2028ರಲ್ಲಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಬೇಕೆಂಬುದು ರಮೇಶ್ ಕುಮಾರ್ ಅವರ ಮಹತ್ವಾಕಾಂಕ್ಷೆ.

ಮಂಜುನಾಥ ಕೆ.ಎಂ. ಬಳ್ಳಾರಿ

ಪೊಲೀಸ್ ಕರ್ತವ್ಯದ ನಡುವೆಯೂ ಸಾಹಸ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್‌ಟೇಬಲ್ ಎಂ.ರಮೇಶ್ ಕುಮಾರ್ ಹಿಮಾಲಯದ 5,289 ಮೀಟರ್ (17,352 ಅಡಿ) ಎತ್ತರದ ಫ್ರೆಂಡ್‌ಶಿಪ್ ಪೀಕ್ ಶಿಖರ ಯಶಸ್ವಿಯಾಗಿ ಆರೋಹಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯ ಕೆ.ಸಿ.ಕೊಂಡಯ್ಯ ಅವರ ಅಂಗರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಕುಮಾರ್ ಅವರಿಗೆ ಪರ್ವತಾರೋಹಣ, ಚಾರಣ, ಬೈಕ್ ರೈಡಿಂಗ್ ಹಾಗೂ ಕುದುರೆ ಸವಾರಿ ಸೇರಿದಂತೆ ಸಾಹಸ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ. ಪೊಲೀಸ್ ಇಲಾಖೆಯ ಜವಾಬ್ದಾರಿಯುತ ಕರ್ತವ್ಯದ ನಡುವೆಯೂ ಸಾಹಸ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಅವರು ಇದೀಗ ಫ್ರೆಂಡ್‌ಶಿಪ್ ಪೀಕ್ ಏರುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.

ಎವರೆಸ್ಟ್‌ನತ್ತ ಗುರಿ:2028ರಲ್ಲಿ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಬೇಕೆಂಬುದು ರಮೇಶ್ ಕುಮಾರ್ ಅವರ ಮಹತ್ವಾಕಾಂಕ್ಷೆ. ಈ ಗುರಿ ಸಾಧನೆಗಾಗಿ ಹಂತ ಹಂತವಾಗಿ ಸಿದ್ಧತೆ ನಡೆಸುತ್ತಿರುವ ಅವರು ಹಿಮಾಚಲ ಪ್ರದೇಶದಲ್ಲಿ 40 ದಿನಗಳ ಕಠಿಣ ಪರ್ವತಾರೋಹಣ ತರಬೇತಿ ಪೂರ್ಣಗೊಳಿಸಿದ್ದಾರೆ.

ಪ್ರತಿಕೂಲ ಹವಾಮಾನ, ಹಿಮದ ಹಾದಿ, ಕಡಿಮೆ ಆಮ್ಲಜನಕದ ವಾತಾವರಣದಲ್ಲಿ ಸಾಗುವುದು, ಪರ್ವತಾರೋಹಣಕ್ಕೆ ಅಗತ್ಯ ತಾಂತ್ರಿಕ ಕೌಶಲ್ಯ, ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಸ್ಥೈರ್ಯಕ್ಕೆ ಸಂಬಂಧಿಸಿದ ತರಬೇತಿ ಪಡೆದಿದ್ದಾರೆ. ಈ ತರಬೇತಿಯ ಭಾಗವಾಗಿ ಫ್ರೆಂಡ್‌ಶಿಪ್ ಪೀಕ್ ಆರೋಹಣ ಕೈಗೊಂಡು ಯಶಸ್ವಿಯಾಗಿದ್ದಾರೆ. ಈ ಸಾಧನೆ ಅವರ ಎವರೆಸ್ಟ್ ಕನಸಿನತ್ತ ಮಹತ್ವದ ಪೂರ್ವ ಸಿದ್ಧತೆಯ ಹೆಜ್ಜೆಯಾಗಿದೆ.

ಸಾಹಸದೊಂದಿಗೆ ಜಾಗೃತಿ: ರಮೇಶ್ ಕುಮಾರ್ ಸಾಹಸಯಾನ ಪರ್ವತಾರೋಹಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕಳೆದ ವರ್ಷ ಬಳ್ಳಾರಿಯಿಂದ ಲೇಹ್–ಲಡಾಖ್‌ವರೆಗೆ ಬೈಕ್ ರೈಡ್ ನಡೆಸಿದ್ದ ಅವರು, ಆ ಯಾತ್ರೆ ರಸ್ತೆ ಸುರಕ್ಷತೆ ಮತ್ತು ಹೆಲ್ಮೆಟ್ ಬಳಕೆಯ ಜಾಗೃತಿ ಅಭಿಯಾನವಾಗಿಯೂ ರೂಪಿಸಿದ್ದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಸಂಚಾರ ನಿಯಮ ಪಾಲಿಸಬೇಕು ಎಂಬ ಸಂದೇಶ ತಮ್ಮ ಸಾಹಸಯಾತ್ರೆಯುದ್ದಕ್ಕೂ ಸಾರಿದ್ದರು. ಅವರ ಸಾಹಸ ಪ್ರವೃತ್ತಿ ಹಾಗೂ ಸಮಾಜಮುಖಿ ಕಾಳಜಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಪೊಲೀಸ್ ಇಲಾಖೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಲೇ ಸಾಹಸ ಕ್ಷೇತ್ರದಲ್ಲಿ ದೊಡ್ಡ ಗುರಿ ಇಟ್ಟುಕೊಂಡಿರುವ ರಮೇಶ್ ಕುಮಾರ್, ನಿರಂತರ ಅಭ್ಯಾಸ ಮತ್ತು ಶಿಸ್ತಿನ ಮೂಲಕ ಎವರೆಸ್ಟ್ ಆರೋಹಣಕ್ಕೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳುತ್ತಿದ್ದಾರೆ. 5,289 ಮೀಟರ್ ಎತ್ತರದ ಶಿಖರ ಏರಿರುವ ರಮೇಶ್ ಕುಮಾರ್ ಅವರ ಮುಂದಿನ ಗುರಿ ಈಗ ಮೌಂಟ್ ಎವರೆಸ್ಟ್. ಪೊಲೀಸ್ ಸಮವಸ್ತ್ರದ ಶಿಸ್ತಿನೊಂದಿಗೆ ಪರ್ವತಾರೋಹಣದ ಸಾಹಸ ಮನೋಭಾವ ಮೈಗೂಡಿಸಿಕೊಂಡಿರುವ ಅವರ ಈ ಪಯಣ ಯುವಜನರಿಗೆ ಗುರಿ, ಪರಿಶ್ರಮ ಮತ್ತು ಧೈರ್ಯದ ಸಂದೇಶ ಸಾರುತ್ತಿದೆ.

ಫ್ರೆಂಡ್‌ಶಿಪ್ ಪೀಕ್ ಆರೋಹಣ ಹಾಗೂ ಪರ್ವತಾರೋಹಣ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಎಂ.ರಮೇಶ್ ಕುಮಾರ್ ಅವರನ್ನು ನಗರದಲ್ಲಿ ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ರಮೇಶ್ ಕುಮಾರ್ ಸಾಧನೆ ಅಭಿನಂದಿಸಿ ಸ್ವಾಗತಿಸಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಸ್ನೇಹಿತರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ರಮೇಶ್ ಕುಮಾರ್ ಬಳ್ಳಾರಿಗೆ ಆಗಮಿಸುತ್ತಿದ್ದಂತೆಯೇ ಸ್ನೇಹಿತರ ಬಳಗ ಪಟಾಕಿ ಸಿಡಿಸಿ ಸಂಭ್ರಮಿಸಿತು.