ಸಾರಾಂಶ
ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಇಂಥ ಘಟನೆ ಸಂಭವಿಸಿದಾಗ ತಾಳ್ಮೆಯಿಂದ ಸಮರ್ಪಕ ಪರಿಹಾರ ಕಂಡುಕೊಳ್ಳಬೇಕೇ ಹೊರತು ದರ್ಪ, ರಾಜಕೀಯ ಚಟ ತೀರಿಸಿಕೊಳ್ಳಲು ಆಸ್ಪತ್ರೆ ಎದುರು ಮೃತಶರೀರ ಇಟ್ಟುಕೊಂಡು ಪ್ರತಿಭಟನೆ ನಡೆಸುವುದಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ಸಿದ್ದಾಪುರ: ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಹೆರಿಗೆಯಾದ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ವಿಷಾದಕರ ಸಂಗತಿ. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಡಿಎಚ್‌ಒ ಬಳಿ ಮಾತನಾಡಿ ಉನ್ನತ ಸಮಿತಿಯ ಮೂಲಕ ತನಿಖೆ ಕೈಗೆತ್ತಿಕೊಂಡಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ಆದರೆ ಇಂಥ ಘಟನೆ ಸಂಭವಿಸಿದಾಗ ತಾಳ್ಮೆಯಿಂದ ಸಮರ್ಪಕ ಪರಿಹಾರ ಕಂಡುಕೊಳ್ಳಬೇಕೇ ಹೊರತು ದರ್ಪ, ರಾಜಕೀಯ ಚಟ ತೀರಿಸಿಕೊಳ್ಳಲು ಆಸ್ಪತ್ರೆ ಎದುರು ಮೃತಶರೀರ ಇಟ್ಟುಕೊಂಡು ಪ್ರತಿಭಟನೆ ನಡೆಸುವುದಲ್ಲ. ಎಲ್ಲ ಹಂತದ ಜನಪ್ರತಿನಿಧಿಗಳು ಬಂದು ಪರಿಹಾರ ಕಂಡುಕೊಳ್ಳಬಹುದಿತ್ತು. ಅವರು ಎಲ್ಲಿ ಹೋದರು? ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
ಕೆಲವರಿಗೆ ಆಸ್ಪತ್ರೆ, ವೈದ್ಯರು ಅನ್ನುವ ಪರಿಜ್ಞಾನವಿಲ್ಲದೇ ಮಾತನಾಡುತ್ತಾರೆ. ನಿತ್ಯ ಬರುವ ನೂರಾರು ರೋಗಿಗಳಿಗೆ ಚಿಕಿತ್ಸೆ ಕೊಡುವ ಇಲ್ಲಿನ ಆಸ್ಪತ್ರೆ ವೈದ್ಯರು, ನಮಗೆ ಕೆಲಸ ಮಾಡಲು ಭಯವಾಗುತ್ತಿದೆ. ರಕ್ಷಣೆ ಇಲ್ಲ. ಕೆಲಸ ಮಾಡುವುದು ಕಷ್ಟ ಎನ್ನುತ್ತಿದ್ದಾರೆ. ಹೆರಿಗೆ ಮತ್ತು ಮಕ್ಕಳ ವೈದ್ಯರು ಹೊಸದಾಗಿ ಬರಬೇಕಿದೆ. ಎಲ್ಲ ಕಡೆಗೂ ವೈದ್ಯರ ಕೊರತೆ ಇದ್ದು, ಶೀಘ್ರದಲ್ಲಿ ಆ ಕುರಿತು ವ್ಯವಸ್ಥೆ ಮಾಡಲು ಮುಂದಾಗುತ್ತೇವೆ ಎಂದರು.ನಾನು ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹೆರಿಗೆ ವೈದ್ಯರ ಪರವಾಗಿ ಮಾತನಾಡುತ್ತಿಲ್ಲ. ಕಳೆದ ೭ ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವರ ಕುರಿತು ಆರೋಗ್ಯ ಇಲಾಖೆಯ ಅಂಕಿಅಂಶ ಪಡೆದಿದ್ದು, ಆ ವೈದ್ಯರು ಈವರೆಗೆ ೩೭೬೨ ಸಹಜ ಹೆರಿಗೆ, ೧೫೦೦ ಸಿಸೇರಿಯನ್, ೧೭ ಇತರ ಹೆರಿಗೆಯೂ ಸೇರಿದಂತೆ ಸುಮಾರು ೫೩೫೭ ಹೆರಿಗೆಗಳನ್ನು ಮಾಡಿಸಿದ್ದು, ಈ ಎರಡು ಪ್ರಕರಣಗಳು ಮಾತ್ರ ವಿಫಲವಾಗಿವೆ ಎನ್ನುವುದು ದುರದೃಷ್ಟಕರ ಎಂದರು. ಮೃತಪಟ್ಟ ಮಹಿಳೆಯರ ಕುಟುಂಬದ ಭೇಟಿ ಮಾಡಿ, ಸಾಂತ್ವನ ಹೇಳಿ ತಲಾ ₹೫೦ ಸಾವಿರ ನೆರವು ನೀಡುತ್ತೇನೆ ಮತ್ತು ಸರ್ಕಾರದ ನೆರವಿಗೆ ಪ್ರಯತ್ನಿಸುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಕೆ. ಭಾಗ್ವತ, ವಸಂತ ನಾಯ್ಕ, ಬಿ.ಆರ್. ನಾಯ್ಕ, ಸಿ.ಆರ್. ನಾಯ್ಕ ಇದ್ದರು.