ಮಂಗಳೂರು: ಈಶಿ ಪ್ರೊಡಕ್ಷನ್ ಲಾಂಛನದಲ್ಲಿ ಮನೋಹರ್ ರೈ ವೈಪಾಲ ನಿರ್ಮಾಣದಲ್ಲಿ ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದಲ್ಲಿ ತಯಾರಾದ ‘ಬನ’ ತುಳು ಚಲನಚಿತ್ರ ಶುಕ್ರವಾರ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಲನ ಚಿತ್ರದ ನಿರ್ಮಾಪಕ ಮನೋಹರ್ ರೈ ಮತ್ತು ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬನ’ ಸಿನಿಮಾ ಮಂಗಳೂರು, ಸುರತ್ಕಲ್, ಪಡುಬಿದ್ರೆ, ಉಡುಪಿ, ಮಣಿಪಾಲ, ಕಾರ್ಕಳ, ದೇರಳಕಟ್ಟೆ, ಪುತ್ತೂರು, ಸುಳ್ಯ, ಬೆಳ್ತಂಗಡಿ ಮೊದಲಾದ ಕಡೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಿರುವ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿ ಇಷ್ಟ ಪಟ್ಟಿದ್ದಾರೆ ಎಂದರು.ಚಿತ್ರದಲ್ಲಿ ಖ್ಯಾತ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪ ವರ್ಕಾಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜಯಪ್ರಕಾಶ್ ಶೆಟ್ಟಿ ಖಡಕ್ ಡೈಲಾಗ್ ಗಳು ಸಿನಿಮಾದ ಹೈಲೈಟ್ಸ್ ಆಗಿದೆ. ನಾಯಕನಾಗಿ ನಿಹಾಲ್ ರೈ, ನಾಯಕಿಯಾಗಿ ಕೃತಿ ಶ್ರೀನಿವಾಸ್ ಪೂಜಾರಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶರತ್ ಆಳ್ವ, ಪ್ರೀಯ ಶೆಟ್ಟಿ, ವಿಜಯಹರಿ ರೈ, ವಿಕಾಸ್ ಪುತ್ರನ್, ನಿಜರೂಪ ಶೆಟ್ಟಿ, ಸವಿತಾ ಅಂಚನ್ , ಧನ್ಯ ಪೂಜಾರಿ, ಪ್ರವೀಣ್ ಕೊಡಕ್ಕಲ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಅರುಣ್ ರೈ ಪುತ್ತೂರು ಛಾಯಾಗ್ರಹಣ ಮಾಡಿದ್ದು, ನವೀನ್ ನೇರಳ್ತೊಡಿ ಸಂಕಲನ, ಖ್ಯಾತ ಸಂಗೀತ ನಿರ್ದೇಶಕ ಜಯಕಾರ್ತಿ ಸಂಗೀತ ಚಿತ್ರಕ್ಕಿದೆ ಎಂದರು.ಪ್ರಮುಖರಾದ ಜಯಪ್ರಕಾಶ್ ಶೆಟ್ಟಿ ಉಪ್ಪಳ, ಅರುಣ್ ರೈ ಪುತ್ತೂರು, ಕೃತಿ ಶ್ರೀನಿವಾಸ್ ಪೂಜಾರಿ, ನಿಹಾಲ್ ರೈ, ಸಬಿತಾ ಅಂಚನ್, ಭವ್ಯಶ್ರಿ ಪೂಜಾರಿ ಇದ್ದರು.
ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್. ರೋಮ್ಯಾನ್ಸ್ಕಾಡಿನಲ್ಲಿ ಕಂಡುಬಂದ ಮಗುವಿನ ಜತೆಗಿದ್ದವರು ಯಾರು, ಮನೆ ಮುಂದೆ ಹಾವು ಯಾಕೆ ಪ್ರತ್ಯಕ್ಷವಾಯಿತು, ಬನಕ್ಕೆ ಹಾನಿ ಮಾಡಿದವರನ್ನು ಕಾಡಲು ಬಂತೇ ನಾಗರಾಜ ಮುಂತಾದ ಹಲವಾರು ಪ್ರಶ್ನೆಗಳೊಂದಿಗೆ, ಈ ಸಿನಿಮಾದಲ್ಲಿ ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್, ರೋಮ್ಯಾನ್ಸ್ ಎಲ್ಲವೂ ಇದೆ ಎಂದರು. ನಾಗಬನಕ್ಕೆ ಸಂಬಂಧಿಸಿ ಒಂದು ಸುಂದರ ಕಥೆಯನ್ನು ಸಿದ್ಧಪಡಿಸಿ, ಒಂದು ವರ್ಷದ ಸಿದ್ಧತೆಯೊಂದಿಗೆ ಮೂಡಿ ಬರುತ್ತಿರುವ ಸಿನಿಮಾ ಇದಾಗಿದೆ ಎಂದರು.