ನಗರಸಭೆಗೆ ಅಧ್ಯಕ್ಷರಾಗಿ ಬಾಲಕೃಷ್ಣ ಅವಿರೋಧ ಆಯ್ಕೆ

| Published : Jul 17 2025, 12:30 AM IST

ಸಾರಾಂಶ

ಹಿರಿಯೂರು ನಗರಸಭೆಯ ಅಧ್ಯಕ್ಷ ಹುದ್ದೆಗೆ ನಡೆದ ಚುನಾವಣೆಯಲ್ಲಿ 10ನೇ ವಾರ್ಡ್ ನ ಬಾಲಕೃಷ್ಣ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಹಿರಿಯೂರು ನಗರಸಭೆಗೆ ನೂತನ ಅಧ್ಯಕ್ಷರಾಗಿ 10ನೇ ವಾರ್ಡ್ ನ ಬಾಲಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ.

ಬುಧವಾರ ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಬೇರೆ ಆಕಾಂಕ್ಷಿಗಳು ಯಾರೂ ಸಹ ನಾಮಪತ್ರ ಸಲ್ಲಿಸದಿದ್ದರಿಂದ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಅವರು ಬಾಲಕೃಷ್ಣರವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದರು.

ಬಿಜೆಪಿ ಚಿಹ್ನೆಯಡಿ ಗೆದ್ದು ನಗರಸಭೆ ಸದಸ್ಯರಾಗಿದ್ದ ಬಾಲಕೃಷ್ಣ ಆನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರ ಜತೆಯಲ್ಲಿ ಕಾಂಗ್ರೆಸ್ ಪಕ್ಷದತ್ತ ವಾಲಿದ್ದರು. ಇದೀಗ ಅದೃಷ್ಟವೆಂಬಂತೆ ನಗರಸಭೆ ಅಧ್ಯಕ್ಷ ಹುದ್ದೆಯೂ ಒಲಿದಿದ್ದು ವಿಶ್ವಕರ್ಮ ಜನಾಂಗಕ್ಕೆ ಮೊದಲ ಬಾರಿಗೆ ನಗರಸಭೆಯಲ್ಲಿ ಅಧಿಕಾರ ಸಿಕ್ಕಂತಾಗಿದೆ.

ಬಿಸಿಎಂ ಎ ಗೆ ಮೀಸಲಾಗಿದ್ದ ಅಧ್ಯಕ್ಷ ಹುದ್ದೆಗೆ ಅಜಯ್ ಕುಮಾರ್ ಅವರು ರಾಜೀನಾಮೆ ನೀಡಿದ ನಂತರ ಅಧ್ಯಕ್ಷ ಹುದ್ದೆಗೆ ಮೂರ್ನಾಲ್ಕು ಸದಸ್ಯರು ಪ್ರಯತ್ನ ನಡೆಸಿದರಾದರೂ ಸಹ ಕೊನೆಗೆ ಸಚಿವರ ಅಣತಿಯಂತೆ ಸದಸ್ಯರುಗಳು ಬಾಲಕೃಷ್ಣರ ಬೆನ್ನಿಗೆ ನಿಂತರು. ಮೂರೂವರೆ ತಿಂಗಳಿನ ಅವಧಿಯ ಅಧ್ಯಕ್ಷ ಹುದ್ದೆಗೆ ಬಾಲಕೃಷ್ಣರವರು ಆಯ್ಕೆಯಾದ ನಂತರ ನಗರಸಭೆ ಮುಂಭಾಗ ಪಟಾಕಿ ಸಿಡಿಸಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿ ನಗರದ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಬಾಲಕೃಷ್ಣ, ಸಚಿವ ಡಿ.ಸುಧಾಕರ್ ಅವರ ಆಶೀರ್ವಾದದಿಂದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿದ್ದೇನೆ. ಬಿಜೆಪಿ ಚಿಹ್ನೆಯಿಂದ ಗೆದ್ದವನು ಎಂಬ ಆರೋಪ ಮಾಡುವವರಿಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಗೊತ್ತಿಲ್ಲವಾ? ಸುಮ್ಮನೆ ಆಪಾದನೆ ಮಾಡುತ್ತಾರೆ. ಯಾವುದೇ ಇರಲಿ. ಇರುವ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ವಿಶ್ವಕರ್ಮ ಸಮಾಜದ ಮೇಲೆ ವಿಶ್ವಾಸವಿಟ್ಟು ರಾಜಕೀಯ ಅಧಿಕಾರ ನೀಡಿರುವ ಸಚಿವರಿಗೆ ಅಭಾರಿಯಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ಪೌರಾಯುಕ್ತ ಎ ವಾಸಿಂ, ಡಿವೈಎಸ್‌ಪಿ ಶಿವಕುಮಾರ್, ನಗರಸಭೆ ಉಪಾಧ್ಯಕ್ಷೆ ಮಂಜುಳಾ, ನಗರಸಭೆ ಸದಸ್ಯರಾದ ಶಿವರಂಜಿನಿ, ಚಿತ್ರಜಿತ್ ಯಾದವ್, ಬಿ.ಎನ್.ಪ್ರಕಾಶ್, ವಿಠ್ಠಲ ಪಾಂಡುರಂಗ, ಜಗದೀಶ್, ಸಮಿವುಲ್ಲಾ, ಶಿವಕುಮಾರ್, ಮುಖಂಡರಾದ ಖಾದಿ ರಮೇಶ್, ಸಾದತ್ ವುಲ್ಲಾ, ಜಿ ಎಲ್ ಮೂರ್ತಿ, ಕಲ್ಲಟ್ಟಿ ಹರೀಶ್ ಮುಂತಾದವರು ಹಾಜರಿದ್ದರು.

ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಸಚಿವರ ರಾಜಿ ಇಲ್ಲ:

ಸಾಮಾಜಿಕ ನ್ಯಾಯ ಪರಿಪಾಲನೆಯಲ್ಲಿ ಸಚಿವ ಡಿ.ಸುಧಾಕರ್ ಅವರು ಎಂದೂ ರಾಜಿ ಆಗಿಲ್ಲ. ಸರ್ವ ಸಮುದಾಯಗಳಿಗೂ ಅವಕಾಶ ಸಿಕ್ಕಾಗಲೆಲ್ಲಾ ರಾಜಕೀಯ ಅಧಿಕಾರ ನೀಡಿದ್ದಾರೆ. ನಗರಸಭೆಗೆ ಈಗಾಗಲೇ ಈಡಿಗ, ಮುಸ್ಲಿಂ, ಗಂಗಾ ಮತಸ್ಥ ಜನಾಂಗದ ಅಧ್ಯಕ್ಷರು ಆಗಿ ಹೋಗಿದ್ದಾರೆ. ಒಬ್ಬೇ ಒಬ್ಬ ನಗರಸಭೆ ಸದಸ್ಯರನ್ನೂ ನೋಡದಿದ್ದ ವಿಶ್ವಕರ್ಮ ಜನಾಂಗದಲ್ಲಿ ಈ ಅವಧಿಯಲ್ಲಿ ಒಬ್ಬರು ಸದಸ್ಯರಾಗಿದ್ದರು. ಇದೀಗ ಆ ಜನಾಂಗದ ಸದಸ್ಯನಿಗೆ ಅಧ್ಯಕ್ಷ ಹುದ್ದೆ ನೀಡುವುದರ ಮೂಲಕ ರಾಜಕೀಯ ಶಕ್ತಿ ತುಂಬಿದ್ದಾರೆ.