ಸಾರಾಂಶ
ಬನವಾಸಿಯ ಮಧುಕೇಶ್ವರ ದೇವರ ಮೇಲೆ ನನಗೆ ಅಪಾರ ನಂಬಿಕೆ, ಭಕ್ತಿಯಿದೆ. ಬನವಾಸಿ ದೇವಸ್ಥಾನದ ದುರಸ್ತಿ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿಸುತ್ತೇನೆ ಎಂದು ಸಂಸದ ಕಾಗೇರಿ ತಿಳಿಸಿದರು.
ಶಿರಸಿ: ತಾಲೂಕಿನ ಬನವಾಸಿ ಪುರಾಣ ಪ್ರಸಿದ್ಧ ಮಧುಕೇಶ್ವರ ದೇವಸ್ಥಾನ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಆಗ್ರಹಿಸಿ, ಬನವಾಸಿ ಅಭಿವೃದ್ಧಿ ಸಮಿತಿ ವತಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಕಳೆದ ಹತ್ತು ವರ್ಷಗಳಿಂದ ಮಳೆಗಾಲದಲ್ಲಿ ದೇವಸ್ಥಾನ ನಿರಂತರವಾಗಿ ಸೋರುತ್ತಿದೆ. ಸೋರುವಿಕೆಯ ಸಮಸ್ಯೆಯನ್ನು ಪ್ರತಿವರ್ಷವೂ ಪುರಾತತ್ವ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಪುರಾತತ್ವ ಇಲಾಖೆಯು ಐತಿಹಾಸಿಕ ಹಿನ್ನೆಲೆಯುಳ್ಳ ಬನವಾಸಿಯನ್ನು ಕಡೆಗಣಿಸುತ್ತಿದೆ. ಈ ಮೊದಲು ಕೆಮಿಕಲ್ ವಾಶ್ ಎಂಬ ಹೆಸರಿನಲ್ಲಿ ದುರಸ್ತಿ ಕಾರ್ಯ ಮಾಡಿ ದೇವಸ್ಥಾನ ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಅಲ್ಲದೇ ದೇವಸ್ಥಾನ ಒಳಭಾಗದಲ್ಲಿ ಬಹಳಷ್ಟು ದುರಸ್ತಿ ಕಾರ್ಯಗಳು ಇದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿನ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬನವಾಸಿಯ ಮಧುಕೇಶ್ವರ ದೇವರ ಮೇಲೆ ನನಗೆ ಅಪಾರ ನಂಬಿಕೆ, ಭಕ್ತಿಯಿದೆ. ಬನವಾಸಿ ದೇವಸ್ಥಾನದ ದುರಸ್ತಿ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿಸುತ್ತೇನೆ. ದೇವಸ್ಥಾನ ಸೋರುವಿಕೆಯ ದುರಸ್ತಿಗೆ ಪುರಾತತ್ವ ಇಲಾಖೆಯಿಂದ ₹50 ಲಕ್ಷ ಮಂಜೂರು ಮಾಡಲಾಗಿದೆ. ಮಳೆಗಾಲ ಮುಗಿದ ನಂತರ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ದುರಸ್ತಿ ಕಾರ್ಯ ನಡೆಯುವಾಗ ತಾವು ನಿಂತು ಸರಿಯಾದ ರೀತಿಯಲ್ಲಿ ದುರಸ್ತಿ ಕಾರ್ಯವನ್ನು ಮಾಡಿಸಿಕೊಳ್ಳಬೇಕು. ಅಲ್ಲದೇ ಬನವಾಸಿ ದೇವಸ್ಥಾನದ ಇನ್ನುಳಿದ ಅಭಿವೃದ್ಧಿ ಕಾಮಗಾರಿಗೆ ನೀಲನಕ್ಷೆ ರಚಿಸಿ ನೀಡಿ ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಬನವಾಸಿ ಅಭಿವೃದ್ಧಿ ಸಮಿತಿಯ ಸಂಚಾಲಕರಾದ ದಯಾನಂದ ಭಟ್, ಉದಯಕುಮಾರ್ ಕಾನಳ್ಳಿ, ಸಿ.ಎಫ್. ನಾಯ್ಕ, ಶಿವಕುಮಾರ ದೇಸಾಯಿ ಗೌಡ, ಶ್ರೀಕಂಠಗೌಡ ಮಧುರವಳ್ಳಿ, ದಯಾನಂದ ಮರಾಠೆ, ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀನಿಧಿ ಮಂಗಳೂರು, ಪ್ರಮುಖರಾದ ರವೀಶ ಹೆಗಡೆ, ಗುಣಶೇಖರ ಪಿಳ್ಳೈ, ರಾಮಕೃಷ್ಣ ಚೌದರಿ, ಗಜಾನನ ಗೌಡ, ವೀರೇಂದ್ರ ಗೌಡ, ವಿಶ್ವನಾಥ ಒಡೆಯರ್, ರಾಮಕೃಷ್ಣ ಭಟ್, ಲಯನ್ಸ್ ಕ್ಲಬ್ ಅಧ್ಯಕ್ಷ ವಾಗೀಶ್ ಕೆರೊಡಿ, ಆರ್‌ಕೆ ಫೌಂಡೇಶನ್‌ನ ಅಧ್ಯಕ್ಷ ಸುಧೀರ ನಾಯರ್, ಅಧ್ಯಕ್ಷೆ ಸೀಮಾ ಕೆರೊಡಿ ಹಾಗೂ ದೇವಸ್ಥಾನ ಅಡಳಿತ ಮಂಡಳಿ ಸದಸ್ಯರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.