ಕನ್ನಡಪ್ರಭ ವಾರ್ತೆ ಗೋಕರ್ಣ
ಗ್ರಾಮದೇವತೆ ಭದ್ರಕಾಳಿ ಹಾಗೂ ಪರಿವಾರ ದೇವರ ಬಂಡಿಹಬ್ಬದ ಬಂಡಿತೇರು ಶನಿವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.ರಥಬೀದಿಯಲ್ಲಿರುವ ಕಳಸದ ಮನೆಯ ಎದುರು ಮರದ ವಿಶಿಷ್ಟ ಬಂಡಿತೇರಿಗೆ ಮಧ್ಯಾಹ್ನದಿಂದ ಭಕ್ತರು ಹಣ್ಣು, ಕಾಯಿ, ಹಣ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಈ ಹಣ್ಣು, ಕಾಯಿಗಳನ್ನು ಬಂಡಿತೇರಿಗೆ ಬಹು ಆಕರ್ಷಕವಾಗಿ ಜೋಡಿಸಲಾಗಿತ್ತು.
ಸಂಜೆ ಕಳಸದ ಮನೆಯಲ್ಲಿ ಕಳಸಕ್ಕೆ ಪೂಜೆ ವಿವಿಧ ದೈವಿಕ ಕಾರ್ಯ ನೆರವೇರಿದ ಬಳಿಕ ಕಳಶೋತ್ಸವ ಮಹಾಬಲೇಶ್ವರ ಮಂದಿರಕ್ಕೆ ತೆರಳಿ, ಪುನಃ ಕಳಸದ ಮನೆಯ ಬಳಿ ಆಗಮಿಸಿ ಪೂಜಾ ಕೈಂಕರ್ಯ ನೆರವೇರಿದ ಬಳಿಕ ಬಂಡಿ ಎಳೆಯುವ ಮಾದನಗೇರಿ ಗೌಡರಿಂದ ಅಪ್ಪಣೆ ನೀಡಿ, ಹೂವು, ಹಣ್ಣಿನಿಂದ ಅಲಂಕೃತಗೊಂಡ ಬಂಡಿಯ ಜತೆ, ಶ್ರೀದೇವಿಯ ಕಳಸ ಭದ್ರಕಾಳಿ ಸಾನ್ನಿಧ್ಯಕ್ಕೆ ತೆರಳಿತು. ವೆಂಕಟ್ರಮಣ ದೇವಾಲಯದ ಬಳಿ ಬಂಡಿಯನ್ನ ತಿರುಗಿಸುವುದು ಬಹು ಆಕರ್ಷಕವಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಬಂಡಿತೇರು ಎಳೆದು ಸಂಭ್ರಮಿಸಿದರು.ಗಮನ ಸೆಳೆಯುವ ಬೊಗಣಗಿತ್ತಿಯರು: ಬಂಡಿತೇರಿನ ಮುಂದೆ ಅಪಾರ ಸಂಖ್ಯೆಯಲ್ಲಿ ಹಾಲಕ್ಕಿ ಸಮಾಜದ ಮಹಿಳೆಯರು ತೆರಳುವುದು ಎಲ್ಲರ ಗಮನ ಸೆಳೆಯಿತು. ಇವರಿಗೆ ಸಾಂಪ್ರದಾಯಿಕ ಭಾಷೆಯಲ್ಲಿ ಬೊಗಣಗಿತ್ತಿಯರು ಎಂದು ಕರೆಯುತ್ತಾರೆ. ತಮ್ಮ ಕುಟುಂಬದ ಒಳಿತು, ಇಷ್ಟಾರ್ಥ ಸಿದ್ಧಿಗಾಗಿ ಈ ದಿನದಂದು ಮಹಿಳೆಯರು ಹೂವಿನ ಅಲಂಕಾರದೊಂದಿಗೆ ಬಂಡಿತೇರಿನ ಜತೆ ಸಾಗಿ ಹರಕೆ ಸೇವೆ ಪೂರೈಸುತ್ತಾರೆ.
ಹಣ್ಣಿನ ಅಲಂಕಾರದಿಂದ ಕಂಗೊಳಿಸಿದ ಬಂಡಿ:
ಹಲಸು, ಬಾಳೆಹಣ್ಣು ಮತ್ತಿತರ ಹಣ್ಣುಗಳನ್ನ ಬಂಡಿಗೆ ಜೋಡಿಸಿದ್ದು, ಇದರ ಜತೆಗೆ ನೋಟಿನ ಸರ, ಹೂವಿನ ಅಲಂಕಾರ ಮಾಡಿರುವುದು ಭಕ್ತರನ್ನು ಆಕರ್ಷಿಸಿತು. ಚಂಡೆನಾದ, ವಾದ್ಯಘೋಷ ಬಂಡಿತೇರಿಗೆ ಮೆರಗು ತಂದಿತ್ತು.