ಸಾರಾಂಶ
ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರಿನ ಕಾರ್ಯಕರ್ತರು ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಬಲ್ನಾಡು ಇವರ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನ ತಂದು ಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ವೃದ್ದರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬುಧವಾರ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ದೇರಾಜೆ ಅಟ್ಲಾರು ಎಂಬಲ್ಲಿ ಪತ್ತೆಯಾಗಿದೆ. ಸುಮಾರು ಮೂರ್ನಾಲ್ಕು ದಿನಗಳ ಹಿಂದೆ ಮೃತಪಟ್ಟ ತನ್ನ ಪತಿಯ ಜೊತೆಯಲ್ಲಿ ಮಾನಸಿಕ ಅಸ್ವಸ್ಥ ಪತ್ನಿಯು ದಿನಗಳೆದಿದ್ದು, ನೆರೆಮನೆಯವರಿಂದ ಘಟನೆ ಬೆಳಕಿಗೆ ಬಂದಿದೆ.ದೇರಾಜೆ ಅಟ್ಲಾರು ನಿವಾಸಿ ರಮೇಶ್ ರಾವ್ (೭೦) ಮೃತರು. ರಮೇಶ್ ರಾವ್ ಹಾಗೂ ಅವರ ಪತ್ನಿ ವಸಂತಿ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಮಕ್ಕಳು ಇಲ್ಲದ ಕಾರಣ ಇಬ್ಬರೇ ವಾಸವಾಗಿದ್ದಾರೆ. ಹೆಚ್ಚಾಗಿ ಯಾರಲ್ಲೂ ಒಡನಾಟವಿಲ್ಲದೇ ಇರುವುದರಿಂದ ಎಲ್ಲಿಯೂ ಹೋಗುತ್ತಿರಲಿಲ್ಲ. ರಮೇಶ್ ರಾವ್ ಅವರು ಕಳೆದ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದರೂ ಮಾನಸಿಕ ಅಸ್ವಸ್ಥರಾದ ವಸಂತಿ ಅವರಿಗೆ ಇದರ ಅರಿವೇ ಇಲ್ಲದೆ ಮೃತದೇಹದೊಂದಿಗೆ ಮನೆಯಲ್ಲಿದ್ದರು. ಹಸಿವಿನಿಂದ ಕಂಗೆಟ್ಟಿದ್ದ ವಸಂತಿ ಅವರು ಪಕ್ಕದ ಮನೆಗೆ ಹೋಗಿ ಊಟ ಕೇಳಿದ್ದಾರೆ. ಆಗ ಗಂಡ ಮಲಗಿದ್ದು ಇನ್ನೂ ಎದ್ದಿಲ್ಲ ಎಂದಿದ್ದಾರೆ. ವಸಂತಿ ಅವರಿಗೆ ಊಟ ನೀಡಿದ ಪಕ್ಕದ ಮನೆಯವರಿಗೆ ಸಂಶಯವಾಗಿ ಹೋಗಿ ನೋಡಿದಾಗ ರಮೇಶ್ ರಾವ್ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿತ್ತು.
ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ಬಳಿಕ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರಿನ ಕಾರ್ಯಕರ್ತರು ಹಾಗೂ ವಿನಾಯಕ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್ ಬಲ್ನಾಡು ಇವರ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನ ತಂದು ಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಕಾರ್ಯಕ್ಕೆ ಬಲ್ನಾಡು ಗ್ರಾಮ ಪಂಚಾಯಿತಿ ಸದಸ್ಯೆ ಪರಮೇಶ್ವರಿ ಬಬ್ಬಲಿ, ಕಿರಣ್ ಕುಮಾರ್ ಬಲ್ನಾಡು ಸಹಕರಿಸಿದರು.