ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಗಣಪತಿ ಪ್ರತಿಷ್ಠಾನ ಹಾಗೂ ವಿಸರ್ಜನಾ ಮೆರವಣಿಗೆಗಳಲ್ಲಿ ಕಡ್ಡಾಯವಾಗಿ ಡಿಜೆ ಬಳಕೆಯನ್ನು ನಿಷೇಧ ಮಾಡಲಾಗಿದ್ದು, ಅನುಮತಿ ಪಡೆಯುವಾಗ ಈ ಸೂಚನೆಯನ್ನು ಕಟ್ಟಾನಿಟ್ಟಾಗಿ ಪಾಲಿಸಬೇಕು ಎಂದು ಪೊಲೀಸ್ ಉಪ ಅಧೀಕ್ಷಕ ಲಕ್ಷ್ಮಯ್ಯ ತಿಳಿಸಿದರು.ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಮುಂಬರುವ ಗೌರಿ – ಗಣೇಶ ಹಬ್ಬದ ಗಣೇಶ ವಿಸರ್ಜನೆ ಸಂಬಂಧ ನಡೆದ ಸೌಹಾರ್ದತೆ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಏಕಾಗವಾಕ್ಷಿಯ ಮೂಲಕ ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ಅನುಮತಿಯನ್ನು ಪಡೆಯುವುದು ಅತ್ಯಾವಶ್ಯಕವಾಗಿದ್ದು, ಗ್ರಾಮಾಂತರ ಹಾಗು ಪಟ್ಟಣ ವ್ಯಾಪ್ತಿಯಲ್ಲಿ ಗಣೇಶ ಮುರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮುನ್ನಾ ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೇ ಡಿಜೆಯನ್ನು ಬಳಕೆ ಮಾಡದಂತೆ ಸೂಚನೆಯನ್ನು ನೀಡಲಾಗಿದ್ದು, ಇದನ್ನು ಆಯೋಜಕರು ಹಾಗೂ ಗ್ರಾಮದ ಮುಖಂಡರು ಕಡ್ಡಾಯವಾಗಿ ಪಾಲಿಸಬೇಕು ಎಂದರು.ಡಿಜೆ ಬಳಕೆ ಮಾಡಿ , ಹೆಚ್ಚು ಶಬ್ಧ ಮಾಡಿದರೆ, ವೃದ್ದರು, ಬಾಣಂತಿಯರು, ಮಕ್ಕಳು ಹಾಗೂ ಹೃದಯ ತೊಂದರೆಯುಳ್ಳವರಿಗೆ ತೊಂದರೆಯಾಗುತ್ತದೆ. ಡಿಜೆ ಬಳಕೆಯಿಂದ ಈ ಹಿಂದೆ ಅನೇಕ ಅವಘಡಗಳು ನಡೆದಿವೆ. ಮೂಡ್ನಾಕೂಡು ಗ್ರಾಮದಲ್ಲಿ ಯುವಕನೊಬ್ಬ ಕುಣಿಯುತ್ತಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಡಿಜೆಯನ್ನು ಸಹ ಬಾಡಿಗೆಗೆ ನೀಡದಂತೆ ಮಾಲೀಕರಿಗೆ ಸೂಚನೆ ನೀಡಿದ್ದೇವೆ. ಒಂದು ವೇಳೆ ಡಿಜೆ ಹಾಕಿದರೆ ಅಂಥವರ ಮೇಲೆ ನಿರ್ದಾಕ್ಷ್ಯಣ ಕ್ರಮ ಕೈಗೊಳ್ಳುವುದಾಗಿ ಲಕ್ಷ್ಮಯ್ಯ ಎಚ್ಚರಿಸಿದರು.
ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಬಗ್ಗೆ ಮುಂಚಿತವಾಗಿ ಪೊಲೀಸರಿಗೆ ತಿಳಿಸಬೇಕು. ಇಷ್ಟು ಪ್ರಮಾಣದಲ್ಲಿ ಜನರು ಬರುತ್ತಾರೆ. ಮತ್ತು ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರಿ ಜಾಗ, ರಸ್ತೆಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ವೇದಿಕೆಯ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿರಬೇಕು. ರಾತ್ರಿ 10 ರ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ. ಮೆರವಣಿಗೆಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಅನ್ನು ಪಡೆದುಕೊಳ್ಳಬೇಕು. ಯಾವುದೇ ಆಹಿತಕರ ಘಟನೆಗಳು ನಡೆದಂತೆ ಎಚ್ಚರಿಕೆ ವಹಿಸಿ, ಶಾಂತಿ ಸೌರ್ಹಾದತೆಯಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಬೇಕು ಎಂದು ತಿಳಿಸಿದರು.ಎಎಸ್ಪಿ ಶಶಿಧರ್ ಮಾತನಾಡಿ, ಗಣೇಶೋತ್ಸವವೂ ಸೌಹಾರ್ದತೆಯ ಸಂಕೇತವಾಗಿದ್ದು, ಎಲ್ಲರು ಸಹ ಸಹಬಾಳ್ವೆಯಿಂದ ಗೌರಿ ಗಣೇಶ ಹಬ್ಬವನ್ನು ಅರ್ಥಫೂರ್ಣವಾಗಿ ಆಚರಣೆ ಮಾಡಿ, ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ವಿರಾಟ್ ಶಿವು, ಮೂಡ್ನಾಕೂಡು ನಾಗರಾಜು ಮಾತನಾಡಿ, ಹಿಂದೂಗಳ ಹಬ್ಬವಾಗಿರುವ ಗೌರಿ ಗಣೇಶ ಹಬ್ಭಕ್ಕೆ ಯಾವುದೇ ರೀತಿ ತೊಂದರೆಯಾಗದಂತೆ ಶಾಂತಿ ಸೌರ್ಹಾಧತೆಯನ್ನು ಕಾಪಾಡಿಕೊಂಡು ಹಬ್ಬ ಆಚರಣೆಗೆ ಎಲ್ಲರು ಸಹಕಾರ ನೀಡಬೇಕು. ಡಿಜೆ ಬಳಕೆಯನ್ನು ನಿಷೇಧ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.ಸಭೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಶೇಷಾದ್ರಿ, ನವೀನ್,ಸಾಗರ್, ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕ ಮಂಜು, ಸೆಸ್ಕಾಂ ಸಹಾಯಕ ಅಭಿಯಂತರ ಮಹೇಶ್, ಲೋಕೋಪಯೋಗಿ ಇಲಾಖೆಯ ನಂಜುಂಡ, ವಿದ್ಯಾ ಗಣಪತಿ ಮಂಡಲಿಯ ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿಗಳಾದ ಬಂಗಾರನಾಯಕ, ಮಹೇಶ್ ಸೇರಿದಂತೆ ಅನೇಕರು ಇದ್ದರು.