65ರಿಂದ 69 ವರ್ಷ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿದ್ದ ರಜನಿ ಲಕ್ಕ ಅವರು 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮಂಜುನಾಥ ಕೆ.ಎಂ. ಬಳ್ಳಾರಿ
ಸಾಧನೆಗೆ ವಯಸ್ಸಿನ ಹಂಗಿಲ್ಲ. ಛಲವೊಂದಿದ್ದರೆ ಅರವತ್ತರ ನಂತರವೂ ಚಿನ್ನದ ಪದಕಕ್ಕೆ ಕೊರಳೊಡ್ಡಬಹುದು ಎಂಬುದಕ್ಕೆ ಬಳ್ಳಾರಿಯ ಹಿರಿಯ ಈಜುಪಟು ರಜನಿ ಲಕ್ಕ ಅವರೇ ಸಾಕ್ಷಿ!ರಜನಿ ಲಕ್ಕ ಅವರು ಈಜುಕೊಳದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪದಕಗಳನ್ನು ಬಾಚಿಕೊಂಡಿದ್ದಾರೆ. ಆ ಮೂಲಕ ಬಳ್ಳಾರಿಯ ಕೀರ್ತಿಯನ್ನು ಏಷ್ಯನ್ ಕ್ರೀಡಾಂಗಣದಲ್ಲಿ ಬೆಳಗಿಸಿದ್ದಾರೆ.
ಬೆಂಗಳೂರಿನ ಯಲಹಂಕದ ‘ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್’ನಲ್ಲಿ ಅಕ್ಟೋಬರ್ 4ರಿಂದ 10ರವರೆಗೆ ನಡೆದ 2ನೇ ಏಷ್ಯನ್ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಜನಿ ಲಕ್ಕ ಅವರು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದಾರೆ.ನೀರಿನಲ್ಲೇ ಚಿನ್ನದ ಬೇಟೆ: 65ರಿಂದ 69 ವರ್ಷ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿದ್ದ ರಜನಿ ಲಕ್ಕ ಅವರು 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. 100 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿರುವ ಅವರು, 400 ಮೀಟರ್ ಇಂಡಿವಿಜುಯಲ್ ಮೆಡ್ಲೆ(ಐಎಂ) ವಿಭಾಗದಲ್ಲೂ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. 200 ಮೀಟರ್ ಇಂಡಿವಿಜುಯಲ್ ಮೆಡ್ಲೆ (ಐಎಂ) ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಒಟ್ಟು ನಾಲ್ಕು ಪದಕಗಳ ಸಾಧನೆ ಮಾಡಿದ್ದಾರೆ.
ಬಟರ್‌ಫ್ಲೈ ಈಜು ಅತ್ಯಂತ ಕಠಿಣ ಸ್ಪರ್ಧೆಗಳಲ್ಲಿ ಒಂದಾಗಿದೆ. ಕೈಕಾಲುಗಳ ಸಮನ್ವಯ, ದೈಹಿಕ ಸಾಮರ್ಥ್ಯ, ಉಸಿರಾಟದ ನಿಯಂತ್ರಣ ಹಾಗೂ ಸಹಿಷ್ಣುತೆ ಈ ಸ್ಪರ್ಧೆಗೆ ಅತ್ಯಗತ್ಯ. ಇನ್ನು ಇಂಡಿವಿಜುಯಲ್ ಮೆಡ್ಲೆಯಲ್ಲಿ ನಾಲ್ಕು ವಿಭಿನ್ನ ಈಜು ಶೈಲಿಗಳಲ್ಲಿ ಸಾಮರ್ಥ್ಯ ಪ್ರದರ್ಶಿಸಬೇಕಾಗುತ್ತದೆ. ಇಂತಹ ಸವಾಲಿನ ಸ್ಪರ್ಧೆಗಳಲ್ಲಿ ರಜನಿ ಲಕ್ಕ ಅವರು ಪದಕಗಳನ್ನು ಗೆದ್ದಿರುವುದು ಅವರ ಸಾಧನೆಯ ವಿಶೇಷತೆ.ಒಂಬತ್ತು ದೇಶಗಳ ಕ್ರೀಡಾಪಟುಗಳ ಸಂಗಮ: ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಜಪಾನ್, ಚೀನಾ, ಮಲೇಷಿಯಾ, ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಓಮನ್ ಹಾಗೂ ದಕ್ಷಿಣ ಕೊರಿಯಾ ಸೇರಿದಂತೆ ಒಂಬತ್ತು ದೇಶಗಳ ಒಟ್ಟು 1,320 ಕ್ರೀಡಾಪಟುಗಳು ಭಾಗವಹಿಸಿದ್ದರು. ವಿವಿಧ ವಯೋಮಾನದ ವಿಭಾಗಗಳಲ್ಲಿ ನಡೆದ ಈ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ನಾಲ್ಕು ಪದಕಗಳನ್ನು ಗೆದ್ದಿರುವ ರಜನಿ ಲಕ್ಕ ಅವರ ಸಾಧನೆ ಬಳ್ಳಾರಿ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ.
ಬಳ್ಳಾರಿಗೆ ಹೆಮ್ಮೆಯ ಗರಿ: ಗಣಿನಾಡು ಬಳ್ಳಾರಿ ಕ್ರೀಡಾ ಪ್ರತಿಭೆಗಳಿಗೂ ಹೆಸರಾಗಿದ್ದು, ಇದೀಗ ಹಿರಿಯ ಈಜುಪಟು ರಜನಿ ಲಕ್ಕ ಅವರ ಅಂತಾರಾಷ್ಟ್ರೀಯ ಸಾಧನೆ ಜಿಲ್ಲೆಯ ಕ್ರೀಡಾ ಹಿರಿಮೆಗೆ ಮತ್ತೊಂದು ಗರಿ ಮೂಡಿಸಿದೆ. ಏಷ್ಯನ್ ಮಟ್ಟದ ಕ್ರೀಡಾಕೂಟದಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ರಜನಿ ಲಕ್ಕ ಅವರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸಿದೆ.ಅರವತ್ತು ದಾಟಿದರೆ ಸಾಧನೆಯ ಹಾದಿ ಮುಗಿಯಿತು ಎಂದುಕೊಳ್ಳುವವರಿಗೆ ರಜನಿ ಲಕ್ಕ ಅವರ ಈಜಿನ ಸಾಧನೆ ಹೊಸ ಸಂದೇಶ ನೀಡಿದೆ. ಸಾಧಿಸುವ ಛಲವಿದ್ದರೆ ವಯಸ್ಸು ಅಡ್ಡಿಯಾಗದು; ಆತ್ಮವಿಶ್ವಾಸವಿದ್ದರೆ ಗೆಲುವಿನ ದಡ ಸೇರಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಬಳ್ಳಾರಿಯ ಹಿರಿಯ ಈಜು ತರಬೇತುದಾರರಾಗಿರುವ ಲಜನಿ ಲಕ್ಕ ಅವರು 2014ರಿಂದ ವಿಕಲಚೇತನ ಮಕ್ಕಳಿಗೆ ಈಜು ತರಬೇತಿ ನೀಡುತ್ತಿದ್ದು, 2006-07ರಿಂದ ಬಾಲಕ ಹಾಗೂ ಬಾಲಕಿಯರಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಈವರೆಗೆ ಇವರ ಬಳಿ ಸುಮಾರು 5 ಸಾವಿರಕ್ಕೂ ಅಧಿಕ ಬಾಲಕರು ತರಬೇತಿ ಪಡೆದಿದ್ದು, ಅನೇಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದು ಕ್ರೀಡಾ ಪ್ರತಿಭೆ ಪ್ರದರ್ಶಿಸಿದ್ದಾರೆ.ನಾಲ್ಕು ಸ್ಪರ್ಧೆ, ನಾಲ್ಕು ಪದಕ
ಚಿನ್ನ: 200 ಮೀಟರ್ ಬಟರ್ಫ್ಲೈಬೆಳ್ಳಿ: 100 ಮೀಟರ್ ಬಟರ್‌ಫ್ಲೈ
ಬೆಳ್ಳಿ: 400 ಮೀಟರ್ ಇಂಡಿವಿಜುಯಲ್ ಮೆಡ್ಲೆ(ಐಎಂ)ಕಂಚು: 200 ಮೀಟರ್ ಇಂಡಿವಿಜುಯಲ್ ಮೆಡ್ಲೆ(ಐಎಂ)