ಮೇಳೈಸಿದ ಮಕರ ಸಂಕ್ರಾಂತಿಯ ಸಡಗರ

| Published : Jan 16 2024, 01:49 AM IST

ಸಾರಾಂಶ

ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಬ್ಬದ ಸಡಗರ ಕಂಡುಬಂತು. ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಬಳ್ಳಾರಿ: ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯ ಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹಬ್ಬದ ಸಡಗರ ಕಂಡುಬಂತು. ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ದೇವರಿಗೆ ಪೂಜೆ ಸಲ್ಲಿಸಿ ಎಳ್ಳು, ಬೆಲ್ಲ, ಶೇಂಗಾ, ಸಕ್ಕರೆ ಅಚ್ಚು, ಕೊಬ್ಬರಿ, ಕಬ್ಬು ಬೆರೆಸಿದ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಲಾಯಿತು. ಬಳಿಕ ಮನೆಯ ಮಹಿಳೆಯರು ಎಳ್ಳುಬೆಲ್ಲ ಹಾಗೂ ಎಳ್ಳುಸಕ್ಕರೆಯನ್ನು ನೆರೆಹೊರೆಯುವರು ಹಾಗೂ ಆತ್ಮೀಯರಿಗೆ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಪುರುಷರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಹಬ್ಬದ ಸಡಗರದಲ್ಲಿದ್ದರು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ನಗರದ ರಾಘವೇಂದ್ರ ಕಾಲನಿಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ಜರುಗಿದವು. ಧ್ವಜಾರೋಹಣ, ಸ್ತಂಭಪೂಜೆ, ಗಣಹೋಮ, ಪಡಿಪೂಜೆಗಳು ನಡೆದವು. ಅಯ್ಯಪ್ಪಸ್ವಾಮಿ ದೇವಾಲಯ ಭಕ್ತರಿಂದ ತುಂಬಿತ್ತು.

ತಾಲೂಕಿನ ಚೇಳ್ಳಗುರ್ಕಿ ಎರ್ರಿತಾತ ದೇವಸ್ಥಾನದಲ್ಲಿ ಸಂಕ್ರಾಂತಿ ಅಂಗವಾಗಿ ಧನುರ್ಮಾಸ ವಿಶೇಷ ಪೂಜೆ ಜರುಗಿತು. ಬೆಳಗಿನ ಜಾವ 4 ಗಂಟೆಯಿಂದಲೇ ಪೂಜೆ ಶುರುಗೊಂಡಿತು. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ನೂರಾರು ಭಕ್ತರು ಪಾಲ್ಗೊಂಡು ಎರ್ರಿತಾತನ ದರ್ಶನ ಪಡೆದು ಪುನೀತಗೊಂಡರು. ಬಳಿಕ ಎರ್ರಿತಾತ ನಾಮಾವಳಿ, ಭಜನೆ ಹಾಗೂ ಪ್ರಸಾದ ವಿತರಣೆ ಕಾರ್ಯಗಳು ನಡೆದವು.

ನಗರದ ಅಧಿದೇವತೆ ಕನಕ ದುರ್ಗಮ್ಮ, ಕೋಟೆ ಮಲ್ಲೇಶ್ವರಸ್ವಾಮಿ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜೆಗಳು ನಡೆದವು. ಪ್ರಮುಖ ದೇವಾಲಯಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.

ಚಿತ್ತಾಕರ್ಷಕ ರಂಗೋಲಿ: ನಗರದ ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಕಂಡುಬಂತು. ರಂಗೋಲಿ ಮಧ್ಯದಲ್ಲಿ ಗೋಮಾತೆಯ ಸಗಣಿಯಿಂದ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಲಯನ್ಸ್‌ ಕ್ಲಬ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳು ನಗರದಲ್ಲಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದವು. ನೂರಾರು ಮಹಿಳೆಯರು ಸ್ಪರ್ಧೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಸಡಗರಕ್ಕೆ ಯಾವುದೇ ಕೊರತೆ ಕಂಡುಬರಲಿಲ್ಲ. ಹೂವು, ಹಣ್ಣುಗಳ ಬೆಲೆ ಏರಿಕೆ ನಡುವೆ ಎಲ್ಲೆಡೆ ಹಬ್ಬದ ಸಂಭ್ರಮವಿತ್ತು. ರೈತರು ಎತ್ತುಗಳ ಮೈ ತೊಳೆದು, ಪೂಜೆ ಸಲ್ಲಿಸಿದರು.

ನಗರ ಹಾಗೂ ಆಂಧ್ರ ಪ್ರದೇಶ ಜನರು ನೆಲೆಸಿರುವ ಕ್ಯಾಂಪ್‌ಗಳಲ್ಲಿ ಸಂಕ್ರಾತಿ ಮುನ್ನ ದಿನವಾದ ಭಾನುವಾರ ಬೆಳಗಿನ ಜಾವದಿಂದ ಭೋಗಿ ಆಚರಣೆ ನಡೆಯಿತು.

ವಿಶೇಷ ಹಬ್ಬ: ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷವೂ ಸಡಗರ, ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಮನೆಯ ಮುಂದೆ ರಂಗೋಲಿ ಹಾಕಿ, ಪೂಜೆ ಸಲ್ಲಿಸಲಾಗುತ್ತದೆ. ಇದು ಮಹಿಳೆಯರಿಗೆ ವಿಶೇಷ ಹಬ್ಬ ಎಂದು ಬಳ್ಳಾರಿ ಪಾರ್ವತಿನಗರದ ನಿವಾಸಿಗಳಾದ ಶರಣಮ್ಮ, ಪ್ರೇಮಾ, ಮಂಗಳಮ್ಮ ತಿಳಿಸಿದರು.