ಅರಸೀಕೆರೆ ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧ

| Published : Dec 18 2024, 12:46 AM IST

ಸಾರಾಂಶ

ಹರಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ಡಿ. 27ರಿಂದ ದಂಡಿ ದುರುಗಮ್ಮದೇವಿ ಜಾತ್ರೆ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಜಾತ್ರೆ ಸಿದ್ಧತೆ ಕುರಿತು ಚರ್ಚಿಸಲಾಯಿತು.

ಹರಪನಹಳ್ಳಿ: ತಾಲೂಕಿನ ಅರಸೀಕೆರೆಯಲ್ಲಿ ಡಿ. 27ರಿಂದ ನಡೆಯುವ ದಂಡಿ ದುರುಗಮ್ಮದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಎಂದು ಪಿಎಸ್‌ಐ ಕೆ. ರಂಗಯ್ಯ ತಿಳಿಸಿದ್ದಾರೆ.

ಅವರು ತಾಲೂಕಿನ ಅರಸೀಕೆರೆ ಗ್ರಾಪಂನಲ್ಲಿ ನಡೆದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಜಾತ್ರೆಗೆ ಸುತ್ತಮುತ್ತಲಿನ ಊರುಗಳಿಂದ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಟ್ರಾಫಿಕ್ ಸಮಸ್ಯೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗ್ರಾಪಂ ಸದಸ್ಯರು ಮತ್ತು ಊರಿನ ಮುಖಂಡರು ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ,, ಚರಂಡಿ ಸ್ವಚ್ಛತೆ ದೇವಸ್ಥಾನಕ್ಕೆ ಹೋಗುವ ರಸ್ತೆಯ ಅಕ್ಕ ಪಕ್ಕ ಅಂಗಡಿಗಳನ್ನು ಇಡದಂತೆ ಜಾಗ್ರತೆ ವಹಿಸಬೇಕು. ವಿದ್ಯುತ್ ಸರಬರಾಜು ಹಾಗೂ ಆರೋಗ್ಯ ಇಲಾಖೆಯಿಂದ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಪಿಡಿಒ ಅಂಜಿನಪ್ಪ ಮಾತನಾಡಿ, ಈ ವರ್ಷ ದೇವಸ್ಥಾನಕ್ಕೆ ಕಳಸಾರೋಹಣ ಮಾಡುವುದರಿಂದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ, ಬೀದಿದೀಪ, ಚರಂಡಿ ವ್ಯವಸ್ಥೆ, ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ಸರಬರಾಜು ನಮ್ಮ ಆಡಳಿತ ಮಂಡಳಿಯಿಂದ ತೀರ್ಮಾನ ತೆಗೆದುಕೊಂಡು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಎ.ಇನಾಯತ್ ಉಲ್ಲಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕೆ.ನಂದ್ಯಮ್ಮ, ಗ್ರಾಪಂ ಸದಸ್ಯರಾದ ಕೆ.ಆನಂದಪ್ಪ, ಆದಮ್ ಸಾಹೇಬ್, ಅಡ್ಡಿ ಚನ್ನವೀರಪ್ಪ, ಕೆ.ಮಹಾಂತೇಶ್, ವಿ.ಮಲ್ಲೇಶ್, ಹನುಮಂತ, ರೇಖಾ, ಕೆಂಚಮ್ಮ, ಹಾಲಮ್ಮ, ಮುಖಂಡರಾದ ಪೂಜಾರ್ ಮರಿಯಪ್ಪ, ಕೆ.ಡಿ. ಅಂಜಿನಪ್ಪ, ಡಿ.ಲಕ್ಷಣ್, ಐ.ಸಲಾಂ ಸಾಹೇಬ್, ಹಾಲೇಶ್, ವೆಂಕಟೇಶ್, ಡಾ.ಸುರ್ಯನ್, ಕಾರ್ಯದರ್ಶಿ ನಾಗರಾಜ್, ಶಿವಲೀಲಾ ಪಾಲ್ಗೊಂಡಿದ್ದರು.