ಸಾರಾಂಶ
ಶಹಾಪುರದಲ್ಲಿನ ಅನಧಿಕೃತ ಖಾಸಗಿ ಕೋಚಿಂಗ್ ಶಾಲೆಗಳಿಗೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ, ಅಲ್ಲಿನ ಅವ್ಯವಸ್ಥೆ ಕುರಿತು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಅಕ್ರಮವಾಗಿ ಕೋಚಿಂಗ್ ಸೆಂಟರ್ ನಡೆಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಕಾನೂನು ಬಾಹಿರವಾಗಿ ಅನಧಿಕೃತ ಬೋಧನಾ ಶಾಲೆಗಳನ್ನು ನಡೆಸುತ್ತಿರುವ ಖಾಸಗಿ ವಿದ್ಯಾಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಿ ಕೋಚಿಂಗ್ ಸೆಂಟರ್‌ಗಳನ್ನು ತಕ್ಷಣ ಬಂದ್ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಸೂಚನೆ ನೀಡಿದರು.ನಗರದ ಎಸ್.ವಿ.ವಿದ್ಯಾರಣ್ಯ ಹಾಗೂ ವಿದ್ಯಾದೀಪ ಖಾಸಗಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಯಾವುದೋ ಒಂದು ಖಾಸಗಿ ಬಿಲ್ಡಿಂಗ್ ಬಾಡಿಗೆ ಪಡೆದು ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆ ಹಾಗೂ ಸಿಸಿಟಿವಿ ವ್ಯವಸ್ಥೆಯೂ ಇಲ್ಲ. ದೊಡ್ಡಿಗಳಲ್ಲಿ ಕುರಿ ತುಂಬಿದಂತೆ ಮಕ್ಕಳನ್ನು ಕೋಣೆಯಲ್ಲಿ ಕೂಡಿಸಿರುವುದನ್ನು ನೋಡಿದರೆ, ಇಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗು ಗೋಚರಿಸುತ್ತದೆ. ಇಲಾಖೆಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೋಚಿಂಗ್ ಸೆಂಟರ್ ನಡೆಸುತ್ತಿರುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಮಕ್ಕಳ ಜೀವಕ್ಕೆ ಏನಾದರು ಅಪಾಯವಾದರೆ ಇದಕ್ಕೆ ಯಾರು ಜವಾಬ್ದಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಸ್ಥರು ಹಾಗೂ ಮುಖ್ಯ ಶಿಕ್ಷಕರ ಕುರಿತು ಸರಿಯಾದ ಮಾಹಿತಿ ಸಿಗದ ಕಾರಣ ಸ್ಥಳದಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಅವರು, ತಾವು ತಾಲೂಕು ಶಿಕ್ಷಣಾಧಿಕಾರಿಯಾಗಿದ್ದುಕೊಂಡು ನಗರದಲ್ಲಿ ಇಷ್ಟೊಂದು ಅವ್ಯವಸ್ಥೆ ಇರುವಾಗ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳ ಗತಿ ಏನು ಎಂದು ಪ್ರಶ್ನಿಸಿದರು, ಕೂಡಲೇ ಈ ಶಿಕ್ಷಣ ಸಂಸ್ಥೆಯವರಿಗೆ ನೋಟಿಸ್ ನೀಡಿ ಕೋಚಿಂಗ್ ಸೆಂಟರ್ ತಕ್ಷಣ ಬಂದ್ ಮಾಡುವಂತೆ ತಿಳಿಸಿದರು. ನಗರದಲ್ಲಿ 18 ಅಕ್ರಮ ವಸತಿ ಶಾಲೆಗಳು ನಡೆಯುತ್ತಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಶಿಕ್ಷಣಾಧಿಕಾರಿಗಳಿಗೆ ಎಲ್ಲಾ ಕೋಚಿಂಗ್ ಸೆಂಟರ್ ಗಳಿಗೆ ನೋಟಿಸ್ ನೀಡಿ ಬಂದ್ ಮಾಡಲು ಸೂಚಿಸಿದ್ದೇವೆ. ಇದರಲ್ಲಿ 16 ಖಾಸಗಿ ಶಾಲೆಗಳು ಕೋಚಿಂಗ್ ಸೆಂಟರ್ ಬಂದ್ ಮಾಡಿವೆ. ಎರಡು ಮಾತ್ರ ಕೋಚಿಂಗ್ ನಡೆಸುತ್ತಿವೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದರು.