ಸಾರಾಂಶ
ಜಿಎಸ್‌ಟಿಯಲ್ಲಿ ತಂದಿರುವ ಸುಧಾರಣೆಯನ್ನು ಕಾಂಗ್ರೆಸ್ ಒಲ್ಲದ ಮನಸ್ಸಿನಿಂದ ಸ್ವಾಗತ ಮಾಡಿದೆ
ಹುಬ್ಬಳ್ಳಿ: ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಲು ಉದ್ದೇಶಿಸಿರುವುದು ಮೂರ್ಖತನದ ಪರಮಾವಧಿ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬ್ಯಾಲೆಟ್ ಬಾಕ್ಸ್‌ಗಳನ್ನೇ ಕಳುವು ಮಾಡಿದ ಅನೇಕ ಉದಾಹರಣೆಗಳಿವೆ. ಜಿಪಂ, ತಾಪಂ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ಗೆ ಗೊತ್ತಾಗಿದೆ. ಹೀಗಾಗಿ ಗೂಂಡಾಗಿರಿ ಮೂಲಕ ಗೆಲ್ಲಲು ಹವಣಿಸುತ್ತಿದೆ. ತಮ್ಮ ರಾಷ್ಟ್ರ ನಾಯಕನನ್ನು ಮೆಚ್ಚಿಸುವ ಉದ್ದೇಶದಿಂದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. ಮತಯಂತ್ರಗಳು ಸರಿಯಿಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಅದ್ಹೇಗೆ 136 ಸ್ಥಾನ ಗೆಲ್ಲುತ್ತಿತ್ತು ಎಂದು ಕಿಡಿಕಾರಿದರು.ಜಿಎಸ್‌ಟಿಯಲ್ಲಿ ತಂದಿರುವ ಸುಧಾರಣೆಯನ್ನು ಕಾಂಗ್ರೆಸ್ ಒಲ್ಲದ ಮನಸ್ಸಿನಿಂದ ಸ್ವಾಗತ ಮಾಡಿದೆ. ಜಿಎಸ್‌ಟಿ ಜಾರಿಗೆಯಾದಾಗಲೂ ಕಾಂಗ್ರೆಸ್ ವಿರೋಧ ಮಾಡಿತ್ತು. ಕಾಂಗ್ರೆಸ್ ಕೇಂದ್ರ ನಿರ್ಧಾರ ಒಪ್ಪಬೇಕು ಎಂದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚಿಟ್ ಆದ ವಿಚಾರ, ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರೇ ಆಯೋಗ ರಚನೆ ಮಾಡಿದ್ದಾರೆ. ಈಗ ಅದರಿಂದ ಕ್ಲೀನ್ ಚಿಟ್ ಪಡೆದಿದ್ದಾರೆ. ಇಂತಹ ಕಾರ್ಯ ಅವರಿಗೆ ಹವ್ಯಾಸ ಆಗಿದೆ ಎಂದು ಹರಿಹಾಯ್ದರು.ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ರಚನೆ ಮಾಡಿರುವ ರಾಜ್ಯ ಸರ್ಕಾರ ಡಾ.ವೀರೇಂದ್ರ ಹೆಗ್ಗಡೆ ಅವರ ಮೇಲೆ ಆಗುತ್ತಿರುವ ಅಪಪ್ರಚಾರಕ್ಕೆ ಯಾಕೆ ಕಡಿವಾಣ ಹಾಕಲಿಲ್ಲ. ಎಸ್‌ಐಟಿ ಮಧ್ಯಂತರ ವರದಿ ಇನ್ನೂ ಯಾಕೆ ನೀಡಿಲ್ಲ? ವಿದೇಶದಿಂದ ಹಣ ಸಂದಾಯವಾಗುತ್ತಿದ್ದು, ಈ ಬಗ್ಗೆ ಎಸ್‌ಐಟಿ ಏಕೆ ತನಿಖೆ ನಡೆಸುತ್ತಿಲ್ಲ. ಆದ್ದರಿಂದ ಈ ಪ್ರಕರಣವನ್ನು ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.