ಸಾರಾಂಶ
ಮೈಸೂರು: ಜನಸಾಮಾನ್ಯರನ್ನು, ಅದರಲ್ಲೂ ಯುವ ಸಮುದಾಯವನ್ನು ಹಾಳು ಮಾಡುತ್ತಿರುವ ಎಲ್ಲಾ ಮಾದರಿಯ ಜೂಜುಗಳನ್ನು ನಿಷೇಧಿಸಬೇಕು ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಟಿ.ಆರ್. ಸುನಿಲ್ ಆಗ್ರಹಿಸಿದ್ದಾರೆ.
ಆನ್ ಲೈನ್ ಬೆಟ್ಟಿಂಗ್ ಅನ್ನು ನಿಷೇಧಿಸಲು ಹೊಸ ಕಾನೂನನ್ನು ರೂಪಿಸಿ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಜಾರಿಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಯುವಕನೊಬ್ಬ ಆನ್ ಲೈನ್ ನಲ್ಲಿ ಬೆಟ್ಟಿಂಗ್ ಆಡಿ ಲಕ್ಷಾಂತರ ರೂಪಾಯಿ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ರಾಜ್ಯದ ಜನತೆ ದಿಗ್ಭ್ರಮೆಗೊಂಡಿದ್ದರು. ಅದೊಂದೇ ಘಟನೆಯಲ್ಲದೆ ಹಲವಾರು ವರ್ಷಗಳಿಂದ ನೂರಾರು ಯುವಜನರು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಈಗಾಗಲೇ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ ಹಾಗೂ ಸಮಾಜದಲ್ಲಿ ಅಪರಾಧಗಳು ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.ಜೂಜು ಹಾಗೂ ಆನ್ ಲೈನ್ ಬೆಟ್ಟಿಂಗ್ ಇಂದು ಗ್ರಾಮೀಣ ಹಾಗೂ ನಗರ ಪ್ರದೇಶದ ಮೂಲೆ ಮೂಲೆಗೂ ವ್ಯಾಪಿಸಿದೆ. ಈ ಹಿನ್ನೆಲೆಯಲ್ಲಿ ಯುವಜನರನ್ನು ಇಂತಹ ಬೆಟ್ಟಿಂಗ್ ಜಾಲದಲ್ಲಿ ಬೀಳದಂತೆ ತಡೆಯಲು ಕಾನೂನು ರೂಪಿಸುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ, ಜೂಜಾಟವೇ ಒಂದು ಸಮಾಜ ವಿರೋಧಿ ಚಟುವಟಿಕೆಯಾಗಿರುವ ಸಂದರ್ಭದಲ್ಲಿ ಅಧಿಕೃತ, ನೊಂದಾಯಿತ ಬೆಟ್ಟಿಂಗ್ ಜಾಲತಾಣಗಳನ್ನು ಮತ್ತು ಕೌಶಲ್ಯಾಧಾರಿತ ಬೆಟ್ಟಿಂಗ್ ಅನ್ನು ನಿಷೇಧಿಸದೇ ಕೇವಲ ಅಕ್ರಮ ಹಾಗೂ ಅನಧಿಕೃತ ಬೆಟ್ಟಿಂಗ್ ಜಾಲಗಳ ಹಾಗೂ ಅದೃಷ್ಟ ಆಧಾರಿತ ಜೂಜಿನ ವಿರುದ್ಧ ಮಾತ್ರ ನಿಷೇಧ ಹಾಗೂ ಶಿಕ್ಷೆ ಅನ್ವಯವಾಗುವಂತೆ ಕಾನೂನು ರೂಪಿಸಲು ಹೊರಟಿರುವುದು ಅತ್ಯಂತ ಹಾಸ್ಯಾಸ್ಪದ ಎಂದು ಖಂಡಿಸಿದ್ದಾರೆ.
ಮತ್ತೊಂದೆಡೆ ಬೆಟ್ಟಿಂಗ್ ಆ್ಯಪ್ ನೊಂದಾಯಿಸಿಕೊಳ್ಳಲು ಸರ್ಕಾರವೇ ಅವಕಾಶ ನೀಡುತ್ತಿದೆ. ಈ ಮೂಲಕ ಜೂಜನ್ನು ಹಿಂಬಾಗಿಲಿನ ಮೂಲಕ ಅಧಿಕೃತಗೊಳಿಸುವ ಹಾಗೂ ಇದರಿಂದ ಆದಾಯ ಹೆಚ್ಚಿಸಿಕೊಳ್ಳಲು ಹೊರಟಿರುವ ಸರ್ಕಾರದ ಈ ಹುನ್ನಾರ ಖಂಡನಿಯ. ಸರ್ಕಾರದ ಈ ಕಾನೂನಿನ ಅನ್ವಯ ಎಲ್ಲಾ ಅನಧಿಕೃತ ಬೆಟ್ಟಿಂಗ್ ಆ್ಯಪ್ ಗಳು, ಜಾಲತಾಣಗಳು ತಮ್ಮನ್ನು ಅಧಿಕೃತಗೊಳಿಸಿಕೊಂಡು ಸರ್ಕಾರದ ಮೂಗಿನಡಿಯಲ್ಲಿಯೇ, ಕಾನೂನಿನಡಿಯಲ್ಲಿಯೇ ತಮ್ಮ ದಂಧೆಯನ್ನು ನಡೆಸಲು ಎಡೆ ಮಾಡಿಕೊಡುತ್ತದೆ. ಇದರಿಂದ, ಸಾಮಾಜಿಕ ಪಿಡುಗಾದ ಜೂಜನ್ನು ನಿರ್ಣಾಯಕವಾಗಿ ತೊಡೆದು ಹಾಕುವ ಆಶಯ ಈಡೇರಿದಂತಾಗುವುದಿಲ್ಲ ಎಂದು ಆರೋಪಿಸಿದ್ದಾರೆ.ಹೀಗಾಗಿ, ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ, ಜೂಜಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಅನುವಾಗುವಂತೆ ಕಾನೂನನ್ನು ರೂಪಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.