ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಂಡ್ಯದಲ್ಲಿ 29ರಿಂದ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಉಪನ್ಯಾಸಕರಾಗಿ ಜಿಲ್ಲೆಯ ಹಿರಿಯ ಸಾಹಿತಿ ಹಾಗೂ ವಕೀಲ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಆಯ್ಕೆಯಾಗಿದ್ದಾರೆ. ಅವರು ‘ಭಾರತ ಸಂವಿಧಾನ 75’ರ ಕುರಿತಾಗಿ ಇವರು ಉಪನ್ಯಾಸ ಮಂಡಿಸಲಿದ್ದಾರೆ.1954ರ ಮೇ 5ರಂದು ಕಂಜರ್ಪಣೆ ಪರಮೇಶ್ವರಯ್ಯರವರ ಪುತ್ರನಾಗಿ ಜನಿಸಿದ ಇವರು, ತಮ್ಮ ವಿದ್ಯಾಭ್ಯಾಸವನ್ನು ಸುಳ್ಯ, ಪುತ್ತೂರಿನಲ್ಲಿ ಮುಗಿಸಿ ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿಯನ್ನು, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯನ್ನು ಪಡೆದಿದ್ದಾರೆ. ವಕೀಲರಾಗಿ 1976ರಿಂದ ಕೊಡಗಿನಲ್ಲಿ ಪ್ರಸಿದ್ಧರಾಗಿದ್ದಾರೆ. ಮಡಿಕೇರಿ ಸರ್ಕಾರಿ ಹಿರಿಯ ಕಾಲೇಜಿನಲ್ಲಿ ಒಂದು ವರ್ಷ ಇಂಗ್ಲಿಷ್ ಉಪನ್ಯಾಸಕರಾಗಿದ್ದರು.
ಸಾಹಿತ್ಯ, ಸಂಗೀತ, ಕ್ರೀಡೆ ಇವುಗಳಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಮೂರು ಕವನಗಳು, ಒಂದು ಕಥಾ ಸಂಕಲನ, ಮೂರು ಬದುಕು ಬರಹದ ಕೃತಿಗಳು, ಒಂದು ಸಾಮಾಜಿಕ ಸಾಹಿತಿಕ ಲೇಖನಗಳ ಸಂಗ್ರಹ, ಒಂದು ಕಾನೂನು ನ್ಯಾಯ ಸಂಬಂದಿ ಲೇಖನಗಳ ಸಂಗ್ರಹ, ಒಂದು ಸಾಹಿತ್ಯ ಪ್ರಬಂಧ, ಒಂದು ಲಲಿತ ಪ್ರಬಂಧ ಹೀಗೆ ಸಾಹಿತ್ಯ ಸೇವೆಯಲ್ಲಿ ತೊಡಗಿದ್ದಾರೆ.ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ವಿಲ್ ದುರಂತ ನಾಗರಿಕತೆಯ ಕಥೆ ರೂಪಿಸಿದ್ದಾರೆ. ರಾಜ್ಯಾದ್ಯಂತ ಪ್ರವಾಸಗಳು, ಕನ್ನಡದ ಬಹುತೇಕ ಎಲ್ಲ ಪತ್ರಿಕೆಗಳಲ್ಲಿ ವಿಮರ್ಶೆಯು ಸೇರಿದಂತೆ ಎಲ್ಲ ಬಗೆಯ ಲೇಖನಗಳು, ಕತೆ, ಕವಿತೆ ಪ್ರಕಟಣೆ ಮಾಡಿದ್ದಾರೆ. ನಾಲ್ಕು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ್ದಾರೆ. ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನದ ಸಂದರ್ಶನಗಳಲ್ಲಿ ಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಪ್ರಕಟನಾ ಸಮಿತಿಯ ಸದಸ್ಯರು ಕೂಡ ಆಗಿದ್ದರು.