ಬಲಿಜ ಜನಾಂಗಕ್ಕೆ 2ಎ ಮೀಸಲಾತಿ ದೊರೆಯಬೇಕು

| Published : Mar 15 2025, 01:07 AM IST

ಸಾರಾಂಶ

ಸಮುದಾಯದ ಅಭಿವೃದ್ಧಿಗಾಗಿ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ಸರ್ಕಾರ ಜಾಗ ನೀಡಿದೆ, ಸಮುದಾಯದವರ ಸಹಕಾರ ಮತ್ತು ಸರ್ಕಾರದ ಅನುದಾನ ಪಡೆದು ಸಮುದಾಯ ಭವನವನ್ನು ನಿರ್ಮಿಸಲಾಗುವುದು. ಜಿಲ್ಲಾ ಕೇಂದ್ರದ ವಿದ್ಯಾರ್ಥಿಗಳ ಹಿತ ರಕ್ಷಣೆಗಾಗಿ ಯಾರ ಬಳಿಯೂ ಚಂದಾ ವಸೂಲಿ ಮಾಡದೆ ಶಾಸಕ ಪ್ರದೀಪ್‌ಈಶ್ವರ್‌ ಸ್ವಂತ ಹಣದಲ್ಲಿ ಹಾಸ್ಟೆಲ್‌ ನಿರ್ಮಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಲಿಜ ಜನಾಂಗಕ್ಕೆ ಉದ್ಯೋಗದಲ್ಲಿಯೂ 2ಎ ಮೀಸಲಾತಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಶಾಸಕ ಪ್ರದೀಪ್ ಈಶ್ವರ್ ಭರವಸೆ ನೀಡಿದರು. ಶುಕ್ರವಾರ ನಗರದ ಶ್ರೀ ಯೋಗಿ ನಾರೇಯಣ ದೇವಾಲಯದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಸಮುದಾಯದ ವತಿಯಿಂದ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ(ಕೈವಾರ ತಾತಯ್ಯನವರ)ಯನ್ನು ಉದ್ಘಾಟಿಸಿ ಮಾತನಾಡಿ, ಬಲಿಜ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ 2ಎ ಮೀಸಲಾತಿ ನೀಡುವುದು ನ್ಯಾಯವಾಗಿದೆ ಎಂದರು.

ಬಲಿಜ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌

ಸಮುದಾಯದ ಅಭಿವೃದ್ಧಿಗಾಗಿ ಜಿಲ್ಲಾ ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಿಸಲು ಸರ್ಕಾರ ಜಾಗ ನೀಡಿದೆ, ಸಮುದಾಯದವರ ಸಹಕಾರ ಮತ್ತು ಸರ್ಕಾರದ ಅನುದಾನ ಪಡೆದು ಸಮುದಾಯ ಭವನವನ್ನು ನಿರ್ಮಿಸಲಾಗುವುದು. ಜಿಲ್ಲಾ ಕೇಂದ್ರದ ವಿದ್ಯಾರ್ಥಿಗಳ ಹಿತ ರಕ್ಷಣೆಗಾಗಿ ಯಾರ ಬಳಿಯೂ ಚಂದಾ ವಸೂಲಿ ಮಾಡದೆ ಸ್ವಂತ ಹಣದಿಂದ ವಿದ್ಯಾರ್ಥಿ ವಸತಿ ಗೃಹ ಒಂದನ್ನು ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದಾಗ ಅನೇಕ ಮಂದಿ ನನ್ನ ಫಲಿತಾಂಶದ ಬಗ್ಗೆ ಅವಹೇಳನ ಮಾಡಿದ್ದರು. ಆದರೆ ಫಲಿತಾಂಶ ಹೊರ ಬಿದ್ದ ನಂತರ ನನ್ನ ಬಗ್ಗೆ ಅನಗತ್ಯ ಚರ್ಚೆ ಮಾಡಿದವರೇ ಜೈಕಾರ ಹಾಕಿದರು. ಚುನಾವಣೆಯಲ್ಲಿ ನಾನು ಗೆಲ್ಲಲು ಅತಿ ಮುಖ್ಯ ಕಾರಣ ನನ್ನ ಸಮುದಾಯದವರ ಮತವು ಸಹ ಮುಖ್ಯವಾಗಿದೆ. ಈಗ ನಾನು ಎಲ್ಲಾ ಸಮುದಾಯಗಳಿಗೂ ನಾಯಕನಾಗಿದ್ದೇನೆ. ಇದು ನೀವು ನನಗೆ ಕೊಟ್ಟ ಶಕ್ತಿ ಮತ್ತು ಬಲ ಎಂದರು.ರಸ್ತೆಗೆ ಸಿವಿವಿ ಹೆಸರು ನಾಮಕರಣ

ತಮ್ಮ ಭಾಷಣದ ಮಧ್ಯದಲ್ಲಿ ಮಾಜಿ ಶಾಸಕ ಹಾಗೂ ಕೆ.ವಿ.ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಸಂಸ್ಥಾಪಕ ಅಧ್ಯಕ್ಷ ಸಿ.ವಿ. ವೆಂಕಟರಾಯಪ್ಪ ರವರ ಗುಣಗಾನ ಮಾಡಿದರು. ಚಿಕ್ಕಬಳ್ಳಾಪುರದ ಪ್ರಮುಖ ರಸ್ತೆ ಒಂದಕ್ಕೆ ಸಿ.ವಿ.ವೆಂಕಟರಾಯಪ್ಪರವರ ಹೆಸರು ನಾಮಕರಣ ಹಾಗೂ ಮುಂದೆ ಸ್ಥಾಪಿಸಲ್ಲಿರುವ ಬೃಹತ್ ಗ್ರಂಥಾಲಯವೊಂದಕ್ಕೆ ಸಿ.ವಿ.ವೆಂಕಟರಾಯಪ್ಪ ರವರ ಹೆಸರನ್ನು ಇಡಲಾಗುವುದು. ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಸಮುದಾಯದವರು ಮುಂದೆ ಬರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಕೈವಾರ ತಾತಯ್ಯನವರ ಹೂವಿನ ಪಲ್ಲಕ್ಕಿಗಳೊಂದಿಗೆ ಅದ್ದೂರಿ ಮೆರವಣಿಗೆಯನ್ನು ನಡೆಸಲಾಯಿತು. ಮೆರವಣಿಗೆಯು ವಾಪಸಂದ್ರದ ಶ್ರೀ ರಂಗನಾಥ ಸ್ವಾಮಿ ದೇವಾಲಯದಿಂದ ಚಾಲನೆಗೊಂಡು ಬಿಬಿ ರಸ್ತೆಯ ಮೂಲಕ ಶ್ರೀ ಯೋಗಿ ನಾರೇಯಣ ಯತೀಂದ್ರರ ದೇವಾಲಯದವರೆಗೆ ಮೆರವಣಿಗೆ ಸಾಗಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್,ನಗರಸಭೆ ಉಪಾಧ್ಯಕ್ಷ ಎನ್ ನಾಗರಾಜ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಅತಿಕ್ ಪಾಷಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುಮಾರ, ಹಿರಿಯ ವಕೀಲರಾದ ಎಸ್ಎನ್ ಅಶ್ವಥ್ ನಾರಾಯಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ನಗರ ಸಭೆ ಸದಸ್ಯ ನರಸಿಂಹಮೂರ್ತಿ, ಸಮುದಾಯದ ಮುಖಂಡರಾದ ಡಾ.ಜಿ.ವಿ. ಮಂಜುನಾಥ್ ,ಎಸ್.ಪಿ.ಶ್ರೀನಿವಾಸ್, ಪಿ.ಮಂಜುನಾಥ್, ಗಡ್ಡಂ ನಾಗರಾಜು, ಮುಸ್ಟೂರು ಶಶಿ, ನಾಗಭೂಷಣ್, ಎಸ್.ಎನ್.ಅಶ್ವಥ್ ನಾರಾಯಣ್ ಇದ್ದರು.