ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣ ಹೊರತುಪಡಿಸಿ ಗ್ರಾಮಾಂತರ ವ್ಯಾಪ್ತಿಯ ವಿವಿಧ ಹೋಬಳಿಗಳಲ್ಲಿ ಶುಕ್ರವಾರ ಸಂಜೆ ಗುಡುಗು ಸಹಿತ ಬೀಸಿದ ಭಾರೀ ಬಿರುಗಾಳಿ ಮಳೆಗೆ ಫಸಲು ಭರಿತ ಬಾಳೆ ಮತ್ತು ತೆಂಗಿನ ಮರಗಳು ಧರೆಗುರುಳಿ ಕೋಟ್ಯಾಂತ ರು. ನಷ್ಟ ಉಂಟಾಗಿರುವ ಘಟನೆ ಜರುಗಿದೆ.ಪಟ್ಟಣದಲ್ಲಿ ಮೋಡ ಕವಿದ ವಾತಾವರಣದ ನಡುವೆ ಮಳೆ ಸಿಂಚನ ಹೊರತುಪಡಿಸಿ ಬೇರೆ ಯಾವುದೇ ಅನಾಹುತವಾಗಿಲ್ಲ. ತಾಲೂಕಿನ ಕಸಬಾ. ಸಿ.ಎ.ಕೆರೆ. ಆತಗೂರು ಹಾಗೂ ಕೊಪ್ಪ ಹೋಬಳಿ ಗಳಲ್ಲಿ ಬಿರುಗಾಳಿ ಆರ್ಭಟಕ್ಕೆ ನೂರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ಫಸಲು ಭರಿತ ಬಾಳೆ, ಪಪ್ಪಾಯಿ ಹಾಗೂ ಕೆಲವು ತೆಂಗಿನ ಮರಗಳು ನಾಶವಾಗಿವೆ.
ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯ ಕೂಳಗೆರೆ ಗ್ರಾಮದಲ್ಲಿ ಪುಟ್ಟಸ್ವಾಮಿ ಅವರಿಗೆ ಸೇರಿದ 500 ಫಸಲು ಭರಿತ ಬಾಳೆ ಗಿಡಗಳು ಹಾಗೂ ಚಿಕ್ಕಣ್ಣರ ಜಮೀನಿನಲ್ಲಿದ್ದ ಹಲವಾರು ತೆಂಗಿನ ಮರಗಳು ಬಿರುಗಾಳಿ ಹೊಡೆತಕ್ಕೆ ಸಿಕ್ಕಿ ನಾಶವಾಗಿ ಸುಮಾರು 2 ಲಕ್ಷ ರು ಹಾನಿ ಸಂಭವಿಸಿದೆ.ಅರುವನಹಳ್ಳಿಯ ವೆಂಕಟೇಶ್ ಅವರಿಗೆ ಸೇರಿದ 1200 ಬಾಳೆ ಗಿಡ ಗಳು ನಾಶವಾಗಿ 4 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೆಂಪೇಗೌಡನ ದೊಡ್ಡಿ ಹೊನ್ನಮ್ಮ. ಪುಟ್ಟಸ್ವಾಮಿ ಅವುಗಳ ತಲಾ 500 ಬಾಳೆ ಗಿಡಗಳು ಬಿರುಗಾಳಿ ಮಳೆಗೆ ಸಿಲುಕಿ 5 ಲಕ್ಷ ರು. ನಷ್ಟವಾಗಿದೆ.
ಇದೇ ಗ್ರಾಮದ ವೆಂಕಟೇಗೌಡ ಹಾಗೂ ಹರೀಶ್ ವೆಂಕಟೇಶ ಅವರುಗಳ ಒಟ್ಟು 1300 ಬಾಳೇಪಸಲು ಗಾಳಿ ಕೊಡತಕ್ಕೆ ಸಿಲುಕಿ ಅಂದಾಜು 5 ಲಕ್ಷ ರು. ನಷ್ಟ ಉಂಟಾಗಿದೆ. ಹೋಬಳಿಯ ಅಂಕೇಗೌಡನದೊಡ್ಡಿ, ಹೊನ್ನ ನಾಯಕನಹಳ್ಳಿ, ಕಾಡುಕೊತ್ತನಹಳ್ಳಿ ಗ್ರಾಮಗಳಲ್ಲಿ ಸಬಲೇಗೌಡ, ಗೌರಮ್ಮ, ಸತೀಶ, ರಾಮಕೃಷ್ಣರಿಗೆ ಸೇರಿದ ಬಾಳೆ ತೋಟಗಳು ಹಾನಿಗೊಳಗಾಗಿದೆ. ಇದರಿಂದ 4 ಲಕ್ಷ ರು.ನಷ್ಟ ಉಂಟಾಗಿದೆ.ತಾಲೂಕಿನ ಕಸಬಾ ಹೋಬಳಿಯ ಹಳ್ಳಿಕೆರೆ, ಕೆ .ಬೆಳ್ಳೂರು, ಹುಲಿಕೆರೆ ಗ್ರಾಮಗಳ ಬೋರೆಯ್ಯ, ಉಮೇಶ್, ನಿಂಗಮ್ಮ, ಚನ್ನಂಕಯ್ಯ, ನಾಗಮ್ಮ, ಕೃಷ್ಣ, ರಮೇಶ, ಮಹದೇವಪ್ಪ ಹಾಗೂ ಉಮೇಶ್ ಅವರುಗಳ ಫಸಲು ಭರಿತ ಬಾಳೆ ತೋಟಗಳು, ಪಪ್ಪಾಯಿ ಬಿರುಗಾಳಿ ಹೊಡೆತದಿಂದ ನೆಲಕಚ್ಚಿ ಸುಮಾರು 25 ಲಕ್ಷ ರು ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊಪ್ಪ ಹೋಬಳಿಯ ಕೌಡ್ಲೆ. ಬೆಕ್ಕಳಲೆ ಹಾಗೂ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ರೈತರ ಹಲವಾರು ತೆಂಗಿನ ಮರಗಳು ಬಿರುಗಾಳಿ ಮಳೆ ಹೊಡೆತಕ್ಕೆ ಸಿಲುಕಿ ಧರೆಗೆ ಉರುಳಿ ಬಿದ್ದಿವೆ.ಹಳೆಹಳ್ಳಿಯಲ್ಲಿ ಬಿರುಗಾಳಿ ಸಹಿತ ಬಿದ್ದ ಮಳೆಗೆ ಸರ್ಕಾರಿ ಶಾಲೆ ಮೇಲ್ಚಾವಣಿ ಹಾರಿಹೋಗಿದೆ. ಅಲ್ಲದೆ ಶಾಲೆಯಲ್ಲಿದ್ದ ಹಲವು ಪೀಠೋಪಕರಣಗಳು ಜಖಂಗೊಂಡಿದೆ. ಆತಗೂರು ಹೋಬಳಿ ಕುಂದನಕುಪ್ಪೆ ಗ್ರಾಮದಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಮಳೆಯಿಂದಾಗಿ ರೇಷ್ಮೆ ಹುಳು ಸಾಗಾಣಿಕೆ ಮನೆಗಳ ಚಾವಣಿ ಸೇರಿದಂತೆ ಹಲವು ಮನೆಗಳ ಚಾವಣಿ ಹಾರಿ ಹೋಗಿದ್ದು ಮನೆಯಲ್ಲಿದ್ದ ದವಸ ಧಾನ್ಯ ಸೇರಿದಂತೆ ಹಲವು ವಸ್ತುಗಳು ಹಾನಿಗೊಳಗಾಗಿವೆ.
ಬಿರುಗಾಳಿ ಮಳೆಯಿಂದ ಬಾಳೆ ಮತ್ತು ತೆಂಗಿನ ಫಸಲನ್ನು ಕಳೆದುಕೊಂಡಿರುವ ರೈತರ ಜಮೀನುಗಳಿಗೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ಕೆ.ಎಮ್ .ನಿತಿನ್, ಬಿ.ಕೆ. ಸಂಪತ್ ಕುಮಾರ್, ಎಸ್. ಶಿವಪ್ರಸಾದ್ ಅವರುಗಳು ಭೇಟಿ ನೀಡಿ ಪರಿಶೀಲನೆ ಯೊಂದಿಗೆನಷ್ಟದ ಅಂದಾಜು ಕುರಿತು ರೈತರಿಂದ ಮಾಹಿತಿ ಪಡೆದುಕೊಂಡರು.