ಬನಹಟ್ಟಿ ಮಾರುತೇಶ್ವರ ಹಾಲೋಕುಳಿಗೆ ಸಂಭ್ರಮ ತೆರೆ

| Published : Jun 17 2024, 01:33 AM IST

ಸಾರಾಂಶ

ರಬಕವಿ-ಬನಹಟ್ಟಿ ನಗರದಲ್ಲಿ ಮಾರುತಿ ದೇವರ ಜಾತ್ರೆಯ ನಿಮಿತ್ತ ಮೂರು ದಿನಗಳ ಕಾಲ ನೀರೋಕುಳಿ ಮತ್ತು ಹಾಲೋಕುಳಿ ಸಂಭ್ರಮದಿಂದ ಜರುಗಿದವು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನಗರದಲ್ಲಿ ಮಾರುತಿ ದೇವರ ಜಾತ್ರೆಯ ನಿಮಿತ್ತ ಮೂರು ದಿನಗಳ ಕಾಲ ನೀರೋಕುಳಿ ಮತ್ತು ಹಾಲೋಕುಳಿ ಸಂಭ್ರಮದಿಂದ ಜರುಗಿದವು. ಆರತಿ ಹಿಡಿದ ಮುತ್ತೈದೆಯರು, ಸಾಂಬಾಳ ವಾದನ ಸೇರಿ ಮಂಗಳ ವಾದ್ಯಗಳೊಡನೆ ಮಾರುತಿ ದೇವರ ಪಲ್ಲಕ್ಕಿ ಸಹಿತ ಓಕುಳಿ ಆಡುವ ಯುವಕರನ್ನು ದೇಗುಲಕ್ಕೆ ಕರೆ ತಂದು ಓಕುಳಿ ಹೊಂಡದ ನೀರನ್ನು ಮಾರುತಿಗೆ ಸಮರ್ಪಿಸಿದರು.ಹಾಲೋಕುಳಿಯಲ್ಲಿ ಸುಮಾರು ೬೦ ಅಡಿಗೂ ಎತ್ತರದ ಹಾಲೋಕುಳಿ ಕಂಬ ಏರುವ ಸ್ಪರ್ಧೆಯಲ್ಲಿ ನಗರದ ಯುವಕರ ನಾಲ್ಕು ತಂಡಗಳ ಪಾಲ್ಗೊಂಡಿದ್ದವು, ಯುವಕರು ಹಾಲಗಂಬ ಏರಲು ಪ್ರಯತ್ನಿಸಿದರೆ ಕೆಳಗೆ ನಿಂತ ಹಲವು ಯುವಕರು ನೀರೆರೆಸಿ, ಗ್ರೀಸ್ ಮೆತ್ತಿದ ಕಂಭಕ್ಕೆ ಬಾಳೆ ಹಣ್ಣು, ಬೆಣ್ಣೆ ಮೊದಲಾದವುಗಳನ್ನು ಎರಚಿ ಹಾಲಗಂಬ ಏರುವ ಪ್ರಯತ್ನ ವಿಫಲಗೊಳಿಸಲು ಪ್ರಯತ್ನಿಸಿದರು. ಅವೆಲ್ಲವನ್ನೂ ಮೀರಿ ತುಗಲಿ ಲಕ್ಕವ್ವದೇವಿ, ಯಲ್ಲಮ್ಮ ದೇವಿ, ಘಟ್ಟಗಿ ಬಸವೇಶ್ವರ, ಮಹಿರ್ಷಿ ಭಗೀರಥ ತಂಡಗಳು ಹಾಲಗಂಬದ ತುದಿಮುಟ್ಟಿ ಬೆಳ್ಳಿ ಕಡೆ ಬಹುಮಾನ ಪಡೆದುಕೊಂಡರು.

ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ದೇಶ್ವರ ಶ್ರೀಗಳು, ಶ್ರೀಶಂಕರಲಿಂಗ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಾಲಚಂದ್ರ ಉಮದಿ, ಶಾಸಕ ಸಿದ್ದು ಸವದಿ, ಸಿದ್ದು ಕೊಣ್ಣೂರ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ದಲಾಲ, ಈಶ್ವರ ನಾಗರಾಳ, ಪದ್ಮಜೀತ ನಾಡಗೌಡ ಪಾಟೀಲ, ಮಲ್ಲಿಕಾರ್ಜುನ ಕುಚನೂರ, ಮಾರುತಿ ನಾಯಕ, ಬಲದೇವ ಕಟಗಿ, ಸಿದ್ಧರಾಮ ಪಾಟೀಲ, ಭೀಮಶಿ ಪಾಟೀಲ, ವಲ್ಲಿಸಾಬ ಹುಡೇದಮನಿ, ಬೆನಕಪ್ಪ ಬೆಕ್ಕೇರಿ, ಶಂಕರ ಪಾಟೀಲ, ಹನುಮಂತ ಪೂಜೇರಿ, ರಾಯಪ್ಪ ಹೆಗ್ಗಣ್ಣವರ ಸೇರಿದಂತೆ ಲಕ್ಷಾಂತರ ಭಕ್ತರಿದ್ದರು.