ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ರೈತರು ಪೂರೈಸುವ 40 ಲಕ್ಷ ಲೀಟರ್ ಹಾಲಿಗೆ ಪ್ರತಿ ಲೀಟರ್ ಗೆ 1 ರುಪಾಯಿ ವಿಶೇಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಒಕ್ಕೂಟ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ ತಿಳಿಸಿದರು.
ಸೋಲದೇವನಹಳ್ಳಿ ಡೇರಿ ಬೆಳ್ಳಿ ಹಬ್ಬ, ಹೈಮಾಸ್ಟ್ ದೀಪಗಳ ಲೋಕಾರ್ಪಣೆ ಹಾಗೂ ಹಾಲು ಕರೆಯುವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಬಮೂಲ್ ಒಕ್ಕೂಟದಲ್ಲಿ ಪ್ರತಿದಿನ 16 ಲಕ್ಷ ಕೆ.ಜಿ ಹಾಲು ಶೇಖರಣೆಯಾಗುತ್ತಿದ್ದು, 9.71 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ನೆಲಮಂಗಲ ತಾಲೂಕೊಂದರಲ್ಲೇ ನಿತ್ಯ 1.14 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಒಕ್ಕೂಟದ ವತಿಯಿಂದ ಕಳೆದ ಹತ್ತು ತಿಂಗಳಲ್ಲಿ ರೈತರಿಗೆ ವೈದ್ಯಕೀಯ ವೆಚ್ಚ, ಮರಣ ಪರಿಹಾರ, ಸಿಬ್ಬಂದಿ ನಿವೃತ್ತಿ ಸೌಲಭ್ಯ ಸೇರಿದಂತೆ ಒಟ್ಟು 84 ಲಕ್ಷ ರು. ಅನುದಾನವನ್ನು ವಿವಿಧ ಜನಪರ ಕೆಲಸಗಳಿಗೆ ಬಳಕೆ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವಂತೆ ರಬ್ಬರ್ ಮ್ಯಾಟ್ ಹಾಗೂ ಹಾಲು ಕರೆಯುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ಗ್ರಾಮದ 100 ಹಾಲು ಉತ್ಪಾದಕರಿಗೆ ಸಂಘದ ವತಿಯಿಂದ ಬೆಳ್ಳಿ ನಾಣ್ಯಗಳನ್ನು ವಿತರಿಸಲಾಯಿತು. ಹಾಲು ಕರೆಯುವ ಸ್ಪರ್ಧೆಯಲ್ಲಿ ಧರ್ಮನಾಯಕನತಾಂಡ್ಯದ ವಿಠಲ ಪ್ರಥಮ, ಮುನಿರಾಜು ದ್ವಿತೀಯ ಹಾಗೂ ರವಿಕುಮಾರ್ ತೃತೀಯ ಸ್ಥಾನ ಪಡೆದರು. ನಟ ವಿನೋದ್ ರಾಜ್ ಅವರು ವಿಜೇತರಿಗೆ ನಗದು ಬಹುಮಾನ ನೀಡಿ ಅಭಿನಂದಿಸಿದರು. ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ವಿಜೇತ ರೈತರಿಗೆ ಪಶುಸಂಗೋಪನಾ ಇಲಾಖೆಯಿಂದ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಟ ವಿನೋದ್ ರಾಜ್, ಪಶುಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಮು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಟ್ಟಾಭಿರಾಮಯ್ಯ, ನಾಗರಾಜು, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಸಂಪತ್ ಬಾಬು, ಹಿರಿಯ ವಕೀಲ ಅನ್ನದಾನಯ್ಯ, ನೆಲಮಂಗಲ ಶಿಬಿರದ ಸಹಾಯಕ ವ್ಯವಸ್ಥಾಪಕ ಡಾ.ಆದರ್ಶ, ಸೋಲದೇವನಹಳ್ಳಿ ಹಾಲಿನ ಡೇರಿ ಅಧ್ಯಕ್ಷ ಬಸವರಾಜು, ಸಿಇಒಓ ಗೋಪಾಲಯ್ಯ, ವಿಸ್ತಾರಣಾಧಿಕಾರಿ ಅಶೋಕ್, ಮುಖಂಡರಾದ ಭವಾನಿಶಂಕರ್ ಮಂಜುನಾಥ್, ಕಾರೇಹಳ್ಳಿ ಗುರು, ಸಂದೀಪ್, ರುದ್ರಪ್ಪ, ವೆಂಕಟೇಗೌಡ ನಿರ್ದೇಶಕರು ಉಪಸ್ಥಿತರಿದ್ದರು.ಪೋಟೋ 4 :
ಸೋಲದೇವನಹಳ್ಳಿ ಡೇರಿ ಬೆಳ್ಳಿ ಹಬ್ಬ, ಹೈಮಾಸ್ಟ್ ಲೈಟ್ ಲೋಕಾರ್ಪಣೆ ಹಾಗೂ ಹಾಲು ಕರೆಯುವ ಸ್ಪರ್ಧಾ ವಿಜೇತರಿಗೆ ಬಮೂಲ್ ನಿರ್ದೇಶಕ ಭವಾನಿಶಂಕರ್ ಬೈರೇಗೌಡ ಬಹುಮಾನ ವಿತರಿಸಿದರು. ನಟ ವಿನೋದ್ ರಾಜ್, ಪಶುಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಮು ಇತರರಿದ್ದರು.