ಸಾರಾಂಶ
ಕೂಡ್ಲಿಗಿ: ಸರ್ಕಾರಿ ಸ್ಮಶಾನ ಭೂಮಿಯಲ್ಲಿ ದಲಿತ ವ್ಯಕ್ತಿಯ ಶವ ಹೂಳಲು ಅಡ್ಡಿಪಡಿಸಿದ ಘಟನೆ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಶನಿವಾರ ನಡೆದಿದೆ.
ಅಂತ್ಯಸಂಸ್ಕಾರಕ್ಕೆ ಅಡ್ಡಿಪಡಿಸಿದ್ದ ಮಾಕನಡಕು ರೈತ ತಿಪ್ಪೇಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಕೊನೆಗೂ ಅಂತ್ಯಕ್ರಿಯೆ ಸುಖಾಂತ್ಯ ಕಂಡಿತು.ಮಾಕನಡಕು ಗ್ರಾಪಂ ವ್ಯಾಪ್ತಿಯ ಚಿಕ್ಕಜೋಗಿಹಳ್ಳಿಯಲ್ಲಿ ಸ.ನಂ. ೨೨೫ ಪೈಕಿ ೪ ಎಕರೆ ಭೂಮಿಯನ್ನು ನಾಲ್ಕೈದು ವರ್ಷಗಳ ಹಿಂದೆ ಸರ್ಕಾರಿ ಸ್ಮಶಾನವೆಂದು ಘೋಷಿಸಲ್ಪಟ್ಟಿತ್ತು. ಕಳೆದ ಎರಡು ವರ್ಷಗಳಿಂದ ಮಾಕನಡಕು ಗ್ರಾಮದ ರೈತನೊಬ್ಬ ಈ ಭೂಮಿಯಲ್ಲಿ ತಾನು ಸಾಗುವಳಿ ಮಾಡುತ್ತೇನೆಂದು ಹೇಳುತ್ತಾ, ಈ ಸ್ಮಶಾನದಲ್ಲಿ ಶವ ಹೂಳಲು ಅಡ್ಡಿಪಡಿಸುತ್ತಾ ಬಂದಿದ್ದ. ಅದೇ ರೀತಿ ಶುಕ್ರವಾರ ರಾತ್ರಿ ಚಿಕ್ಕಜೋಗಿಹಳ್ಳಿ ದಾಸರ ಸಮುದಾಯಕ್ಕೆ ಸೇರಿದ ದಲಿತ ಕುಟುಂಬದ ವ್ಯಕ್ತಿ ಮೃತಪಟ್ಟಿದ್ದರು. ಶನಿವಾರ ಅಂತ್ಯಕ್ರಿಯೆಗೆ ಶವ ತೆಗೆದುಕೊಂಡು ಸ್ಮಶಾನಕ್ಕೆ ಹೋದಾಗ ಅಂತ್ಯಕ್ರಿಯೆಗೆ ಅಡ್ಡಿಪಡ್ಡಿಸಿದ್ದ. ಮೃತನ ಕುಟುಂಬದವರು ಪಿಡಿಒ, ಕೂಡ್ಲಿಗಿ ತಹಸೀಲ್ದಾರಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಮಶಾನ ಭೂಮಿ ಸಾರ್ವಜನಿಕರಿಗೆ ಸೇರಿದ್ದು ಅಂತ್ಯಕ್ರಿಯೆಗೆ ಸೂಚಿಸಿದ್ದಾರೆ.
ಸಾರ್ವಜನಿಕರ ಮನವಿಗೆ ಸ್ಪಂದಿಸಿ ಗ್ರಾಪಂ ಪಿಡಿಒ ಕಾನಹೊಸಹಳ್ಳಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ನಂತರ ಸ್ಥಳಕ್ಕೆ ಪಿಎಸೈ ಎರಿಯಪ್ಪ ಅಂಗಡಿ, ಸಿಬ್ಬಂದಿ ಆಗಮಿಸಿ ಅಂತ್ಯಕ್ರಿಯೆಗೆ ಅವಕಾಶ ಮಾಡಿಕೊಟ್ಟರು.ಇದು ಸರ್ಕಾರಿ ಸ್ಮಶಾನ ಭೂಮಿ. ಸಾರ್ವಜನಿಕರು ಮುಕ್ತವಾಗಿ ಅಂತ್ಯಕ್ರಿಯೆ ಮಾಡಬಹುದು ಎನ್ನುತ್ತಾರೆ ಮಾಕನಡಕು ಗ್ರಾಪಂ ಅಧ್ಯಕ್ಷ ಜೆ.ಎಂ. ರಾಜೇಶ್‌ನಾಯ್ಕ.