ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ಲಿಂಗಾಯತ ಎಲ್ಲ ಉಪ ಪಂಗಡಗಳು ಬೆಳೆಯುವುದರೊಂದಿಗೆ ಇಡೀ ವಿಶ್ವ ಮಟ್ಟದಲ್ಲಿ ಲಿಂಗಾಯತ ಸಮಾಜ ಒಂದೇ ಎನ್ನುವ ಬದ್ಧತೆ ಹೊಂದಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಪಟ್ಟಣದ ಗುಡ್ಲ ಮಡ್ಡಿ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ 16ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು ಉಪ ಪಂಗಡಗಳು ಮೂಲ ಲಿಂಗಾಯತ ಧರ್ಮಕ್ಕೆ ಚ್ಯುತಿಬಾರದಂತೆ ಎಚ್ಚರ ವಹಿಸಬೇಕು. ಜಾತಿ, ಮತ ಬೇಧ ಮಾಡದೆ ಎಲ್ಲ ಸಮಾಜಗಳೊಂದಿಗೆ ಸಹೋದರತೆ, ಸೌಜನ್ಯ ಹೊಂದಿದ್ದು, ಬಣಜಿಗ ಸಮಾಜದ ಜನರು ಸೌಹಾರ್ದ ಹಾಗೂ ಶಾಂತಿಪ್ರಿಯರು. ಬಣಜಿಗ ಸಮಾಜದಲ್ಲಿಯ ದುರ್ಬಲ ಜನರನ್ನು ಪಟ್ಟಿ ಮಾಡಿ ಅವರನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ರಾಜ್ಯದ ಬಣಜಿಗ ಸಂಘಟನೆಯಲ್ಲಿ ಆಗಿರುವ ಬಿಕ್ಕಟ್ಟು ಇಷ್ಟರಲ್ಲಿಯೇ ನಿವಾರಣೆಯಾಗಿ ರಾಜ್ಯ ಸಂಘಟನೆಗೆ ಆದಷ್ಟು ಬೇಗೆ ಕಾಯಕಲ್ಪ ನೀಡಲಾಗುವುದು. ಬಣಜಿಗ ಸಮಾಜದವರು ತಾವು ಬೆಳೆಯುವುದರೊಂದಿಗೆ ಬೇರೆ ಸಮಾಜದ ಜನರನ್ನು ಪ್ರೀತಿಸುವಂತಾಗಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂದರು.ನಾನು ಮುಖ್ಯಮಂತ್ರಿಯಾಗಿದ್ದಾಗ 43 ತಾಲೂಕುಗಳ ಘೋಷಣೆ ಮಾಡಿದ್ದು, ಆ ಪೈಕಿ ಉತ್ತರ ಕರ್ನಾಟದಲ್ಲಿಯೇ 36 ತಾಲೂಕುಗಳಿದ್ದವು. ಅದರಲ್ಲಿ ಮೂಡಲಗಿ ತಾಲೂಕು ಸಹ ಒಂದು ಎನ್ನುವ ಹೆಮ್ಮೆ ಇದೆ. ಉತ್ತರ ಕರ್ನಾಟಕದ ಬೆಳವಣಿಗೆಯನ್ನು ಮೊದಲಿನಿಂದ ಮಾಡಿಕೊಂಡು ಬಂದಿದ್ದು, ಈಗಲೂ ಅದಕ್ಕೆ ಬದ್ಧರಾಗಿ ಕಾರ್ಯ ಮಾಡುತ್ತೇನೆ ಎಂದ ಅವರು, ಮೂಡಲಗಿ ಬಣಜಿಗ ಸಂಘ ಕಳೆದ 16 ವರ್ಷಗಳಿಂದ ಕ್ರೀಯಾಶೀಲವಾಗಿ ಕಾರ್ಯ ಮಾಡುತ್ತಿದ್ದು, ಇತರ ಸಂಘಗಳಿಗೆ ಮಾದರಿಯಾಗಿ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಬಣಜಿಗ ಸಮಾಜದ ಬೆಳವಣಿಗೆಯಲ್ಲಿ ಪೂರ್ಣ ಸಹಕಾರವನ್ನು ನೀಡುವ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೋಳಿ ಅವರು ಸಂದೇಶ ನೀಡಿದ್ದಾರೆ. ಸಮಾಜದ ಜನರು ಒಕ್ಕಟ್ಟಿನಿಂದ ಬೆಳೆಯಬೇಕು ಎಂದರು.ಮುಖ್ಯಅತಿಥಿ ಸಾಹಿತಿ ಡಾ.ಸಂಗಮನಾಥ ಲೋಕಾಪುರ ಅವರು ಉಪನ್ಯಾಸವನ್ನು ನೀಡಿದರು. ದತ್ತಾತ್ರೇಯಬೋಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಣಜಿಗ ಸಮಾಜದ ಅಧ್ಯಕ್ಷ ಶಿವಪ್ಪ ಭುಜನ್ನವರ ಅಧ್ಯಕ್ಷತೆ ವಹಿಸಿದ್ದರು. ಬಣಜಿಗ ಸಮಾಜದ 75 ವಯಸ್ಸು ಪೂರೈಸಿದ ಹಿರಿಯ ಜೀವಿಗಳಿಗೆ, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿಯಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಮತ್ತು ದಾಣಿಗೆಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ಉಪಾಧ್ಯಕ್ಷ ಪ್ರಕಾಶ ಪುಠಾಣಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ವಾಣಿ, ಉಪಾಧ್ಯಕೆ ರಾಜೇಶ್ವರಿ ಗಾಡವಿ, ವೀರಭದ್ರ ಜಕಾತಿ, ಚಿದಾನಂದ ಶೆಟ್ಟರ, ಶಿವಾನಂದ ಗಾಡವಿ, ವಿರಪಾಕ್ಷ ಗಾಡವಿ, ಸುಭಾಸ ಅವಟಿ, ಸಂತೋಷ ಅಂಗಡಿ, ಪ್ರಕಾಶ ಶೀಲವಂತ, ಸಂಗಪ್ಪ ಅಂಗಡಿ, ಬಸವಣ್ಣೆಪ್ಪ ಅಂಗಡಿ ಇದ್ದರು. ಸಂಘದ ಕಾರ್ಯದರ್ಶಿ ಚಿದಾನಂದ ಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ಪ್ರಭಾವತಿ ಜಕಾತಿ ಸ್ವಾಗತಿಸಿದರು, ಬಾಲಶೇಖರ ಬಂದಿ ನಿರೂಪಿಸಿದರು, ನಿಂಗಪ್ಪ ಯಕ್ಕುಂಡಿ ವಂದಿಸಿದರು.