ಬಳ್ಳಾರಿ ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು

| Published : Jun 04 2024, 12:30 AM IST / Updated: Jun 04 2024, 12:31 AM IST

ಸಾರಾಂಶ

ಮತಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಮತಎಣಿಕೆ ನಂತರ ವಿಜಯ ಹೊಂದಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆಯನ್ನು ನಿಷೇಧಿಸಲಾಗಿದೆ.

ಬಳ್ಳಾರಿ: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು ಇನ್ನು ಕೆಲವೇ ಗಂಟೆಗಳಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಕೈ-ಕಮಲ ಅಭ್ಯರ್ಥಿಯ ರಾಜಕೀಯ ಭವಿಷ್ಯ ಹೊರ ಬೀಳಲಿದೆ.

ಮತ ಎಣಿಕೆಗೆ ಸಮಯ ಸನಿಹವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ಎದೆ ಬಡಿತ ಜೋರಾಗಿದೆ.

ನಗರದ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಮತಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು ಮತಎಣಿಕೆ ನಂತರ ವಿಜಯ ಹೊಂದಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆಯನ್ನು ನಿಷೇಧಿಸಲಾಗಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಒಟ್ಟು 18,84,469 ಮತದಾರರಿದ್ದಾರೆ.

ಈ ಪೈಕಿ 92,92,74 ಪುರುಷ ಮತದಾರರು ಮತ್ತು 9,54,929 ಮಹಿಳಾ ಮತದಾರರು, 266 ತೃತೀಯ ಲಿಂಗಿ ಮತದಾರರಿದ್ದಾರೆ. ಇದರಲ್ಲಿ 61,006 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ಶ್ರೀರಾಮುಲು ರಾಜಕೀಯ ಭವಿಷ್ಯ ಚರ್ಚೆ............

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಭವಿಷ್ಯ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಸಂಡೂರಿನ ಹಾಲಿ ಶಾಸಕರಾಗಿದ್ದು, ಒಂದು ವೇಳೆ ತುಕಾರಾಂ ಸೋತರೆ, ಶಾಸಕರಾಗಿಯೇ ಉಳಿಯಲಿದ್ದಾರೆ. ಶ್ರೀರಾಮುಲು ಸೋಲುಂಡರೆ ಮುಂದಿನ ರಾಜಕೀಯ ಭವಿಷ್ಯ ಹೇಗೆ ಎನ್ನುವ ಕುರಿತು ವಿಶ್ಲೇಷಣೆಗಳು ನಡೆಯುತ್ತಿವೆ. ನರೇಂದ್ರ ಮೋದಿ ಅವರ ನಾಮದ ಬಲದಿಂದ ಗೆದ್ದೇ ಗೆಲ್ಲುವ ಎಂಬ ವಿಶ್ವಾಸದಲ್ಲಿದ್ದ ಬಿ.ಶ್ರೀರಾಮುಲು, ಚುನಾವಣೋತ್ತರ ಸಮೀಕ್ಷೆ ಬಂದ ಬಳಿಕ ಗೆಲುವಿನ ಭರವಸೆ ಮತ್ತಷ್ಟೂ ಹೆಚ್ಚಾಗಿದೆ. ಗ್ಯಾರಂಟಿ ಯೋಜನೆಗಳ ಜಾರಿ ಹಾಗೂ ಜಾತಿವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತನ್ನ ಗೆಲುವು ನಿಶ್ಚಿತ ಎಂಬ ವಿಶ್ವಾಸದಲ್ಲಿದ್ದಾರೆ. ಕೈ-ಕೇಸರಿ ಅಭ್ಯರ್ಥಿಗಳ ಭವಿಷ್ಯ ಇನ್ನು ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದ್ದು, ಈವರೆಗಿನ ಎಲ್ಲ ವಿಶ್ಲೇಷಣೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳಿಗೆ ತೆರೆಬೀಳಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ನನ್ನ ಗೆಲುವಿಗೆ ಕಾರಣವಾಗಲಿದೆ. ದೇಶದ ರಕ್ಷಣೆ ಹಿನ್ನಲೆಯಲ್ಲಿ ಜಿಲ್ಲೆಯ ಜನರು ಬಿಜೆಪಿಗೆ ಮತ ನೀಡಿದ್ದಾರೆ ಎಂಬ ಅಪಾರ ವಿಶ್ವಾಸವಿದೆ. ನಾನು ಗೆದ್ದೇ ಗೆಲ್ಲುವೆ ಎನ್ನುತ್ತಾರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು.

ಚುನಾವಣೋತ್ತರ ಸಮೀಕ್ಷೆಗಳು ಏನೇ ಬರಲಿ. ಜಿಲ್ಲೆಯ ಜನರು ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದೇನೆ. ರಾಜ್ಯ ಸರ್ಕಾರದ ಜನಪರ ಆಡಳಿತ ಹಾಗೂ ಪಂಚ ಗ್ಯಾರಂಟಿಗಳಿಂದ ಮತದಾರರು ಕಾಂಗ್ರೆಸ್‌ನ್ನು ಬೆಂಬಲಿಸಿದ್ದಾರೆ ಎಂಬ ನಂಬಿಕೆಯಿದೆ ಎನ್ನುತ್ತಾರೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ. ಚುನಾವಣೆ ಫಲಿತಾಂಶದ ಬಗ್ಗೆ ಕಾತರರಾಗಿದ್ದೇವೆ. ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ. ಬಳ್ಳಾರಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲವಿದೆ. ಫಲಿತಾಂಶ ತಿಳಿಯಲು ಬೆಳಿಗ್ಗೆಯಿಂದಲೇ ಟಿವಿ ಮುಂದೆ ಕೂಡುತ್ತೇವೆ ಎನ್ನುತ್ತಾರೆ ಬಳ್ಳಾರಿಯ ಖಾಸಗಿ ಉದ್ಯೋಗಿಗಳಾದ ವಿಶ್ವೇಶ್ವರಪ್ಪ, ಮಹಾದೇವ ಹಾಗೂ ರವಿಕುಮಾರ್.