ಸಾರಾಂಶ
ರಾಮನಗರ: ಹೈನುಗಾರರ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಪ್ರಗತಿ ಸಾಧಿಸಬೇಕೆಂಬ ಉದ್ದೇಶದಿಂದ ಬಮೂಲ್ ಆರ್ಥಿಕ ನೆರವು ಕಲ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಮೂಲ್ ನಿರ್ದೇಶಕ ಪಿ.ನಾಗರಾಜು ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹನುಮಂತಯ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಮ್ಮಿಕೊಂಡಿದ್ದ ಕೆಂಗಲ್ ಹನುಮಂತಯ್ಯ 118ನೇ ಜನ್ಮ ದಿನಾಚರಣೆ ಅಂಗವಾಗಿ ಬಮೂಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರದ ಚೆಕ್ ವಿತರಿಸಿ ಅವರು ಮಾತನಾಡಿದರು.ರಾಮನಗರ ತಾಲೂಕಿನ ಹಾಲು ಉತ್ಪಾದಕರ 250 ಮಕ್ಕಳಿಗೆ ಸುಮಾರು 12 ಲಕ್ಷ ರು. ಗಳ ಪ್ರತಿಭಾ ಪುರಸ್ಕಾರ ಚೆಕ್ ವಿತರಣೆ ಮಾಡುತ್ತಿದ್ದೇವೆ. ಇದರಿಂದ ಮಕ್ಕಳ ಶೈಕ್ಷಣಿಕ ಕಾರ್ಯಗಳಿಗೆ ಉತ್ತೇಜನ ನೀಡುವ ಕೆಲಸ ಮಾಡಲಾಗುತ್ತಿದೆ. ಈ ಕಾರ್ಯ ನನಗೆ ಬಹಳ ತೃಪ್ತಿ ತಂದು ಕೊಟ್ಟಿದೆ ಎಂದರು.
ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ದಕ್ಷ ಆಡಳಿತಗಾರ. ಈ ನೆಲದ ಮಗ ಎನ್ನುವ ಹೆಗ್ಗಳಿಕೆ ಈ ರಾಮನಗರ ತಾಲೂಕಿಗಿದೆ. ಅವರ ಆಡಳಿತ ಕಾರ್ಯ ವೈಖರಿ ಇಂದು ಆಡಳಿತ ನಡೆಸುತ್ತಿರುವ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.ರಾಜ್ಯದಲ್ಲಿ ಕೆಂಗಲ್ ಅವರ ಹೆಸರನ್ನು ತಡವಾಗಿ ಸ್ಮರಿಸುವ ಕೆಲಸವನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅವರ ಆಚಾರ- ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡುವ ನಿಟ್ಟಿನಲ್ಲಿ ಅವರನ್ನು ಕುರಿತ ಪುಸ್ತಕ ಹೊರತರಬೇಕು. ಅದಕ್ಕೆ ನಮ್ಮ ಸಹಕಾರವಿರಲಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಪ್ರೊ.ಎಂ.ಶಿವನಂಜಯ್ಯ ಮಾತನಾಡಿ, ಕೆಂಗಲ್ ಹನುಮಂತಯ್ಯ ಅವರಂತಹ ಸೈದ್ಧಾಂತಿಕ ವ್ಯಕ್ತಿ ಮತ್ತೊಬ್ಬರಿಲ್ಲ. ವಕೀಲ ವೃತ್ತಿಯನ್ನು ತೊರೆದು ನಾಡು, ನುಡಿ ಪ್ರೇಮಕ್ಕಾಗಿ ರಾಜಕಾರಣಿಯಾದರು. ಬೆಂಗಳೂರನ್ನು ಕರ್ನಾಟಕದ ರಾಜಧಾನಿಯನ್ನಾಗಿ ಮಾಡಿದ ಮೇಲೆ ವಿಧಾನಸೌಧವನ್ನು ನಿಷ್ಠೆಯಿಂದ ಕಟ್ಟಿದರು. ಅವರೊಬ್ಬ ದಾರ್ಶನಿಕರು ಎಂದು ಬಣ್ಣಿಸಿದರು.ಸಾಹಿತಿ ಸು.ಚಿ.ಗಂಗಾಧರಯ್ಯ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ನಗರಸಭೆ ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಗಿರಿಜಮ್ಮ ಮತ್ತಿತರರು ಭಾಗವಹಿಸಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುತ್ಥಳಿಗೆ ರಾಜಕಾರಣಿಗಳು ಹಾಗೂ ಹನುಮಂತಯ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು.
(ಫೋಟೋ ಕ್ಯಾಫ್ಷನ್)ರಾಮನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ರಾಜಕಾರಣಿಗಳು ಕೆಂಗಲ್ ಹನುಮಂತಯ್ಯ ಪುತ್ಥಳಿಕೆ ಮಾಲಾರ್ಪಣೆ ಮಾಡಿದರು.