ಬಮೂಲ್ ಚುನಾವಣೆ: ಪ್ರತೀಕಾರದ ರಾಜಕಾರಣಕ್ಕೆ ವೇದಿಕೆ ಸಜ್ಜು

| Published : May 08 2025, 12:33 AM IST

ಬಮೂಲ್ ಚುನಾವಣೆ: ಪ್ರತೀಕಾರದ ರಾಜಕಾರಣಕ್ಕೆ ವೇದಿಕೆ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರಿ ಕ್ಷೇತ್ರದ ಮೂಲಕ ಸೇವೆ ಒದಗಿಸುವ ಹಂಬಲದೊಂದಿಗೆ ಕಲ್ಲುಗೋಪಹಳ್ಳಿಯ ಕೆಂಪಣ್ಣ ರವರ ಪತ್ನಿ ರೇಣುಕಮ್ಮ ಅವರು ರಾಮನಗರ ಕ್ಷೇತ್ರದ ಬಮೂಲ್ ಚುನಾವಣೆಯ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠರ ಅಭಯದೊಂದಿಗೆ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ನಿರ್ದೇಶಕ‌ ಸ್ಥಾನಕ್ಕೆ ಮೇ 25 ರಂದು ನಡೆಯುವ ಚುನಾವಣಾ ಅಖಾಡದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಮನಗರ ಕ್ಷೇತ್ರದಲ್ಲಿ ಪ್ರತೀಕಾರದ ರಾಜಕಾರಣಕ್ಕೆ ವೇದಿಕೆ ಸಜ್ಜುಗೊಂಡಿದೆ.

ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆಎಂಎಫ್ ಮಾಜಿ ಅಧ್ಯಕ್ಷರಾದ ಪಿ.ನಾಗರಾಜು ವಿರುದ್ಧ ಕಲ್ಲುಗೋಪಹಳ್ಳಿ ಕೆಂಪಣ್ಣರವರ ಧರ್ಮಪತ್ನಿ ರೇಣುಕಮ್ಮ ಅವರನ್ನು ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಿದೆ.

ಸತತವಾಗಿ 6 ಅವಧಿಗೆ ಬಮೂಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದ ನಾಗರಾಜುರವರು ಬಮೂಲ್ ಅಧ್ಯಕ್ಷರಾಗಿ ಹಾಗೂ ಕೆಎಂಎಫ್ ಅಧ್ಯಕ್ಷರಾಗಿದ್ದರು. ಈಗ 7ನೇ ಬಾರಿಗೆ ಬಮೂಲ್ ನಿರ್ದೇಶಕ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಬೆಂಬಲಿತರಾಗಿ ಕಲ್ಲುಗೋಪಳ್ಳಿ ಕೆಂಪಣ್ಣರವರ ಧರ್ಮಪತ್ನಿ ರೇಣುಕಮ್ಮ ಮೊಟ್ಟ ಮೊದಲ ಬಾರಿಗೆ ಚುನಾವಣೆ ಎದುರಿಸಲು ಭರ್ಜರಿ‌ ಸಿದ್ಧತೆ ನಡೆಸಿದ್ದಾರೆ.

ಕುತೂಹಲ ಕೆರಳಿಸಿರುವ ಬಮೂಲ್ ಚುನಾವಣೆ:

ಸಹಕಾರಿ ಚುನಾವಣೆಯಾದ ಬಮೂಲ್ ಚುನಾವಣೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರಗಳೆರಡರ 141 ಎಂಪಿಸಿಎಸ್ ಗಳು ಅರ್ಹವಾಗಿದ್ದು, ಆ ಸಂಘಗಳಿಂದ ಮತದಾನ‌ದ ಹಕ್ಕು ಪಡೆದವರು ಮಾತ್ರ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುತ್ತಾರೆ. ಈ‌ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಬೆಂಬಲಿತರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಸಹ ನಡೆದಿದೆ. ಇನ್ನೊಂದೆಡೆ ಕಾಂಗ್ರೆಸ್ ವಲಯದಲ್ಲಿ ಇಂತಹ ಬೆಳವಣಿಗೆ ನಡೆದಿಲ್ಲ. ಆದರೆ, ಪಿ.ನಾಗರಾಜು ಗ್ರೌಂಡ್ ವರ್ಕ್ ನಲ್ಲಿ ತೊಡಗಿದ್ದಾರೆ.

ಹಿಂದಿನ‌ ಚುನಾವಣೆಗಿಂತ ಈ ಸಾಲಿನ ಚುನಾವಣೆ ಜಿದ್ದಾ ಜಿದ್ದಿನಿಂದ ಕೂಡಿದ್ದು, ಮತದಾನದ ಹಕ್ಕು (ಡಿಲಿಗೇಟ್ಸ್ ) ಪಡೆದವರ ಮನವೊಲಿಸುವ ಕೆಲಸದಲ್ಲಿ ಇಬ್ಬರು ಅಭ್ಯರ್ಥಿಗಳು ತೆರೆ ಮರೆಯ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ರಿವೇಂಜ್ ರಾಜಕಾರಣದ ವಾಸನೆ:

ಕಳೆದ 2011ರಲ್ಲಿ ರಾಮನಗರ ಜಿಲ್ಲಾ ಪಂಚಾಯತಿಯ ಕಸಬಾ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಲ್.ಚಂದ್ರಶೇಖರ್ ಅವರ ಸ್ನೇಹಿತರಾಗಿದ್ದ ಕಲ್ಲುಗೋಪಳ್ಳಿ ಕೆಂಪಣ್ಣ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದವರಲ್ಲಿ ಪಿ.ನಾಗರಾಜು ಪ್ರಮುಖರಾಗಿದ್ದರು. ಅಲ್ಲದೆ ಕೆಂಪಣ್ಣ ಪರ ಬಿರುಸಿನ‌ ಪ್ರಚಾರ ನಡೆಸದ ಕಾರಣ ಸೋಲು ಅನುಭವಿಸುವ ಜೊತೆಗೆ‌ ಸ್ನೇಹಿತರಾಗಿದ್ದ ಎಲ್.ಚಂದ್ರಶೇಖರ್ ಸಹ ಸೋಲು ಅನುಭವಿಸಬೇಕಾಯಿತು. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಉರುಳಿಸಿದ ಪಿ.ನಾಗರಾಜು ತಂತ್ರಗಾರಿಕೆ ಆ ಚುನಾವಣೆಯಲ್ಲಿ ಕೆಲಸ ಮಾಡಿತ್ತು. ಅದನ್ನು‌ ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದ ಕೆಂಪಣ್ಣ ಅವರು 14 ವರ್ಷಗಳ ನಂತರ ಬಮೂಲ್ ಚುನಾವಣೆಯಲ್ಲಿ ಪಿ.ನಾಗರಾಜು ವಿರುದ್ಧ ತಮ್ಮ‌ ಪತ್ನಿ ರೇಣುಕಮ್ಮ ಅವರನ್ನು ಕಣಕ್ಕಿಳಿಸಿ ತೊಡೆತಟ್ಟಿದ್ದಾರೆ.

ಮೊದಲ‌ ಮಹಿಳಾ ಸ್ಪರ್ಧಿ:

ಸಹಕಾರಿ ಕ್ಷೇತ್ರದ ಮೂಲಕ ಸೇವೆ ಒದಗಿಸುವ ಹಂಬಲದೊಂದಿಗೆ ಕಲ್ಲುಗೋಪಹಳ್ಳಿಯ ಕೆಂಪಣ್ಣ ರವರ ಪತ್ನಿ ರೇಣುಕಮ್ಮ ಅವರು ರಾಮನಗರ ಕ್ಷೇತ್ರದ ಬಮೂಲ್ ಚುನಾವಣೆಯ ಅಭ್ಯರ್ಥಿಯಾಗಿ ಜೆಡಿಎಸ್ ವರಿಷ್ಠರ ಅಭಯದೊಂದಿಗೆ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಚುನಾವಣೆ ಎಂದರೆ ಸೋಲು - ಗೆಲುವು ಇದ್ದೇ ಇರುತ್ತದೆ. ಆದರೆ 6 ಬಾರಿ ಗೆಲುವು ಸಾಧಿಸಿ 7 ನೇ ಬಾರಿ ಕಣಕ್ಕಿಳಿದಿರುವ ಪಿ.ನಾಗರಾಜು ವಿರುದ್ಧ ಮಹಿಳಾ ಅಭ್ಯರ್ಥಿಯಾಗಿ ರೇಣುಕಮ್ಮ ಕಣಕ್ಕಿಳಿದಿರುವುದು ಆಶ್ಚರ್ಯವಾದರೂ, ಅಚ್ಚರಿಯೇನಿಲ್ಲ. ಇದರ ಹಿಂದೆ ಜೆಡಿಎಸ್ ಪಕ್ಷದ ಮುಖಂಡರು ಎಲ್ಲ ಆಯಾಮಗಳಲ್ಲಿ ಲೆಕ್ಕಾಚಾರಗಳನ್ನು ಅಳೆದು ತೂಗಿ ಚುನಾವಣೆಯ ರಣತಂತ್ರ ಹೆಣೆಯುತ್ತಿರುವುದರಲ್ಲಿ ತಲ್ಲೀನವಾಗಿದ್ದಾರೆ.

ಬಮೂಲ್ ನಿರ್ದೇಶಕ‌ ಸ್ಥಾನದ ಚುನಾವಣೆಯಲ್ಲಿ ರಾಮನಗರ ಕ್ಷೇತ್ರ ಬಾರಿ ಸದ್ದು ಮಾಡುತ್ತಿದ್ದು, ಈ ಚುನಾವಣೆ ಹಿಂದಿನ ಚುನಾವಣೆಗಳಿಗಿಂತ ವಿಭಿನ್ನವಾಗಿದ್ದು ಸೇರಿಗೆ ಸವ್ವಾಸೇರು ಎಂಬಂತೆ ಪಿ.ನಾಗರಾಜು ಅವರಿಗೆ ಪ್ರಬಲ ಪೈಪೋಟಿ ನಡೆಸುವ ಎಲ್ಲ ಲಕ್ಷಣಗಳು ಕ್ಷೇತ್ರದಲ್ಲಿ ಕಂಡು ಬರುತ್ತಿವೆ.