ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿ.ಪ್ರಾ. ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವ ಸಂಭ್ರಮವು ಡಿ. 14ರಂದು ನಡೆಯಲಿದೆ.

ಬೆಳ್ತಂಗಡಿ: ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿ.ಪ್ರಾ. ಮತ್ತು ಪ್ರೌಢಶಾಲೆಯ ಅಮೃತ ಮಹೋತ್ಸವ ಸಂಭ್ರಮವು ಅಮೃತ ಮಹೋತ್ಸವ ಸಮಿತಿ, ಹಳೆ ವಿದ್ಯಾರ್ಥಿಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಹಾಗೂ ಬಳಂಜ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಕಾಠ್ಯಕ್ರಮಗಳೊಂದಿಗೆ ಡಿ. 14ರಂದು ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಕೆ.ಚಂದ್ರಶೇಖರ್ ತಿಳಿಸಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯೆ ಸುಲಭದಲ್ಲಿ ದೊರಕಬೇಕು ಎಂಬ ದೂರದೃಷ್ಟಿಯಿಂದ ಗ್ರಾಮೀಣ ಪ್ರದೇಶದಲ್ಲಿ ಬಳಂಜದ ಪಟೇಲರಾಗಿದ್ದ ಕಿನ್ನಿ ಯಾನೆ ಕೋಟಿ ಪಡಿವಾಳರು ಗಣ್ಯರ ನೆರವಿನೊಂದಿಗೆ ಶಾಲಾಆರಂಭಿಸಿದ್ದು ಶಾಲೆಯು ಸಾವಿರಾರು ಮಂದಿಗೆ ವಿದ್ಯೆ ಕಲಿಸಿ, ಗೌರವ ಸ್ಥಾನ ನೀಡಿದೆ. ಇದೀಗ ಅಮೃತ ಸಂಭ್ರಮದಲ್ಲಿ ಶಾಲೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸಿ ಗುಣ ಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶನಿವಾರ ಬೆಳಗ್ಗೆ 9.30ಕ್ಕೆ ಸಮಾರಂಭವನ್ನು ರಾಜ್ಯಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ವಿಧಾನಸಭಾಧ್ಯಕ್ಷ ಯು.ಟಿ.ಖಾದ‌ರ್, ಸಚಿವರಾದ ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಐವನ್‌ ಡಿಸೋಜಾ, ಪ್ರತಾಪಸಿಂಹ ನಾಯಕ್, ಮಂಜುನಾಥ ಭಂಡಾರಿ, ಡಾ. ಧನಂಜಯ ಸರ್ಜಿ, ಕಿಶೋರ್ ಕುಮಾರ್ ಪುತ್ತೂರು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಬಳಂಜ ಗ್ರಾ.ಪಂ. ಅಧ್ಯಕ್ಷೆ ಶೋಭಾ ಕುಲಾಲ್ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ 2.30ಕ್ಕೆ ಅಂಗನವಾಡಿ ಮಕ್ಕಳಿಂದ ನೃತ್ಯ ಪ್ರದರ್ಶನ, ಬಳಂಜ ಶಾಲಾ ಮಕ್ಕಳಿಂದ ಮಕ್ಕಳ ಸಂಭ್ರಮ, ಸಂಜೆ 6ಗಂಟೆಗೆ ಪುದರ್ ದೀತಿಜಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.14ರಂದು ಬೆಳಗ್ಗೆ 9.30ಕ್ಕೆ ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಧ್ವಜಾರೋಹಣ ಮಾಡಲಿದ್ದು, ಆಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3ರಿಂದ ಮಹಿಳಾ ಮಂಡಳಿ, ಯುವಕಮಂಡಲ, ಹಳೆವಿದ್ಯಾರ್ಥಿ ಗಳು, ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾ ರ್ಯಕ್ರಮ, ತೆಲಿಕೆದ ಪರ್ಬ, ಸಂಗೀತ ಸುಧಾ, ಅರೆಹೊಳೆ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಪ್ರದರ್ಶನಗೊಳ್ಳಲಿದೆ ಎಂದರು.

ಸುರೇಶ್ ಶೆಟ್ಟಿ ಕುರಲ್ಯ, ರತ್ನಾಕರ ಪೂಜಾರಿ, ಹರೀಶ್ ವೈ. ಸುಕೇಶ್, ಮುಖ್ಯಶಿಕ್ಷಕ ರಂಗಸ್ವಾಮಿ, ಸುಲೋಚನಾ ಉಪಸ್ಥಿತರಿದ್ದರು.