ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಯೇ ಬಮುಲ್ ಗುರಿ

| Published : Jan 18 2024, 02:05 AM IST

ಸಾರಾಂಶ

ಹೊಸಕೋಟೆ: ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಹಾಲು ಒಕ್ಕೂಟ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬಮುಲ್ ಅಧ್ಯಕ್ಷ ಹೆಚ್.ಪಿ.ರಾಜಕುಮಾರ ತಿಳಿಸಿದರು.

ಹೊಸಕೋಟೆ: ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಹಾಲು ಒಕ್ಕೂಟ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬಮುಲ್ ಅಧ್ಯಕ್ಷ ಹೆಚ್.ಪಿ.ರಾಜಕುಮಾರ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಹೊಸಕೋಟೆ ಶಿಬಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಂಘ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಮುಲ್ ವತಿಯಿಂದ ಪ್ರತಿ ವರ್ಷ ಹಾಲು ಉತ್ಪಾದಕ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಣೆ ಮಾಡುವ ಕಾರ್ಯಕ್ರಮ ನೆರವೇರಿಸಿಕೊಂಡು ಬರುತ್ತಿದ್ದೇವೆ. ಬಮುಲ್ ಕೇವಲ ಹಾಲು ಉತ್ಪಾದನೆಗಷ್ಟೇ ಅಲ್ಲದೆ ಸಾಮಾಜಿಕ ಶೈಕ್ಷಣಿಕ ಪ್ರಗತಿಗೂ ಕೂಡ ತನ್ನ ಲಾಭಾಂಶದಲ್ಲಿ ಅಳಿಲು ಸೇವೆಯನ್ನ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರು ಬಮುಲ್ ಸೇವೆಯನ್ನು ಸ್ಮರಿಸುವ ಕೆಲಸ ಆಗಬೇಕು. ಮುಂದಿನ ದಿನಗಳಲ್ಲಿ ಬಮುಲ್ ಹಾಲು ಉತ್ಪಾದಕರನ್ನು ಉತ್ತೇಜಿಸುವ ದೃಷ್ಟಿಯಿಂದ ಮತ್ತಷ್ಟು ಯೋಜನೆಗಳನ್ನ ನೀಡಲಿದೆ ಎಂದರು.

ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ಮಾತನಾಡಿ, ಹಾಲು ಉತ್ಪಾದಕರ ಆಶೀರ್ವಾದದಿಂದ ಹೊಸಕೋಟೆಯಿಂದ ನಾನು 4 ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಈಗ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಹಾಲು ಉತ್ಪಾದಕರ ಕ್ಷೇತ್ರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೆ ಸರ್ಕಾರದ ಯೋಜನೆಗಳನ್ನ ಪ್ರಾಮಾಣಿಕವಾಗಿ ಹಾಲು ಉತ್ಪಾದಕರಿಗೆ ತಲುಪಿಸಿದ್ದೇನೆ. ಪ್ರಮುಖವಾಗಿ ಹಾಲು ಉತ್ಪಾದಕರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕು. ವಿದ್ಯಾರ್ಥಿಗಳು ಕೂಡ ತಂದೆ ತಾಯಿಗಳು ಕಷ್ಟಪಟ್ಟು ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ. ಚೆನ್ನಾಗಿ ಓದುವುದರ ಮೂಲಕ ತಂದೆ ತಾಯಿಯ ಹೆಸರನ್ನ ಉಳಿಸಬೇಕು ಎಂದರು.

ಬಮೂಲ್ ಕಲ್ಯಾಣ ಟ್ರಸ್ಟ್ ವ್ಯವಸ್ಥಾಪಕ ಶಿವರಾಮ್, ಹೊಸಕೋಟೆ ಶಿಬಿರ ಉಪ ವ್ಯವಸ್ಥಾಪಕ ಶಿವಾಜಿ ನಾಯಕ್, ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಾಮಣ್ಣ, ಚೊಕ್ಕಹಳ್ಳಿ ಗ್ರಾಪಂ ಅಧ್ಯಕ್ಷೆ ಮಧು ಶ್ರೀ ಕೆಂಪಣ್ಣ, ದೊಡ್ಡ ಹುಲ್ಲೂರು ಗ್ರಾಪಂ ಅಧ್ಯಕ್ಷ ನೀಲಾಂಜಿನಪ್ಪ, ಗ್ರಾಪಂ ಸದಸ್ಯ ವೆಂಕಟೇಶ್, ಯುವ ಮುಖಂಡರಾದ ಹುಲ್ಲೂರು ಕಿರಣ್, ಕುಮಾರ್, ಹರೀಶ್ ಬಾಬು, ರಮೇಶ್, ಡಿ.ಎಲ್.ಮಂಜು, ಕಿಶೋರ್, ಮಧು, ನವೀನ್, ಚಂದನ್, ಮಾನಸ್,ನಾಗೇಂದ್ರ, ಭರತ್, ಚಿನ್ನಿ, ಪ್ರಜ್ವಲ್, ರಾಣಾ ಯಶವಂತ್ ಹಾಜರಿದ್ದರು.

ಬಾಕ್ಸ್.............ಹಾಲಿನ ಪೌಡರ್‌ನಿಂದ ನಷ್ಟ

ಸರ್ಕಾರ ಶಾಲಾ ಮಕ್ಕಳಿಗೆ ಹಾಲನ್ನು ನೀಡಲು ಪೌಡರ್ ಖರೀದಿ ಮಾಡುತ್ತಿದ್ದು, ಪ್ರತಿ ಕೆಜಿಗೆ 42 ರು. ನೀಡುತ್ತಿದೆ. ನೆರೆಯ ರಾಜ್ಯಗಳಲ್ಲಿ 50ರಿಂದ 55 ರು. ನೀಡುತ್ತಿದೆ. ಇದರಿಂದ 70 ಕೋಟಿ ನಷ್ಟ ಆಗಿರುವ ಹಿನ್ನೆಲೆ ನಷ್ಟ ಸರಿದೂಗಿಸಲು ಉತ್ಪಾದಕರಿಗೆ ೨ ರು. ಕಡಿತಗೊಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ಪಾದಕರಿಗೆ 2 ರು. ಹೆಚ್ಚಳ ಮಾಡಲಾಗುವುದು. ಪ್ರಮುಖವಾಗಿ ಜಿಲ್ಲೆಯಲ್ಲಿ ಹಾಲಿನ ಉತ್ಪಾದನಾ ಪ್ರಮಾಣ ಕುಂಠಿತವಾಗಿದೆ. ಆದ್ದರಿಂದ ಹಸುಗಳನ್ನು ಮಾರಬೇಡಿ. ಬದಲಾಗಿ ಸಾಕಣೆ ಮಾಡಿ ಎಂದು ಬಮುಲ್ ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ತಿಳಿಸಿದರು.ಫೋಟೋ : 17 ಹೆಚ್‌ಎಸ್‌ಕೆ 6

ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಚಿಕ್ಕಹುಲ್ಲೂರು ಬಳಿ ಇರುವ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಬಮುಲ್ ಅಧ್ಯಕ್ಷ ಹೆಚ್.ಪಿ.ರಾಜ್‌ಕುಮಾರ್, ನಿರ್ದೇಶಕ ಹುಲ್ಲೂರು ಸಿ.ಮಂಜುನಾಥ್ ವಿತರಿಸಿದರು.