ಸಾರಾಂಶ
ಕೋಕಿಲಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪಿಎಸಿಎಸ್) ನೂತನ ಅಧ್ಯಕ್ಷರಾಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಕೆ. ವೆಂಕಟೇಶ್ ಕಾಂಗ್ರೆಸ್ ಬೆಂಬಲದೊಂದಿಗೆ ಚುನಾವಣೆಯಲ್ಲಿ ಹಾಗೂ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಕೋಕಿಲಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.ಪಟ್ಟಣದ ಪಿಎಸಿಎಸ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.2ರಂದು ಚುನಾವಣೆ ನಡೆದಿದು ಚುನಾವಣೆಯಲ್ಲಿ 7 ಬಿಜೆಪಿ ಬೆಂಬಲಿತ, 5 ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದರು. ಗುರುವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಎಂ.ಉಮೇಶ್ ಕಲ್ಮಕ್ಕಿ, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಕೆ.ವೆಂಕಟೇಶ್ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಂ.ಡಿ. ರಾಜೇಶ್ ಮತ ಚಲಾಯಿಸಿದ್ದು, ಚುನಾವಣೆಯಲ್ಲಿ ಟಿ.ಎಂ.ಉಮೇಶ್ 6 ಮತ, ಕೆ.ಕೆ.ವೆಂಕಟೇಶ್ 7 ಮತಗಳನ್ನು ಪಡೆದರು. ಒಂದು ಮತ ಹೆಚ್ಚು ಪಡೆದ ಕೆ.ಕೆ.ವೆಂಕಟೇಶ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎಂ.ಸಿ.ವಸಂತ ಘೋಷಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಕೋಕಿಲಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಲಾಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಎಂ.ಸಿ.ವಸಂತ ಕಾರ್ಯನಿರ್ವಹಿಸಿದರು.ಚುನಾವಣೆ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಕೆ.ಕೆ.ವೆಂಕಟೇಶ್ ಮಾತನಾಡಿ, ಬಾಳೆಹೊನ್ನೂರು ಪಿಎಸಿಎಸ್ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಸಹಕಾರ ಸಂಸ್ಥೆಯಾಗಿದ್ದು, ಕೋಟ್ಯಂತರ ರೂಪಾಯಿಯ ವಾರ್ಷಿಕ ವಹಿವಾಟು ನಡೆಸುತ್ತಿದೆ. ರೈತರ, ಷೇರುದಾರರ ಸಹಕಾರದೊಂದಿಗೆ ನಾನು ಎರಡನೇ ಬಾರಿಗೆ ಸಂಸ್ಥೆಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಸಂಸ್ಥೆಯಲ್ಲಿ ರೈತರು, ಗ್ರಾಹಕರಿಗೆ ಬ್ಯಾಂಕಿಂಗ್ ವ್ಯವಹಾರಗಳನ್ನು ಇನ್ನಷ್ಟು ಉತ್ತಮವಾಗಿ ನಡೆಯಬೇಕಿದೆ. ರೈತರಿಗೆ ರಸಗೊಬ್ಬರಗಳನ್ನು ಸಕಾಲಕ್ಕೆ ಸರಿಯಾಗಿ ಸಮರ್ಪಕವಾಗಿ ಪೂರೈಸುವ ಅವಶ್ಯಕತೆಯಿದೆ.ಸಂಸ್ಥೆಯು ಹಲವಾರು ಮಾಜಿ ನಿರ್ದೇಶಕರು, ಅಧ್ಯಕ್ಷರ ಪರಿಶ್ರಮದಿಂದ ಉನ್ನತ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ನೂತನ ಆಡಳಿತ ಮಂಡಳಿಯು ಮುಂದುವರೆಸಿಕೊಂಡು ಹೋಗಲಿದೆ. ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಿಂದ ಅವಕಾಶ ದೊರೆಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿರ್ದೇಶಕರ ಬೆಂಬಲವನ್ನು ಕೋರಿದಾಗ ಕಾಂಗ್ರೆಸ್ ಸದಸ್ಯರು ಬೆಂಬಲವನ್ನು ನೀಡಿದ್ದಾರೆ. ಅವರ ಸಹಕಾರಕ್ಕೆ ಆಭಾರಿಯಾಗಿದ್ದೇನೆ ಎಂದರು.ನಿರ್ಗಮಿತ ಅಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಸೋಲು, ಗೆಲುವು ಸಹಜ. ಪ್ರಸ್ತುತ ಅಧ್ಯಕ್ಷ ಚುನಾವಣೆಯಲ್ಲಿ ಮತಗಳ ಅಂತರವಾಗಿರಬಹುದು. ಆದರೆ ಈ ಬಗ್ಗೆ ಯಾವುದೇ ಗೊಂದಲವಿಲ್ಲ.ಕಳೆದ ಹತ್ತು ವರ್ಷಗಳ ಕಾಲ ಬಾಳೆಹೊನ್ನೂರು ಪಿಎಸಿಎಸ್ ಅಧ್ಯಕ್ಷನಾಗಿ ರೈತರು, ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿದ ಆತ್ಮತೃಪ್ತಿಯಿದೆ. ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸಿ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುವಂತೆ ಮಾಡಲಾಗಿದೆ ಎಂದರು.
ನೂತನ ಉಪಾಧ್ಯಕ್ಷೆ ಕೋಕಿಲಮ್ಮ, ನಿರ್ದೇಶಕರಾದ ಕೆ.ಟಿ.ವೆಂಕಟೇಶ್, ಎಂ.ಎಸ್.ಅರುಣೇಶ್, ಎಂ.ಡಿ.ಕೃಷ್ಣಪ್ಪ, ಮಹಮ್ಮದ್ ಜುಹೇಬ್, ಕೆ.ಕೆ.ಗೌತಮ್, ಸಿ.ವಿ.ಸುನೀಲ್, ಆಶಾ, ಕೆ.ಆರ್.ಸತೀಶ್, ಎಚ್.ಡಿ.ಸತೀಶ್, ಸಂಘದ ಸಿಇಓ ಎಚ್.ಉಮೇಶ್, ಸಿಬ್ಬಂದಿ ಎಚ್.ಎಂ.ವೆಂಕಟೇಶ್, ಅಣ್ಣಪ್ಪ, ನಿತ್ಯ, ಚಿರಾಗ್, ಸತೀಶ್, ಕಿಶೋರ್ ಮತ್ತಿತರರು ಹಾಜರಿದ್ದರು.--- ಬಾಕ್ಸ್--
ಚುನಾವಣಾ ತಕರಾರುಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಫೆ.೨ರಂದು ನಡೆದ ಚುನಾವಣೆಯಲ್ಲಿ ಅನರ್ಹ ಮತದಾರರು ಹೈಕೋರ್ಟ್ ತಕರಾರು ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶವನ್ನು ತಡೆ ಹಿಡಿಯಲಾಗಿತ್ತು. ಬಳಿಕ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆದು ತಕರಾರು ಅರ್ಜಿ ತೆರವುಗೊಂಡ ಹಿನ್ನೆಲೆಯಲ್ಲಿ ಏ.೯ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಿತ್ತು. ಏ.೧೭ರ ಗುರುವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿಯಾದ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಅಧ್ಯಕ್ಷರ ಆಯ್ಕೆಯಾದರೆ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು.೧೭ಬಿಹೆಚ್‌ಆರ್ ೧: ಬಾಳೆಹೊನ್ನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಕೆ.ವೆಂಕಟೇಶ್, ಕೋಕಿಲಮ್ಮ ಅವರನ್ನು ನಿರ್ದೇಶಕರು ಅಭಿನಂದಿಸಿದರು.