ಸಾರಾಂಶ
ಬೀರೂರು : ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಪ್ರವೇಶಿಸಿದ ಕಾರಣಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿ ದಲಿತರಿಗೆ ದಂಡ ಹಾಕಿರುವ ಪ್ರಕರಣ ಕುರಿತಂತೆ ತಹಸೀಲ್ದಾರ್ ಪೂರ್ಣಿಮಾ ಶಾಂತಿ ಸಭೆ ಮೂಲಕ ಸಂಧಾನ ನಡೆಸಿ ಗ್ರಾಮದಲ್ಲಿ ಸೌಹಾರ್ಧತೆ ಕಾಪಾಡಿಕೊಂಡು ದೇವಾಲಯದಲ್ಲಿ ಎಂದಿನಂತೆ ಪೂಜೆ ನಡೆಸಲು ಆದೇಶಿಸಿದ್ದಾರೆ.
ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಕಾಂಪೌಂಡ್ ಒಳಗೆ ಎರಡು ದಿನದ ಹಿಂದೆ ಬಿ.ಕೋಡಿಹಳ್ಳಿ ಗ್ರಾಮದ ಮಂಜಪ್ಪ ಹಾಗೂ ಮದನ್ ಎಂಬುವರು ಹೋಗಿದ್ದರು ಎಂಬ ಕಾರಣಕ್ಕೆ ಗ್ರಾಮದ ಸವರ್ಣೀಯರು ಆ ಇಬ್ಬರಿಗೂ ದಂಡ ಹಾಕಿ ದೇವಸ್ಥಾನಕ್ಕೆ ಬೀಗ ಹಾಕಿದ್ದರು.
ನಂತರ ಎರಡು ದಿನದಿಂದ ಆಂಜನೇಯನಿಗೆ ಪೂಜೆ ಕೂಡ ನಿಲ್ಲಿಸಲಾಗಿತ್ತು. ಅಲ್ಲದೆ ದೇಗುಲ ಆವರಣಕ್ಕೆ ಹೋಗಿದ್ದ ಮಂಜಪ್ಪ ಹಾಗೂ ಮದನ್ ಎಂಬ ಇಬ್ಬರಿಗೂ ಗ್ರಾಮಸ್ಥರು ದಂಡ ಹಾಕಿದ್ದರು. ದೇವಸ್ಥಾನದ ಪೂಜೆ ನಡೆಯಬೇಕು ಅಂದರೆ ₹2.5 ಲಕ್ಷ ನೀಡಬೇಕು ಆಗ್ರಹಿಸಿದ್ದಾರೆ. ದೇವಸ್ಥಾನದ ಗರ್ಭಗುಡಿ ಹಾಗೂ ಕಾಂಪೌಂಡ್ ಶುದ್ಧೀಕರಣಕ್ಕಾಗಿ ₹2.5 ಲಕ್ಷ ನೀಡಿ, ನೀವು ಕಾಂಪೌಂಡ್ ನಿಂದ ಹೊರಗೆ ನಿಂತು ಪೂಜೆ ಮಾಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.
ದೇವಸ್ಥಾನ ಆವರಣಕ್ಕೆ ಹೋಗಿದ್ದಕ್ಕೆ ಗ್ರಾಮಸ್ಥರು ದೇವಸ್ಥಾನಕ್ಕೆ ಬೀಗ ಹಾಕಿ, ದಂಡ ಹಾಕಿರುವ ಬಗ್ಗೆ ಮಂಜಪ್ಪ ತಹಸೀಲ್ದಾರ್‌ಗೆ ದೂರು ನೀಡುವ ಜೊತೆ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಸಮಿತಿ ಸಭೆಯಲ್ಲಿ ಇದರ ಈ ಬಗ್ಗೆ ಧ್ವನಿ ಎತ್ತಿದ್ದರು.ಈ ಹಿನ್ನೆಲೆಯಲ್ಲಿ ಗುರುವಾರ ಬೀರೂರು ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಸಮ್ಮುಖದಲ್ಲಿ ಬಿ.ಕೋಡಿಹಳ್ಳಿ ಗ್ರಾಮದ ಎರಡು ಕೋಮಿನವರನ್ನು ಕರೆಸಿ ಶಾಂತಿ ಸಭೆ ನಡೆಸಿದರು.
ಗ್ರಾಮಗಳಲ್ಲಿ ಪ್ರತಿಯೊಬ್ಬರು ಸೌಹಾರ್ಧತೆಯಿಂದ ನಡೆದುಕೊಳ್ಳಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು. ದೂರುದಾರರು ನೀಡಿದ ದೂರಿನಂತೆ ಎರಡು ಕಡೆಯವರ ವಾದ ಆಲಿಸಿದ್ದು ಗ್ರಾಮದ ಎಲ್ಲಾ ಜಾತಿಯವರಿಗೂ ಪೂಜೆ ಸಲ್ಲಿಸಲು ಅವಕಾಶವಿದೆ. ಯಾರಿಗೂ ನಿರ್ಬಂಧವಿರುವುದಿಲ್ಲ. ಪೂಜೆ ಮಾಡುವ ವಿಚಾರದಲ್ಲಿ ಗ್ರಾಮಸ್ಥರು ಪೂಜಾರರ ವಿಚಾರದಲ್ಲಿ ನೀವೆ ನಿರ್ಧಾರ ಮಾಡಿ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಬೇಕು.
ಮುಂದಿನ ದಿನಗಳಲ್ಲಿ ಶೋಷಣೆ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮಕ್ಕೆ ಬದ್ಧವಾಗಿರುತ್ತದೆ ಎಂದು ಎಚ್ಚರಿಸಿದ ಅವರು ಸಂವಿಧಾನ ಎಲ್ಲರಿಗೂ ಒಂದೇ ಆಗಿರುವುದರಿಂದ ನಾವೆಲ್ಲ ಒಂದೆ ಎಂದು ಭಾವಿಸಿ ಸಮಾಜದಲ್ಲಿ ಜೀವಿಸಬೇಕು. ನಾಳೆಯಿಂದ ಎಂದಿನಂತೆ ದೇವರಿಗೆ ನಿತ್ಯ ಪೂಜೆ ಆಗಬೇಕು. ಇದರ ವರದಿಯನ್ನು ನೀಡಬೇಕು ಎಂದು ಆದೇಶಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಕಡೂರು ವೃತ್ತ ನಿರೀಕ್ಷಕ ರಫೀಕ್, ಪಿಎಸೈ ಸಜಿತ್ ಕುಮಾರ್, ಬಿ. ಕೋಡಿಹಳ್ಳಿ ಗ್ರಾಮಸ್ಥರಾದ ಕುಮಾರ್, ಪ್ರವೀಣ್, ಮಲ್ಲೇಶಪ್ಪ, ಮಂಜಪ್ಪ, ಮೂರ್ತಿ, ವಿಜಯಕುಮಾರ್, ಸೇರಿದಂತೆ ಮತ್ತಿತರರು ಇದ್ದರು. 19 ಬೀರೂರು 1ಬೀರೂರಿನ ಪೊಲೀಸ್ ಠಾಣೆಯಲ್ಲಿ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ ಪ್ರವೇಶ ನಿಷೇದ ಪ್ರಕರಣದ ಹಿನ್ನಲೆಯಲ್ಲಿ ತಹಸೀಲ್ದಾರ್ ಪೂರ್ಣಿಮಾ ಶಾಂತಿಸಭೆ ನಡೆಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಕಡೂರು ವೃತ್ತ ನಿರೀಕ್ಷಕ ರಫೀಕ್, ಪಿಎಸೈ ಸಜಿತ್ ಕುಮಾರ್ ಇದ್ದರು.