ಬಮೂಲ್ ನಿರ್ದೇಶಕರ ಚುನಾವಣೆಯನ್ನು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೂಕ್ಷ್ಮವಾಗಿ ಹೆಜ್ಜೆಯಿಟ್ಟು ಪ್ರತಿಸ್ಪರ್ಧಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಲಹೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಬಮೂಲ್ ನಿರ್ದೇಶಕರ ಚುನಾವಣೆಯನ್ನು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೂಕ್ಷ್ಮವಾಗಿ ಹೆಜ್ಜೆಯಿಟ್ಟು ಪ್ರತಿಸ್ಪರ್ಧಿಯ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಲಹೆ ನೀಡಿದರು.ಬಮೂಲ್ ನಿರ್ದೇಶಕರ ಚುನಾವಣೆ ಸಂಬಂಧ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಪಕ್ಷದ ಹಿರಿಯರು, ಯುವಕರು ಸಹಕಾರಿ ಕ್ಷೇತ್ರದಲ್ಲಿ ಅನುಭವವುಳ್ಳವರಿದ್ದೀರಿ, ರಾಜಕಾರಣದ ನೆಲೆಗಳನ್ನು ಅರ್ಥೈಸಿಕೊಂಡು ಬಮೂಲ್ ಚುನಾವಣೆ ಎದುರಿಸಿ, ರೇಣುಕಮ್ಮ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿಯೇ ರೇಣುಕಮ್ಮ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರ ಗೆಲುವಿಗೆ ಒಗ್ಗಟ್ಟಾಗಿ ಶ್ರಮಿಸಿ ಹೊಸ ಅಧ್ಯಾಯ ಬರೆಯುವಂತೆ ತಿಳಿಸಿದರು.
ಪ್ರತಿಸ್ಪರ್ಧಿಯಾಗಿರುವವರು ಅವಕಾಶವಾದಿ ರಾಜಕಾರಣಿ. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುವ ಸೂಚನೆ ಇರುತ್ತದೆಯೋ ಆ ಪಕ್ಷದ ಜೊತೆ ಹೆಜ್ಜೆ ಹಾಕುವವರು. 2028ರಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರಕ್ಕೆ ಬರಲಿದ್ದು, ಆಗ ನಮ್ಮ ಪಕ್ಷಕ್ಕೆ ಬಂದರು ಅಚ್ಚರಿ ಪಡಬೇಕಿಲ್ಲ ಎಂದು ಬಮೂಲ್ ನಿರ್ದೇಶಕ ಪಿ.ನಾಗರಾಜ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಹರಿಹಾಯ್ದರು.ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ಬಮುಲ್ ಹಾಗೂ ಜಿಪಂ ಮತ್ತು ತಾಪಂ ಚುನಾವಣೆ ಮೂಲಕ ಜೆಡಿಎಸ್ ಗೆಲುವು ಆರಂಭವಾಗಲಿದೆ. ಜನಸಾಮಾನ್ಯರು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬ ಭಯದಿಂದಲೇ ಕಾಂಗ್ರೆಸ್ ಸರ್ಕಾರ ಜಿಪಂ - ತಾಪಂ ಚುನಾವಣೆ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಟೀಕಿಸಿದರು.
ಹಿಂದಿನಿಂದಲೂ ಸಹಕಾರ ಕ್ಷೇತ್ರದಲ್ಲಿ ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿಕೊಂಡು ಬಂದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಹಕಾರ ಕ್ಷೇತ್ರ ಸಹಕಾರಗಳ ಕೈನಲ್ಲಿರಲಿ ಎಂಬ ಉದ್ದೇಶದಿಂದ ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಲಿಲ್ಲ. ನಂತರದ ದಿನಗಳಲ್ಲಿ ಕಾಂಗ್ರೆಸ್ ಕುತಂತ್ರ ಮತ್ತು ಆಡಳಿತ ಯಂತ್ರ ದುರುಪಯೋಗ ನಡೆಸಿದ ಪರಿಣಾಮ ಜೆಡಿಎಸ್ ಗೆ ಅಲ್ಪ ಹಿನ್ನಡೆಯಾಗಿದೆ ಎಂದರು.ಈ ಬಾರಿ ಜಿಲ್ಲೆಯಲ್ಲಿ ಬಮೂಲ್ ಸೇರಿದಂತೆ ಬಿಡಿಸಿಸಿ ಬ್ಯಾಂಕ್ ನ ಎಲ್ಲ ನಿರ್ದೇಶಕ ಸ್ಥಾನಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಪ್ರತಿಷ್ಠೆಯಾಗಿ ಸಹಕಾರ ಚುನಾವಣೆಯನ್ನು ತೆಗೆದುಕೊಂಡಿದ್ದೇವೆ. ಸ್ಥಳೀಯ ಚುನಾವಣೆಗಳನ್ನು ಗೆದ್ದರೆ ಮಾಗಡಿ ಮತ್ತು ರಾಮನಗರ ಕ್ಷೇತ್ರ ಶಾಸಕ ಸ್ಥಾನಗಳಲ್ಲಿ ಜಯ ಸಾಧಿಸಿದಂತಾಗುತ್ತದೆ ಎಂದು ಹೇಳಿದರು.
ಪ್ರತಿಸ್ಪರ್ಧಿಯಾಗಿರುವ ವ್ಯಕ್ತಿ ಆರು ಬಾರಿ ನಿರ್ದೇಶಕರಾಗಿ ರೈತರ ಕಲ್ಯಾಣಕ್ಕಾಗಿ ಮಾಡಿರುವುದಾದರು ಏನು? ಹಾಲು ಒಕ್ಕೂಟದ ಭವನ ಸ್ಥಾಪಿಸಲು ಆಗಿಲ್ಲ. ಅಭ್ಯರ್ಥಿಯನ್ನು ಗುರುತಿಸಿದರೆ ಅವರನ್ನು ಅನರ್ಹ ಮಾಡಲು ಇನ್ನಿಲ್ಲದ ಕುತಂತ್ರ ಮಾಡುತ್ತಾರೆ. ಜೊತೆಗೆ ಡಿಕೆ ಬ್ರದರ್ಸ್ ಕೇವಲ ಕೆಟ್ಟದ್ದನ್ನು ಮಾಡುತ್ತಾರೆ. ಈಗ ಡಿ.ಕೆ.ಸುರೇಶ್ ಕನಕಪುರದಿಂದ ಬಮೂಲ್ ಗೆ ಆಯ್ಕೆಯಾಗಿ ಕೆಎಂಎಫ್ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾರೆ. ಇದಕ್ಕೆ ನಮ್ಮದೇನು ತಕರಾರು ಇಲ್ಲ. ಆದರೆ, ನಿಜವಾದ ಸಹಕಾರಿಗಳನ್ನು ಮೂಲೆಗುಂಪು ಮಾಡುತ್ತಿರುವುದಕ್ಕೆ ಬೇಸರವಿದೆ ಎಂದರು.ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಹಿರಿಯ ಮುಖಂಡ ಎಚ್.ಎಲ್. ಚಂದ್ರು, ಡಾ.ಭರತ್, ದಿಶಾ ಸಮಿತಿ ಸದಸ್ಯ ಶಿವಣ್ಣ ಮಾತನಾ ಡಿದರು, ಬಮೂಲ್ ನಿರ್ದೇಶಕ ಸ್ಥಾನದ ಆಕಾಂಕ್ಷಿತ ಅಭ್ಯರ್ಥಿ ರೇಣುಕಮ್ಮಕೆಂಪಣ್ಣ, ಬಿಡದಿ ಪುರಸಭೆ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಗೋಪಾಲ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಮುಖಂಡರಾದ ಕಲ್ಲುಗೋಪಳ್ಳಿ ಕೆಂಪಣ್ಣ, ಚಿಕ್ಕಣ್ಣಯ್ಯ, ಜಿ.ಟಿ.ಕೃಷ್ಣ, ಶೇಷಪ್ಪ, ಡಾ.ಭರತ್, ಕೆ.ಚಂದ್ರಯ್ಯ, ಸಿ. ಅಶ್ವಥ್, ಪ್ರಕಾಶ್, ಶಿವಕುಮಾರ ಸ್ವಾಮಿ, ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಶರತ್, ಸೋಮೇಗೌಡ ಮತ್ತಿತರರು ಭಾಗವಹಿಸಿದ್ದರು.
---------ಬಮೂಲ್ ಚುನಾವಣೆಯ ಪ್ರತಿಸ್ಪರ್ದಿಗಳು ರಣತಂತ್ರ ರೂಪಿಸುವಲ್ಲಿ ನಿಸ್ಸೀಮರು. ಅವರು ನಮ್ಮ ಪಕ್ಷದ ಆಶೀರ್ವಾದದಿಂದಲೂ ನಿರ್ದೇಶಕರಾಗಿದ್ದವರು. ಅವರು 6 ಅವಧಿಗೆ ನಿರ್ದೇಶಕರಾಗಿ ಬಮೂಲ್ ಅಧ್ಯಕ್ಷರು, ಕೆಎಂಎಫ್ ಅಧ್ಯಕ್ಷರಾಗಿದ್ದವರು ಮಾಡಿರುವ ಶಾಶ್ವತ ಕೆಲಸಗಳಾದರೂ ಏನು, ಸಂಘದ ಸಿಇಓಗಳು ಈ ಬಾರಿ ಬದಲಾವಣೆ ತನ್ನಿ. ಜೆಡಿಎಸ್ ನಿರ್ದೇಶಕರನ್ನು ಆಯ್ಕೆ ಮಾಡಿ ಹೊಸ ಅಧ್ಯಾಯ ಆರಂಭಿಸೋಣ.
- ಎ.ಮಂಜುನಾಥ್, ಜಿಲ್ಲಾಧ್ಯಕ್ಷರು, ಜೆಡಿಎಸ್