ಸಾರಾಂಶ
ಬೆಂಗಳೂರು : ಬಾಣಂತಿಯರ ಚಿಕಿತ್ಸೆಗೆ ಪಶ್ಚಿಮ ಬಂಗಾಳದ ‘ಪಶ್ಚಿಮ್ ಬಂಗಾ ಫಾರ್ಮಾಸ್ಯುಟಿಕಲ್ಸ್’ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೆಟ್ ದ್ರಾವಣದ 9 ಬ್ಯಾಚ್‌ಗಳ ದ್ರಾವಣ ಪ್ರಮಾಣಿತ ಗುಣಮಟ್ಟ ಹೊಂದಿಲ್ಲದ ಬಗ್ಗೆ ಐದು ಜಿಲ್ಲೆಗಳ ಹೆಚ್ಚುವರಿ ಔಷಧ ನಿಯಂತ್ರಕರು ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು 4ನೇ ಸರ್ಕಲ್, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ ಹಾಗೂ ಗದಗದ ಹೆಚ್ಚುವರಿ ಔಷಧ ನಿಯಂತ್ರಕರಿಂದ ಈ ಪ್ರಕರಣ ದಾಖಲಾಗಿದೆ. ಈಚೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯ ಔಷಧ ನಿಯಂತ್ರಣ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನೀಡಿದ ಸೂಚನೆಯಂತೆ ಈ ಕ್ರಮ ವಹಿಸಲಾಗಿದೆ. ಔಷಧ ನಿಯಂತ್ರಕರು 92 ಬ್ಯಾಚ್‌ಗಳ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಿದ್ದರು.
ಈ ವೇಳೆ ದ್ರಾವಣದ 22 ಬ್ಯಾಚ್‌ಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂಬ ವರದಿ ಬಂದಿದೆ. ಇದಕ್ಕೆ ಸಂಬಂಧಿಸಿ 13 ಬ್ಯಾಚ್‌ಗಳ ವರದಿ ಪ್ರಶ್ನಿಸಿ, ಕಂಪನಿಯವರು ಕೋಲ್ಕತಾದಲ್ಲಿರುವ ಕೇಂದ್ರೀಯ ಔಷಧ ಪ್ರಯೋಗಾಲಯದ ಮೆಟ್ಟಿಲೇರಿದ್ದಾರೆ. ಅವುಗಳಲ್ಲಿ 4 ಬ್ಯಾಚ್‌ಗಳು ಗುಣಮಟ್ಟ ಹೊಂದಿವೆಯೆಂದು ಕೇಂದ್ರೀಯ ಔಷಧ ಪ್ರಯೋಗಾಲಯ ವರದಿ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಉಳಿದಂತೆ ಕಂಪನಿ ಪ್ರಶ್ನಿಸದ 9 ಬ್ಯಾಚ್‌ಗಳ ಮೇಲೆ ಪ್ರಕರಣ ದಾಖಲಾಗಿದೆ.