ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಗುರುವಾರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಣಿಬೆನ್ನೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶದ ವಿರುದ್ಧ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ಗೆ ಗುರುವಾರ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟು ನಡೆಸಿದವು. ಜನ ಸಂಚಾರ ಕೂಡ ಉಳಿದ ದಿನಗಳಂತೆ ಇರುವುದು ಕಂಡು ಬಂದಿತು. ವಿವಿಧ ಕನ್ನಡಪರ ಸಂಘಟನೆಗಳು ತಹಸೀಲ್ದಾರ ಕಚೇರಿ ಬಳಿ ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡ ಪ್ರತಿಮೆಗೆ ಹಾರ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಸಂಘಟನೆಗಳು ಪೋಸ್ಟ್ ಸರ್ಕಲ್ ಬಳಿ ಮನವಿ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಪ್ರತಿಭಟನೆಗೆ ಕೈ ಜೋಡಿಸಿದವು.

ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿದೆ. ಮುಂದಿನ ದಿನಗಳಲ್ಲಿ ರಾಜ್ಯದ ರೈತರಿಗೆ ನೀರಿನ ಅಭಾವ ಎದುರಾಗಲಿದೆ. ಹೀಗಾಗಿ ನೀರು ಹರಿಸುವುದು ರೈತರಿಗೆ ಅನ್ಯಾಯ ಎಸಗಿದಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಆಗ್ರಹಿಸಿದರು.

ಹನುಮಂತಪ್ಪ ಕಬ್ಬಾರ, ಕಿರಣ ಗುಳೇದ, ಶಂಕರ ಬಾರ್ಕಿ, ಈರಣ್ಣ ಕೊಂಡಜ್ಜಿ, ಪ್ರವೀಣ ಸರವಂದ, ಪ್ರಶಾಂತಗೌಡ ಬಾಳನಗೌಡ್ರ, ವಿಜಯಕುಮಾರ ಎಂ., ನಾರಾಯಣ ಲಕ್ಷ್ಮೇಶ್ವರ, ಮಾಲತೇಶ ಜಿ.ಜಿ., ವೀರೇಶ ಬಾರ್ಕಿ, ಪರಶುರಾಮ ಕಸವಾಳ, ಹನುಮಂತ ಕೊಂಡಜ್ಜಿ, ನಟರಾಜ ಕೋಟಿಹಾಳ, ಶ್ರೀನಿವಾಸ ಕಾತರಕಿ, ಹನುಮಂತ ಮಕರಬ್ಬಿ, ಹನುಮಂತ ಕರಿಯಜ್ಜಿ, ಮಂಜುನಾಥ ನ್ಯಾಮತಿ ಮತ್ತಿತರರಿದ್ದರು.