ಬಲ್ಡೋಟಾ ಕಾರ್ಖಾನೆ ಸಲುವಾಗಿ ರೈತರು ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡು 13 ವರ್ಷ ಗತಿಸಿದರೂ ರೈತರಿಗೆ ಉದ್ಯೋಗ ಕೊಟ್ಟಿಲ್ಲ. ಜೀವನೋಪಾಯಕ್ಕಾಗಿ ಆಧಾರವಾದ ಜಾನುವಾರುಗಳಿಗೆ ಏಕೈಕ ಕುಡಿಯುವ ನೀರಿನ ಮೂಲವನ್ನು ಕಿತ್ತುಕೊಂಡು ಈಗ ಗೂಂಡಾಗಿರಿ ಮಾಡುವ ಕಂಪನಿ ಅಟ್ಟಹಾಸ ಮಿತಿಮೀರಲಿದೆ.
ಕೊಪ್ಪಳ:
ಬಲ್ಡೋಟಾ ಎಂಎಸ್‌ಪಿಎಲ್ ಕಾರ್ಖಾನೆ ಸಿಬ್ಬಂದಿ ಶುಕ್ರವಾರ ಕುರಿಗಾಹಿ ದೇವಪ್ಪ ಹಾಲಳ್ಳಿ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಖಂಡಿಸಿ, ಹಲ್ಲೆಗೊಳಗಾದವರಿಗೆ ನ್ಯಾಯ ಒದಗಿಸುವಂತೆ ಹಾಗೂ ಕಂಪನಿ ವಿಸ್ತರಣೆ ರದ್ದುಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರು ಮಾತನಾಡಿ, ಸಾರ್ವಜನಿಕರು ಬಸಾಪುರ ಕೆರೆಯಲ್ಲಿನ ನೀರು ಬಳಕೆ ಮಾಡಲು ಸುಪ್ರೀಂಕೋರ್ಟ್ ಆದೇಶವಿದ್ದರೂ ಕುರಿಗಳು ಹಾಗೂ ಜಾನುವಾರುಗಳಿಗೆ ನೀರು ಕುಡಿಸಲು ಹೋದ ಕುರಿಗಾಹಿ ಮತ್ತು ದನಗಾಹಿಗಳ ಮೇಲೆ ಕಂಪನಿ ನೇಮಿಸಿರುವ ಭದ್ರತಾ ಸಿಬ್ಬಂದಿ ಹೆಸರಿನ ಗೂಂಡಾಗಳು ಕಂಪನಿ ಮಾಲೀಕನ ಪ್ರಚೋದನೆಯಿಂದ ಮನಬಂದಂತೆ ಹಲ್ಲೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು.
ಈ ಕಂಪನಿ ಸಲುವಾಗಿ ರೈತರು ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡು 13 ವರ್ಷ ಗತಿಸಿದರೂ ರೈತರಿಗೆ ಉದ್ಯೋಗ ಕೊಟ್ಟಿಲ್ಲ. ಜೀವನೋಪಾಯಕ್ಕಾಗಿ ಆಧಾರವಾದ ಜಾನುವಾರುಗಳಿಗೆ ಏಕೈಕ ಕುಡಿಯುವ ನೀರಿನ ಮೂಲವನ್ನು ಕಿತ್ತುಕೊಂಡು ಈಗ ಗೂಂಡಾಗಿರಿ ಮಾಡುವ ಕಂಪನಿ ಅಟ್ಟಹಾಸ ಮಿತಿಮೀರಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿದೆ. ಯಾವುದೇ ಕಾರಣಕ್ಕೂ ಈ ಕಾರ್ಖಾನೆ ವಿಸ್ತರಣೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಕುರಿಗಾಯಿ ದೇವಪ್ಪ ಹಾಲಳ್ಳಿ ಮೇಲೆ ದಾಳಿ ಮಾಡಿದವರನ್ನು ಶಿಕ್ಷೆಗೊಳಪಡಿಸಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಹಕ್ಕೊತ್ತಾಯಗಳು:ಬಲ್ಡೋಟಾ ಎಂಎಸ್‌ಪಿಎಲ್-ಬಿಎಸ್‌ಪಿಎಲ್ ವಿಸ್ತರಣೆ ರದ್ದುಗೊಳಿಸುವುದು, ಕುರಿಗಾಹಿ-ದನಗಾಹಿ ದೇವಪ್ಪ ಹಾಲಳ್ಳಿ ಮೇಲೆ ಹಲ್ಲೆ ನಡೆಸಿದ ಕಂಪನಿ ಸಿಬ್ಬಂದಿಗಳ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮಾಲೀಕನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ, ಬಸಾಪೂರ ಸ.ನಂ. 143ರ 44.35 ಎಕರೆ ಕೆರೆಯನ್ನು ನ್ಯಾಯಾಲಯದ ಆದೇಶದಂತೆ ಬಳಸಲು ಮುಕ್ತಗೊಳಿಸಬೇಕು. ಬಸಾಪೂರ ಗ್ರಾಮದಿಂದ ಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಂಪೌಂಡ್ ನಿರ್ಮಿಸಿದ್ದು ತೆರವುಗೊಳಿಸಬೇಕು. ಕೆರೆ ಏರಿಗೆ ನೇರವಾಗಿ ಮುಖ್ಯದ್ವಾರ ನಿರ್ಮಿಸಿ ಗೇಟ್ ಅಳವಡಿಸಿದ್ದರಿಂದ ಭಾರಿ ವಾಹನ, ಟಿಪ್ಪರ್ ಓಡಾಟ ಮಾಡುತ್ತಿದ್ದು ಕೆರೆಗೆ ಸುಗಮವಾಗಿ ಹೋಗಿ ಬರಲು ಆಗುತ್ತಿಲ್ಲ. ಆದ್ದರಿಂದ ಗೇಟ್ ತೆರವು ಮಾಡಬೇಕು. ಕೆರೆಯ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ 10ರಿಂದ 15 ಎಕರೆ ಕೆರೆ ಮುಚ್ಚಿ ರಸ್ತೆ ಮಾಡಿಕೊಂಡಿದ್ದು ತೆರವುಗೊಳಿಸಬೇಕು. ಕಾರ್ಖಾನೆ ವಿಸ್ತರಣೆಗೆ ಶೀಘ್ರವಾಗಿ ಶಾಶ್ವತ ತಡೆ ನೀಡಿ ಆದೇಶಿಸಿ ಭಾಗ್ಯನಗರದ ಮೇಲಿನ ಪರಿಣಾಮ ತಪ್ಪಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ವಿಠಲ್ ಚೌಗಲ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರ, ಕೆ.ಬಿ. ಗೋನಾಳ, ಶರಣು ಗಡ್ಡಿ, ಮಂಜುನಾಥ ಗೊಂಡಬಾಳ, ಬಸವರಾಜ ಶೀಲವಂತರ, ಎಸ್.ಎ. ಗಫಾರ್, ಕಾಶಪ್ಪ ಛಲವಾದಿ, ಶರಣು ಶೆಟ್ಟರ, ಮಕಬುಲ್, ಮಂಗಳೇಶ ರಾಥೋಡ, ಹನುಮಂತ ಕಟಗಿ, ಗಾಳೆಪ್ಪ ಮುಂಗೋಲಿ, ಮುದುಕಪ್ಪ ಮೇಸ್ತ್ರಿ, ಭೀಮಶೇನ್ ಕಲಿಕೇರಿ, ಕನಕಪ್ಪ ಇಂದ್ರಿಗಿ, ತಿಪ್ಪಯ್ಯ ಹಿರೇಮಠದನ, ಸಿದ್ದಪ್ಪ ಅರಸನ್ನಕೇರಿ, ಬಸವರಾಜ್ ಮುಂಡರಗಿ, ಅಯ್ಯಪ್ಪ, ಭರಮಣ್ಣ ಗುರಿಕಾರ, ಬಾಳಪ್ಪ, ಕೃಷ್ಣಪ್ಪ, ಮಹೇಶಪ್ಪ, ಹನುಮಂತಪ್ಪ ಚಿಂಚಲಿ, ಹನುಮಂತ ಕೆರೇಹಳ್ಳಿ, ಟಿ. ರತ್ನಾಕರ್, ಶಿವಪ್ಪ ದೇವರಮನಿ, ಸೋಮಪ್ಪ ಇರಕಲ್‌ಗಡ, ಅಮರೇಶ ಕರಡಿ, ಯಮನೂರಪ್ಪ, ರಾಜು ಭೋವಿ, ತಿಪ್ಪಯ್ಯ ಹಿರೇಮಠ, ಗಣೇಶ ಬಗನಾಳ, ಫಕೀರಪ್ಪ, ಬಸವರಾಜ್ ಹೂಗಾರ, ಮಂಜುನಾಥ, ನಾಗರಾಜ, ಗವಿಸಿದ್ದಪ್ಪ ಪುಟಗಿ, ದ್ಯಾಮಣ್ಣ ಗುಡ್ಲಾನೂರ, ನಾಗರತ್ನ ಮುಂತಾದ ನೂರಾರು ಜನ ಭಾಗವಹಿಸಿದ್ದರು.