ಬಾಣಾವರ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ

| Published : Apr 19 2025, 12:42 AM IST

ಸಾರಾಂಶ

ರಥೋತ್ಸವದ ನಿಮಿತ್ತ ಶ್ರೀ ಆಂಜನೇಯ ಸ್ವಾಮಿಯವರಿಗೆ ಅಭಿಷೇಕ ಗಂಗಾಸ್ಥಾನವನ್ನು ಮಾಡಿಸಲಾಯಿತು. ನಂತರ ಮಯೂರ ವಾಹನೋತ್ಸವ, ಶೇಷ ವಾಹನೋತ್ಸವವನ್ನು ನೆರವೇರಿಸಿ ಗುರುವಾರದಂದು ಗಣಪತಿ ಹೋಮ, ಆಂಜನೇಯ ಹೋಮ, ರಾಮಕಾರಕ ಹೋಮ, ಬ್ರಹ್ಮಹೋಮ, ರುದ್ರ ಹೋಮ, ಆಂಜನೇಯ ಸ್ವಾಮಿಯವರ ರಥಾಂಗ ಹೋಮ, ರಥ ಪ್ರತಿಷ್ಠಾಪನೆ ಮತ್ತು ಕಳಸಾಭಿಷೇಕವನ್ನು ನಡೆಸಿ ಗಜೇಂದ್ರ ಮೋಕ್ಷ ಗರುಡೋತ್ಸವವನ್ನುನಡೆಸಿ ರಾತ್ರಿ 9 ಗಂಟೆಗೆ ಕಲ್ಯಾಣೋತ್ಸವವನ್ನು ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಣಾವರ

ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಅಭಯಹಸ್ತ ಆಂಜನೇಯ ಸ್ವಾಮಿಯವರ ಮಹಾದಿವ್ಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಜಯ ಘೋಷದ ನಡುವೆ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ನಿಮಿತ್ತ ಶ್ರೀ ಆಂಜನೇಯ ಸ್ವಾಮಿಯವರಿಗೆ ಅಭಿಷೇಕ ಗಂಗಾಸ್ಥಾನವನ್ನು ಮಾಡಿಸಲಾಯಿತು. ನಂತರ ಮಯೂರ ವಾಹನೋತ್ಸವ, ಶೇಷ ವಾಹನೋತ್ಸವವನ್ನು ನೆರವೇರಿಸಿ ಗುರುವಾರದಂದು ಗಣಪತಿ ಹೋಮ, ಆಂಜನೇಯ ಹೋಮ, ರಾಮಕಾರಕ ಹೋಮ, ಬ್ರಹ್ಮಹೋಮ, ರುದ್ರ ಹೋಮ, ಆಂಜನೇಯ ಸ್ವಾಮಿಯವರ ರಥಾಂಗ ಹೋಮ, ರಥ ಪ್ರತಿಷ್ಠಾಪನೆ ಮತ್ತು ಕಳಸಾಭಿಷೇಕವನ್ನು ನಡೆಸಿ ಗಜೇಂದ್ರ ಮೋಕ್ಷ ಗರುಡೋತ್ಸವವನ್ನುನಡೆಸಿ ರಾತ್ರಿ 9 ಗಂಟೆಗೆ ಕಲ್ಯಾಣೋತ್ಸವವನ್ನು ನೆರವೇರಿಸಲಾಯಿತು.

ಶುಕ್ರವಾರ ಬೆಳಗ್ಗೆ ರಥದ ಕಳಸ ಸ್ಥಾಪನೆಯನ್ನು ನೆರವೇರಿಸಿ ಯಾತ್ರದಾನ ಪೂರ್ವಕ ಶ್ರೀ ಕೃಷ್ಣಗಂಧೋತ್ಸವ ಪೂಜಾ ವಿಧಿ ವಿಧಾನವನ್ನು ನಡೆಸಲಾಯಿತು. ಗ್ರಾಮಸ್ಥರಿಂದ ರಥೋತ್ಸವಕ್ಕೆ ಪೂಜೆಯನ್ನು ಸಲ್ಲಿಸಿ ಪಾನಕದ ಗಾಡಿಗಳನ್ನು ಓಡಿಸಿ ಸಾವಿರಾರು ಭಕ್ತರ ಜಯ ಘೋಷದಲ್ಲಿ ಶ್ರೀ ಆಂಜನೇಯ ಸ್ವಾಮಿಯವರ ರಥೋತ್ಸವ ನೆರವೇರಿತು.

ಭಕ್ತರು ಶ್ರೀ ಆಂಜನೇಯ ಸ್ವಾಮಿಯವರ ದರ್ಶನವನ್ನು ಪಡೆದು ಪುನೀತರಾದರು. ರಥೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೂ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು. ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿಯ ಅಧ್ಯಕ್ಷ ಶಿವಲಿಂಗೇಗೌಡ ಆಗಮಿಸಿ ರಥೋತ್ಸವಕ್ಕೆ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆಯನ್ನು ನೀಡಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾದರು. ರಥೋತ್ಸವದ ಅಂಗವಾಗಿ ಪಟ್ಟಣದ ಎಲ್ಲಾ ಭಾಗಗಳಲ್ಲಿಯೂ ಎಲ್ಲಾ ಮನೆಗಳಿಗೂ ತಳಿರು ತೋರಣಗಳನ್ನು ಕಟ್ಟಿ, ಮನೆಯ ಮುಂದೆ ರಂಗವಲ್ಲಿಯನ್ನು ಹಾಕುವ ಮೂಲಕ ರಥೋತ್ಸವಕ್ಕೆ ಮೆರುಗು ತಂದರು.

ರಥೋತ್ಸವದ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಯವರ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಿ ವಿಶೇಷ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ರಥೋತ್ಸವದ ನಂತರ ಧಾರ್ಮಿಕ ಸಭೆಯನ್ನು ನಡೆಸಲಾಯಿತು. ಈ ಧಾರ್ಮಿಕ ಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡರು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಹಾಗೂ ಸಮಾಜಸೇವಕರು ಹಾಗೂ ರಥೋತ್ಸವಕ್ಕೆ ಹೆಚ್ಚಿನ ಸಹಕಾರಗಳನ್ನು ನೀಡಿರುವಂತಹ ದಾನಿಗಳಿಗೆ ಎಲ್ಲರಿಗೂ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ರಥೋತ್ಸವ ಮತ್ತು ಸಭಾ ಕಾರ್ಯಕ್ರಮದಲ್ಲಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಬಿಸಿ ಶ್ರೀನಿವಾಸ್, ಕಾರ್ಯದರ್ಶಿಗಳಾದ ದೀಪಕ್ ಹಿರೇಮಠ್, ಶಶಿಕುಮಾರ್, ಬಿ ಎಸ್ ಅಶೋಶ್‌ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ರೀಧರ್, ಭಾಗ್ಯಮ್ಮ ನಂಜುಂಡ ಶೆಟ್ಟಿ, ವೀಣಾ ಸುರೇಶ್, ಸುರೇಶ್, ಸಂಜಯ್, ಲಕ್ಷ್ಮೀಶ್, ರವಿಶಂಕರ್, ಜಯಣ್ಣ, ಸಮಾಜಸೇವಕ ತ್ರಿಲ್ಲರ್ ಮಂಜು, ನೇತ್ರಾವತಿ ಮಂಜುನಾಥ್, ಚಂದ್ರಪ್ಪ, ಸೇರಿದಂತೆ ಗ್ರಾಮದ ಎಲ್ಲಾ ಸಮಾಜ ಬಾಂಧವರು ಭಾಗವಹಿಸಿ ಶ್ರೀ ಆಂಜನೇಯ ಸ್ವಾಮಿಯವರ ಕೃಪೆಗೆ ಪಾತ್ರರಾದರು.