಿ ರೂಪಿಸಲು ಸಾಮಾಜಿಕ ಕಳಕಳಿಯುಳ್ಳ ಬಾಲಗೋಕುಲ ಶಿಕ್ಷಣದಿಂದ ಮಾತ್ರ ಸಾಧ್ಯ ಅಂತಹ ಸಂಸ್ಕಾರ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ವಿದ್ಯಾಸಿರಿ ಶಾಲೆಯ ಕಾರ್ಯ ಶ್ಲಾಘನೀಯ ಎಂದು ಬಾಲಗೋಕುಲ ಸಂಘಟನೆಯ ಪ್ರಾಂತ ಪ್ರಮುಖರಾದ ಉಮೇಶ್ ಜೀ ಅಭಿಪ್ರಾಯ ಪಟ್ಟರು.

ನಗರದ ತರಾಸು ರಂಗ ಮಂದಿರದಲ್ಲಿ ತಮಟಕಲ್ಲು ವಿದ್ಯಾಸಿರಿ ಮಾಂಟೆಸ್ಸರಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿದ್ಯಾಸಿರಿ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಪಾರ್ಥಲಿಂಗಪ್ಪ ಮಾತನಾಡಿ, ಸಶಕ್ತ ಸಮಾಜದ ಮೂಲಾಧಾರವು ಪ್ರೀತಿ ಮತ್ತು ಸೇವೆಯಾಗಿದೆ. ನೈತಿಕ ವೌಲ್ಯ ಕುಸಿಯುತ್ತಿರುವ ಇಂದಿನ ವರ್ತಮಾನದಲ್ಲಿ ಸಾಮಾಜಿಕ ಅಧ:ಪತನ ಉಂಟಾಗುತ್ತಿದ್ದು, ತಡೆಯಲು ಶಾಲೆಗಳಲ್ಲಿ ಮಕ್ಕಳಿಗೆ ಮಾನವೀಯ ವೌಲ್ಯ ಬೆಳೆಸುವ ಸಾಂಸ್ಕೃತಿಕ ಶಿಕ್ಷಣ ನೀಡಬೇಕಿದೆ. ಮಕ್ಕಳ ಚಾರಿತ್ರ್ಯಕ್ಕೆ ಮಹತ್ವ ಕೊಡುವ ದೇಶಭಕ್ತರನ್ನು ರೂಪಿಸುವ, ಆಧ್ಯಾತ್ಮಿಕ, ಸಾಂಸ್ಕೃತಿಕ ಆದರ್ಶವನ್ನು ಮೈಗೂಡಿಸುವ ಶಿಕ್ಷಣವಿಂದು ಭಾರತಕ್ಕೆ ಬೇಕಾಗಿದೆ. ಅಂತಹ ಮಹತ್ತರ ಕಾರ್ಯದತ್ತ ವಿದ್ಯಾಸಿರಿ ಶಾಲೆ ಹೆಜ್ಜೆ ಇಟ್ಟಿದೆ.ಇದಕ್ಕೆ ಮಕ್ಕಳ ಪೋಷಕರ ಸಹಕಾರ ಅಗತ್ಯವಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಟಿ.ಗಂಗಾ ನೇತೃತ್ವದಲ್ಲಿ ಮಕ್ಕಳು ಪ್ರದರ್ಶಿಸಿದ ಯಕ್ಷಗಾನ, ಸಾಮಾಜಿಕ ಜಾಲತಾಣದ ಬಗ್ಗೆ ಜಾಗೃತಿ ಮೂಡಿಸುವ ನಾಟಕ, ಶ್ರೀ ಕೃಷ್ಣನ ಬಾಲಲೀಲೆಗಳ ರೂಪಕ ಸೇರಿ ಚಿಣ್ಣರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಈ ವೇಳೆ ಶಾಲೆಯ ಶಿಕ್ಷಕಿಯರಾದ ತನುಜಾ, ಭಕ್ತಿ, ಅಮೂಲ್ಯ, ಚಂದನ, ರೇಣುಕಾ, ನಾಗವೇಣಿ, ತೊಷಿಕಾರಾಣಿ ಮುಂತಾದವರು ಹಾಜರಿದ್ದರು.