ತುಂಗಭದ್ರಾ ನದಿ ರಕ್ಷಿಸಲು 10 ವರ್ಷ ಮರಳುಗಾರಿಕೆ ನಿಷೇಧಿಸಿ

| Published : Mar 29 2025, 12:32 AM IST

ಸಾರಾಂಶ

ಅಪಾಯದ ಅಂಚಿನಲ್ಲಿರುವ ತುಂಗಭದ್ರಾ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ಮಾಡಿದ್ದಾರೆ.

- ಹರಿಹರ ತಾಲೂಕು ಕಚೇರಿ ಮೂಲಕ ಸರ್ಕಾರಕ್ಕೆ ದಲಿತ ಸಂಘರ್ಷ ಸಮಿತಿ ಮನವಿ

- - -

ಕನ್ನಡಪ್ರಭ ವಾರ್ತೆ ಹರಿಹರ ಅಪಾಯದ ಅಂಚಿನಲ್ಲಿರುವ ತುಂಗಭದ್ರಾ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ತಾಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ಮಾಡಿದರು.

ನಗರದ ಕ.ದ.ಸಂ.ಸ. ವತಿಯಿಂದ ಶುಕ್ರವಾರ ತಾಲೂಕು ಕಚೇರಿ ಶಿರಸ್ತೇದಾರ್ ಅಶೋಕ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ತುಂಗಭದ್ರಾ ನದಿಯು ಮಧ್ಯ, ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜೀವನದಿಯಾಗಿದೆ. 2 ದಶಕಗಳಿಂದ ಅಕ್ರಮ-ಸಕ್ರಮ ವಿಧಾನದಲ್ಲಿ ಅತಿಯಾದ ಮರಳುಗಾರಿಕೆ ನಡೆಸಲಾಗಿದೆ. ನದಿದಡದ ನದಿ ಖರಾಬು ಪ್ರದೇಶದ ಜಮೀನಿನಲ್ಲಿಯೂ ಅತಿಯಾದ ಮಣ್ಣು ಗಣಿಗಾರಿಕೆ ನಡೆದಿದೆ. ಇದರ ಪರಿಣಾಮ ನದಿಯ ಅಸ್ತಿತ್ವಕ್ಕೆ ತೀವ್ರ ಅಪಾಯ ಎದುರಾಗಿದೆ. ನದಿ ಖರಾಬ್ ಜಮೀನನ್ನು ರಕ್ಷಿಸಬೇಕು ಎಂದರು.

ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ, ಕೊಪ್ಪಳ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ನದಿಯು ಹರಿದುಬರುವ ಪ್ರದೇಶಗಳ ಬ್ಲಾಕ್‍ಗಳಿಗೆ ಸರ್ಕಾರದಿಂದಲೇ ಮರಳುಗಾರಿಕೆ ನಡೆಸಲು ಟೆಂಡರ್ ನೀಡಲಾಗುತ್ತಿದೆ. ಬಹುತೇಕ ಟೆಂಡರ್‌ದಾರರು ನಿಯಮ ಉಲ್ಲಂಘಿಸಿ ನದಿಯ ಒಡಲನ್ನು ಬಗೆದು ಮರಳುಗಾರಿಕೆ ನಡೆಸುತ್ತಿದ್ದಾರೆ. ಉಳಿದಂತೆ ಟೆಂಡರ್ ಪ್ರದೇಶಕ್ಕೆ ಒಳಪಡದ ಹಾಗೂ ಟೆಂಡರ್ ಅವಧಿ ಮುಗಿದಾಗ ಅಕ್ರಮ ಮರಳುಗಾರಿಕೆ ನಡೆಯುತ್ತಾರೆ ಎಂದು ಕಿಡಿಕಾರಿದರು.

ಹೀಗೆ ಅಕ್ರಮ ಮತ್ತು ಸಕ್ರಮ ರೂಪದಲ್ಲಿ ಅತಿಯಾದ ಮರಳುಗಾರಿಕೆಯು ನದಿ ದಡ ಹಾಗೂ ನದಿ ಒಡಲಿನ ರಚನೆಯನ್ನೇ ಹದಗೆಡಸಿದೆ. ನದಿ ಪಾತ್ರದಲ್ಲಿ ಮರಳಿಗಾಗಿ 10 ರಿಂದ 20 ಅಡಿ ಆಳದವರೆಗೆ ಗುಂಡಿಗಳನ್ನು ತೋಡಿದ್ದಾರೆ. ನದಿಯನ್ನು ಆಶ್ರಯಿಸಿದ ಜಲಚರ, ಪ್ರಾಣಿ, ಪಕ್ಷಿ, ಜನಗಳ ಅಸ್ತಿತ್ವಕ್ಕೆ ತೀವ್ರ ಧಕ್ಕೆ ಒದಗಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನದಿಗೆ ಇಳಿಯುವ ಅಸಂಖ್ಯಾತ ಜನರು, ಜಾನುವಾರುಗಳು ಮರಳು ಗಣಿಗಾರಿಕೆ ನಡೆಸಿದ ಗುಂಡಿಗಳಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿವೆ. ಇದರಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿದ್ದರೆ, ಉಳಿದವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ಇನ್ನು ಈ ನದಿಯ ನೂರಾರು ಎಕರೆ ನದಿ ಬದಿಯ ನದಿ ಖರಾಬ್ ಜಮೀನಿನ ಫಲವತ್ತಾದ ಮಣ್ಣು, ಸಾವಿರಾರು ಗಿಡ, ಕುರುಚಲು ಕಾಡುಗಳು ಮಣ್ಣು ಮಾಫಿಯಾಕ್ಕೆ ಬಲಿಯಾಗಿದೆ. ಅಕ್ರಮ ಹಾಗೂ ಅತಿಯಾದ ಮಣ್ಣು ಗಣಿಗಾರಿಕೆಯಿಂದಾಗಿ ಈ ನದಿಯ ಬಹುತೇಕ ನದಿ ಖರಾಬ್ ಜಮೀನು 10ರಿಂದ 20 ಅಡಿ ಆಳದ ಗುಂಡಿಮಯವಾಗಿದೆ ಎಂದರು.

ಮಣ್ಣು ಮಾಫಿಯಾಕ್ಕೆ ನದಿದಡದ ಹಲವು ರುದ್ರಭೂಮಿ, ಖಬರಸ್ತಾನಗಳು ಅಸ್ತಿತ್ವ ಕಳೆದುಕೊಂಡಿವೆ. ನದಿಗೆ ತಲುಪಲು ಇದ್ದ ಬಂಡಿ ರಸ್ತೆ, ಕಾಲುದಾರಿಗಳು ಮಾಯವಾಗಿವೆ. ನದಿ ಉಳಿಸುವ ಸಲುವಾಗಿ ಈ ನದಿಯ ಬ್ಲಾಕ್‍ಗಳಲ್ಲಿ 10 ವರ್ಷಗಳ ಅವಧಿಗೆ ಮರಳು ಗಣಿಗಾರಿಕೆ ಸ್ಥಗಿತಗೊಳಿಸಬೇಕು. ನದಿ ಖರಾಬ್ ಜಮೀನಿನ ರಕ್ಷಣೆಗಾಗಿ ಸೂಕ್ತ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮನವಿ ಸಲ್ಲಿಸುವ ವೇಳೆ ಪದಾಧಿಕಾರಿಗಳಾದ ಚೌಡಪ್ಪ ಸಿ.ಭಾನುವಳ್ಳಿ, ಭಾನುವಳ್ಳಿ ಗ್ರಾಪಂ ಸದಸ್ಯ ಮಂಜಪ್ಪ, ರಾಜಪ್ಪ ಬೆಣ್ಣೆ, ಜಿಗಳಿಯ ಚೌಡಪ್ಪ, ಸ್ವಾಮಿ ಲಿಂಗಪ್ಪ, ಪರಶುರಾಮ್, ರಾಜಪ್ಪ, ಹನುಮಂತರಾಜ್ ಎಚ್.ಯಲವಟ್ಟಿ, ಎಳೆಹೊಳೆ ಹನುಮಂತಪ್ಪ, ಕೀರ್ತಿ ಟಿ., ರಾಜು, ಮಹೇಶ್, ಸೋಮಶೇಖರ್, ಯುವರಾಜ್ ಹೊಸಪಾಳ್ಯ, ಕಡ್ಲೆಗೊಂದಿ ತಿಮ್ಮಣ್ಣ ಇದ್ದರು.

- - -

-28 ಎಚ್‍ಆರ್‍ಆರ್ 04.ಜೆಪಿಜಿ:

ಹರಿಹರದ ತುಂಗಭದ್ರಾ ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಕ.ದ.ಸಂ.ಸ. ಕಾರ್ಯಕರ್ತರು ಶುಕ್ರವಾರ ತಾಲೂಕು ಕಚೇರಿ ಶಿರಸ್ತೇದಾರ್ ಅಶೋಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.