ಸಾರಾಂಶ
ಸಮಾರಂಭಗಳಲ್ಲಿ ಮದ್ಯ ಬಳಸುವುದಕ್ಕೆ ಅಬಕಾರಿ ಇಲಾಖೆ ವಿಧಿಸಿರುವ ನಿರ್ಬಂಧ ಹಾಗೂ ಅನುಮತಿ ಪಡೆಯಬೇಕೇಂಬ ನಿಯಮ ಹೇರಿರುವುದನ್ನು ಪೊನ್ನಂಪೇಟೆ ಕೊಡವ ಸಮಾಜ ತೀವ್ರವಾಗಿ ವಿರೋಧಿಸಿದ್ದು ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಶ್ರೀಮಂಗಲ : ಸಮಾರಂಭಗಳಲ್ಲಿ ಮದ್ಯ ಬಳಸುವುದಕ್ಕೆ ಅಬಕಾರಿ ಇಲಾಖೆ ವಿಧಿಸಿರುವ ನಿರ್ಬಂಧ ಹಾಗೂ ಅನುಮತಿ ಪಡೆಯಬೇಕೆಂಬ ನಿಯಮ ಹೇರಿರುವುದನ್ನು ಪೊನ್ನಂಪೇಟೆ ಕೊಡವ ಸಮಾಜ ತೀವ್ರವಾಗಿ ವಿರೋಧಿಸಿದ್ದು, ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ.ಮೋಟಯ್ಯ ಅವರು ಸಮಾರಂಭಗಳಿಗೆ ಮದ್ಯ ಸೇರಿಸುವ ನಿಯಮಾವಳಿ ಬಗ್ಗೆ ಈಗಾಗಲೇ ಅಬಕಾರಿ ಇಲಾಖೆ ಸುತ್ತೋಲೆ ಹೊರಡಿಸಿದ್ದು ಕೊಡವ ಜನಾಂಗದಲ್ಲಿ ಯಾವುದೇ ಸಮಾರಂಭಗಳಿಗೆ ಅನಾದಿಕಾಲದಿಂದಲೂ ನಮ್ಮ ಗುರು ಕಾರೋ ಣರಿಗೆ, ಹಿರಿಯರಿಗೆ ಎಡೆ (ಮೀದಿ) ಇಡುವ ಕಾರ್ಯಕ್ರಮಕ್ಕೆ ಮದ್ಯವನ್ನು ಅರ್ಪಣೆ ಮಾಡುತ್ತಿರುವುದು ನಡೆದುಕೊಂಡು ಬಂದ ಪದ್ಧತಿಯಾಗಿದೆ. ಇದೀಗ ಅಬಕಾರಿ ಕಾಯ್ದೆ ಹಲವಾರು ವರ್ಷಗಳಿಂದ ಜಾರಿಯಲ್ಲಿದ್ದು ನಾವು ಕೊಡವ ಜನಾಂಗದವರು ನಮ್ಮ ಪದ್ಧತಿಯಲ್ಲಿ ವಿವಾಹ, ನಿಶ್ಚಿತಾರ್ಥ ನಾಮಕರಣ ಸಮಾರಂಭ, ತಿಥಿ ಕರ್ಮಾಂತರ, ಗುರು ಕಾರೋಣರಿಗೆ ಕೊಡವ ಪದ್ಧತಿಯಲ್ಲಿ ಮದ್ಯವನ್ನು ಬಳಸುತ್ತೇವೆ, ಕೊಡವ ಸಮಾಜದಲ್ಲಿ ನಡೆಯುವ ಸಮಾರಂಭ ಮಾತ್ರವಲ್ಲದೆ, ಐನ್ ಮನೆ, ಕೈಮಡ ಗುರುಕಾರೋಣರಿಗೆ ಕೊಡುವ ಹಾಗೂ ಮನೆಗಳಲ್ಲಿ ತಿಥಿಕರ್ಮಂತರ ಹಾಗೂ ನಾಮಕರಣ ಇಂತಹ ಸಮಾರಂಭಗಳಲ್ಲಿಯೂ ಸಹ ಮದ್ಯ ಬಳಸುತ್ತೇವೆ. ಅಬಕಾರಿ ಇಲಾಖೆ ದಿಡೀರಾಗಿ ಇಂತಹ ಆದೇಶದಿಂದ ಪೂರ್ವಿಕರ ಕಾಲದಿಂದಲೇ ನಡೆದುಕೊಂಡು ಬರುತ್ತಿರುವ ಕೊಡವ ಸಂಪ್ರದಾಯ ಹಾಗೂ ಪದ್ಧತಿಗಳಿಗೆ ತಡೆ ಮಾಡುತ್ತಿರುವುದು ಹಾಗೂ ಅದಕ್ಕೆ ಧಕ್ಕೆ ತರುತ್ತಿರುವುದು ಸರಿಯಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಆದ್ದರಿಂದ ಈ ಸುತ್ತೋಲೆಯನ್ನು ಹಿಂಪಡೆದು ಯಥಾ ಸ್ಥಿತಿಯಲ್ಲಿ ಮುಂದುವರೆಯುವಂತೆ ಅವರು ಒತ್ತಾಯಿಸಿದ್ದು, ಒಂದು ಪಕ್ಷ ಪರವಾನಿಗೆ ತೆಗೆಯುವ ಸ್ಥಿತಿ ನಿರ್ಮಾಣವಾದಲ್ಲಿ ಪೊನ್ನಂಪೇಟೆ ಕೊಡವ ಸಮಾಜ ಖಂಡಿಸುವುದಲ್ಲದೆ, ತೀವ್ರತರದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಚೀರಂಡ ಕಂದಾ ಸುಬ್ಬಯ್ಯ, ಚೆಪ್ಪುಡೀರ ರಾಕೇಶ್ ದೇವಯ್ಯ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.