ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ದಕ್ಷಿಣ ಕೊಡಗಿನ ವೆಸ್ಟ್ ನೆಮ್ಮಲೆ ಗ್ರಾಮದಲ್ಲಿ ಹುಲಿ ಸೆರೆಗೆ ಕೂಂಬಿಂಗ್ ಆಪರೇಷನ್ ನಡೆಸಿ ಹುಲಿಯನ್ನು ವಾಸ ಸ್ಥಾನ ಅರಣ್ಯಕ್ಕೆ ಕಳುಹಿಸಿದ ಯಶಸ್ವಿ ಕಾರ್ಯಾಚರಣೆಯ ಬೆನ್ನಲ್ಲೇ ಮತ್ತೊಂದು ಕಾರ್ಯಾಚರಣೆಗೆ ಶುರುವಾಗಿದೆ.ಹುಲಿ ಬಾಧಿತವಾಗಿರುವ ದಕ್ಷಿಣ ಕೊಡಗಿನ ಬಾಳೆಲೆ ವ್ಯಾಪ್ತಿಯಲ್ಲಿ ಜಾನುವಾರಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಸೆರೆ ಹಿಡಿಯಲು ಅನುಮತಿ ಸಹಿತ ಕಾರ್ಯಾಚರಣೆ ಶುಕ್ರವಾರ ಆರಂಭವಾಗಿದೆ.ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ನಾಗರಹೊಳೆ ಹುಲಿ ಸಂರಕ್ಷಣಾ ಮೀಸಲು ಪ್ರದೇಶದ ಸೀಮಾ, ಹುಣಸೂರು ವನ್ಯಜೀವಿ ಉಪ ವಿಭಾಗದ ಎಸಿಎಫ್ ಲಕ್ಷ್ಮಿಕಾಂತ್, ನಾಗರಹೊಳೆ ಪಶು ವೈದ್ಯಾಧಿಕಾರಿ ಡಾ. ರಮೇಶ್ ಹಾಗೂ ಆನೆಚೌಕೂರು ಆರ್‌ಎಫ್‌ಒ ದೇವರಾಜ್ ಇವರ ತಂಡ ಈಗಾಗಲೇ ಸ್ಥಳದಲ್ಲಿ ಬೋನ್ ಇರಿಸಿ ಹುಲಿ ಸೆರೆಗೆ ಕಾರ್ಯಾಚರಣೆಗೆ ಇಳಿದಿದೆ.
ಈಗಾಗಲೇ ಬಾಳೆಲೆ ವ್ಯಾಪ್ತಿಯ ದೇವನೂರು ಗ್ರಾಮ ಸುತ್ತಮುತ್ತ ಕಳೆದ ಒಂದೂವರೆ ತಿಂಗಳಿನಿಂದ ಏಳು ಜಾನುವಾರುಗಳನ್ನು ಹುಲಿ ಕೊಂದಿದ್ದು, ಜಾನುವಾರಗಳ ಮೇಲೆ ದಾಳಿ ನಡೆಸಿದ ಜಾಗದಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿ ಗುರುತು ಪತ್ತೆಯಾಗಿದೆ.ಹುಲಿ ಗಣತಿಯಲ್ಲಿ ದೊರೆತಿರುವ ಮಾಹಿತಿಯಂತೆ ಈ ಹುಲಿಯನ್ನು ‘ನಾಗರಹೊಳೆ ಯು 61’ ಎಂದು ಗುರುತಿಸಲಾಗಿದ್ದು, ಗಾತ್ರದಲ್ಲಿ ಸಣ್ಣದಾಗಿರುವ ಗಂಡು ಹುಲಿ ಎಂದು ಗೊತ್ತಾಗಿದೆ.
ಕಾರ್ಯಾಚರಣೆ ಆರಂಭದ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಹುಲಿಯಿಂದ ಜಾನುವಾರುಗಳ ಮೇಲೆ ನಿರಂತರ ದಾಳಿ ಹಿನ್ನೆಲೆ ಹುಲಿಯ ಕ್ಯಾಮರಾ ಚಿತ್ರ ಸೆರೆಯಾದ ಬೆನ್ನಲ್ಲೇ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ರಾಜ್ಯ ವನ್ಯಜೀವಿ ಪಿ.ಸಿ.ಸಿ.ಎಫ್ ಪುಷ್ಕರ್ ಅವರೊಂದಿಗೆ ವಿರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ಸಮಾಲೋಚನೆ ನಡೆಸಿದ್ದಾರೆ. ಹುಲಿ ಸೆರೆಗೆ ತಕ್ಷಣ ಅನುಮತಿಯನ್ನು ಕೊಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಶೋಕ್ ಮತ್ತು ಅಭಿಮನ್ಯು ಎಂಬ ಎರಡು ಕಾಡಾನೆಗಳು ಸ್ಥಳಕ್ಕೆ ಕಾರ್ಯಚರಣೆಗಾಗಿ ಕರೆತರಲಾಗಿದೆ. ಹುಲಿ ಗುರುತಾಗಿರುವುರಿಂದ ಹುಲಿ ಸೆರೆ ಕಾರ್ಯಾಚರಣೆ ಸುಲಭವಾಗಲಿದೆ. ವೆಸ್ಟ್ ನೆಮ್ಮಲೆಯಲ್ಲಿ ಹುಲಿ ಗುರುತಾಗಿರಲಿಲ್ಲ ಎಂದು ವಿವರಿಸಿದರು.ಈ ಹುಲಿಯನ್ನು ಆದಷ್ಟು ಬೇಗ ಸೆರೆ ಹಿಡಿದು ಸ್ಥಳೀಯ ಬೆಳೆಗಾರರು, ಕಾರ್ಮಿಕರ ಆತಂಕ, ಜಾನುವಾರು ಸಾಕಿರುವ ಮಾಲೀಕರಿಗೂ ಆತಂಕ ಉಂಟಾಗಿದ್ದು ಹುಲಿ ಸೆರೆಯಿಂದ ಸಮಸ್ಯೆ ನಿವಾರಣೆಯಾಗಲಿದೆ, ಈ ಕಾರ್ಯಚರಣೆಯು ‘ನೆಮ್ಮಲೆ ಹುಲಿ ಆಪರೇಷನ್’ನಂತೆ ಯಶಸ್ವಿ ಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿ.ಸಿ.ಎಫ್ ಸೀಮಾ ಅವರು ಮಾತನಾಡಿ ಹುಲಿ ಸೆರೆಗೆ ಸಕಲ ಸಿದ್ಧತೆ ಆಗಿದೆ. ಕೂಂಬಿಂಗ್ ನಡೆಸಿ ಹುಲಿಯ ಇರುವುವಿಕೆಯನ್ನು ಖಚಿತ ಮಾಡಿಕೊಳ್ಳಲಾಗುವುದು.ನಂತರ ಹುಲಿಯನ್ನು ಅರಣ್ಯಕ್ಕೆ ವಾಪಸು ಕಳುಹಿಸುವ ಕಾರ್ಯಾಚರಣೆ ನಡೆಸಲಾಗುವುದು. ಎರಡನೇ ಹಂತದ ಕಾರ್ಯಾಚರಣೆಯಾಗಿ ಬೋನ್ ಅಳವಡಿಸಿ ಜಾನುವಾರು ಕಳೆಬರ ಇರಿಸಿ ಹುಲಿ ಸೆರೆ ಹಿಡಿಯಲು ಮತ್ತು ಅರವಳಿಕೆ ಹಾರಿಸಿ ಸೆರೆ ಹಿಡಿಯುವ ಕಾರ್ಯ ಯೋಜನೆ ನಡೆಸಲಾಗುವುದು ಎಂದು ವಿವರಿಸಿದರು.ಈ ಸಂದರ್ಭ ಬಾಳೆಲೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅದೇಂಗಡ ವಿನು ಉತ್ತಪ್ಪ ಅವರು ಮಾತನಾಡಿ ಹುಲಿ ಸೆರೆಗೆ ಅನುಮತಿ ದೊರೆತ್ತಿರುವುದು ಸ್ವಾಗತಾರ್ಹ. ಆದಷ್ಟು ಬೇಗ ಹುಲಿ ಸೆರೆಯಾದರೇ ಜನರಿಗೆ ಸಮಾಧಾನವಾಗಲಿದೆ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು.