ಬನವಾಸಿ ಗ್ರಿಡ್ ಒಂದೆರಡು ತಿಂಗಳಿನಲ್ಲಿ ಕಾರ್ಯಾರಂಭ

| Published : Feb 19 2025, 12:45 AM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯಲ್ಲಿ ೧೦ ವಿದ್ಯುತ್ ಕಂಬಗಳು ಮತ್ತು ಜಿಲ್ಲೆಯ ಬನವಾಸಿ ಭಾಗದಲ್ಲಿ ಮೂರು ವಿದ್ಯುತ್ ಕಂಬಗಳು ನಿರ್ಮಾಣವಾಗಬೇಕಿದೆ

ಶಿರಸಿ: ಬನವಾಸಿ ಗ್ರಿಡ್ ಮುಂದಿನ ಒಂದೆರಡು ತಿಂಗಳಿನಲ್ಲಿ ಕಾರ್ಯಾರಂಭ ಮಾಡಲಿದೆ.ಆದರೆ, ರೈತರ ಭೂಮಿಯಲ್ಲಿ ೧೩ ಕಂಬಗಳ ನಿರ್ಮಾಣ ಆಗಬೇಕಿದ್ದು, ವಿರೋಧದಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಈ ಕಂಬ ನಿರ್ಮಾಣ ಮಾಡಬೇಕಾಗಿರುವುದು ಬೇಸರ ತಂದಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.

ಅವರು ಮಂಗಳವಾರ ತಾಲೂಕಿನ ಹುಡೇಲಕೊಪ್ಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ೧೦ ವಿದ್ಯುತ್ ಕಂಬಗಳು ಮತ್ತು ಜಿಲ್ಲೆಯ ಬನವಾಸಿ ಭಾಗದಲ್ಲಿ ಮೂರು ವಿದ್ಯುತ್ ಕಂಬಗಳು ನಿರ್ಮಾಣವಾಗಬೇಕಿದೆ. ಕಂಬ ನಿರ್ಮಾಣ ವಿರೋಧಿಸಿ ರೈತರು ನ್ಯಾಯಾಲಯದ ಮೊರೆ ಸಹ ಹೋಗಿದ್ದರು. ಆದರೆ, ನ್ಯಾಯಾಲಯದಲ್ಲಿ ಈ ರೈತರಿಗೆ ಹಿನ್ನಡೆಯಾಗಿದೆ. ಸಚಿವ ಮಧು ಬಂಗಾರಪ್ಪ ಸಹ ಈ ರೈತರೊಂದಿಗೆ ಮಾತನಾಡಿದ್ದು, ಎರಡು ಪಟ್ಟು ಪರಿಹಾರ ಒದಗಿಸಲು ನಿರ್ಧರಿಸಲಾಗಿದೆ. ಆದರೂ ಕೆಲ ರೈತರು ವಿರೋಧ ಮುಂದುವರಿಸಿರುವ ಕಾರಣ ಪೊಲೀಸ್ ಬಂದೋಬಸ್ತ್ ನಲ್ಲಿ ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ.ಇದೀಗ ಬಹುತೇಕ ಸಮಸ್ಯೆ ಗಳು ಮುಕ್ತಾಯವಾಗಿದ್ದು ಪುನಃ ಕೆಲಸ ಆರಂಭವಾಗಲಿದೆ ಎಂದರು.

ಬನವಾಸಿಯಲ್ಲಿ ಗ್ರಿಡ್ ಕಾರ್ಯಾರಂಭ ಮಾಡದ ಹಿನ್ನೆಲೆಯಲ್ಲಿ ಸಮಸ್ಯೆಗಳು ತೀವ್ರವಾಗಿವೆ. ಈಗಿನ ಸ್ಥಿತಿಯಲ್ಲಿ ಬನವಾಸಿ, ಭಾಶಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಿಕ್ಸರ್ ಸಹ ಬಳಸಲು ಸಾಧ್ಯವಾಗದಷ್ಟು ವಿದ್ಯುತ್ ಕಡಿಮೆ ವೋಲ್ಟೇಜ್ ಇದೆ. ಇದರಿಂದ ಇಲ್ಲಿಯ ಕೆರೆ ತುಂಬವ ಯೋಜನೆಗೆ ಹಿನ್ನಡೆ ಉಂಟಾಗಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತೊಂದರೆಯಾಗುತ್ತಿದೆ. ಬನವಾಸಿ ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗಿದ್ದರೂ ವಿದ್ಯುತ್ ಸಮರ್ಪಕವಾಗಿಲ್ಲದ ಕಾರಣ ಇನ್ನೂ ಕಾರ್ಯಾರಂಭ ಮಾಡಿಲ್ಲ.ಈ ಹಿನ್ನೆಲೆಯ್ಲಲಿ ಬನವಾಸಿ ಗ್ರಿಡ್‌ಗೆ ವಿದ್ಯುತ್ ಸಂಪರ್ಕ ತುರ್ತಾಗಿ ಆಗಬೇಕಾಗಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿಗಳೂ ಸಹ ನಿರಂತರ ಸಂಪರ್ಕದಲ್ಲಿದ್ದಾರೆ. ಒಟ್ಟಾರೆಯಾಗಿ ವಿದ್ಯುತ್ ಗ್ರೀಡ್ ಅತೀ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಬರಬೇಕಾದ ಹವಾಮಾನ ಆಧಾರಿತ ಬೆಳೆ ವಿಮೆ ಇದುವರೆಗೂ ರೈತರ ಖಾತೆಗೆ ಜಮಾ ಆಗಿಲ್ಲ. ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ವಿಷಯ ತಿಳಿಸಲಾಗಿದೆ. ವಿಧಾನಸಭಾ ಅಧಿವೇಶನದಲ್ಲೂ ಈ ಬಗ್ಗೆ ವಿಷಯ ಪ್ರಸ್ತಾಪ ಮಾಡುತ್ತೇನೆ.ವಿಮೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮಾನ ಜವಾಬ್ದಾರಿಗಳಿವೆ. ಈಗಾಗಲೇ ರಾಜ್ಯ ಕೃಷಿ ಅಧಿಕಾರಿಗಳು ಕೇಂದ್ರ ಕೃಷಿ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ರೈತರಿಗೆ ವಿಮಾ ಕಂಪನಿ ಅನ್ಯಾಯ ಮಾಡಬಾರದು. ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿಮಾ ಹಣ ಜಮಾ ಮಾಡದಿದ್ದರೆ ಎಜೆನ್ಸಿಯನ್ನು ಬ್ಲಾಕ್ ಲೀಸ್ಟ್ ಗೆ ಹಾಕುವುದಾಗಿಯೂ ತಿಳಿಸಲಾಗಿದೆ ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಬನವಾಸಿಯಲ್ಲಿ ಕದಂಬೊತ್ಸವ ಆಚರಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೆಚ್ಚಿನ ಆಸಕ್ತಿ ವಹಿಸಿ ಕದಂಬೋತ್ಸವ ಆಚರಣೆ ದಿನಾಂಕ ಪ್ರಕಟಿಸಬೇಕು. ಯಶಸ್ವಿ ಕದಂಬೊತ್ಸವ ಆಚರಣೆ ಮಾಡಬೇಕು ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಕಿರಣಾ ಭಟ್,ಶ್ರೀಧರ ಗೌಡ, ಎಸ್.ಜಿ.ಭಟ್, ಬಿ.ಎಸ್. ಗಂಗಾಧರ, ನಾಗರಾಜ ನಾಯ್ಕ ಇತರರಿದ್ದರು.