ಬಂಡೀಪುರ ಅರಣ್ಯ ಇಲಾಖೆ ದ್ವಂದ ನೀತಿ

| Published : Mar 27 2025, 01:01 AM IST

ಸಾರಾಂಶ

ಬಂಡೀಪುರ ಸೂಕ್ಷ್ಮ ಪರಿಸರ ವಲಯದ ಮಂಗಲ ಗ್ರಾಮದ ಬಳಿ ಶಾಶ್ವತ ಕಟ್ಟಡ ಯಾವ ಅನುಮತಿ ಇಲ್ಲದೆ ಮೇಲೆಳುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಸೂಕ್ಷ್ಮ ಪರಿಸರ ವಲಯದಲ್ಲಿ ಅರಣ್ಯ ಇಲಾಖೆ, ಕಂದಾಯ ಹಾಗೂ ಗ್ರಾಪಂಗಳ ದ್ವಂದ ನೀತಿಯಿಂದ ಹೋಂ ಸ್ಟೇಗಳ ಹೆಸರಲ್ಲಿ ಶಾಶ್ವತ ಕಟ್ಟಡಗಳು ತಲೆ ಎತ್ತುತ್ತಿವೆ.ಬಂಡೀಪುರ ಸುತ್ತ ಮುತ್ತ ಕೆಲವೇ ಕೆಲ ಹೋಂ ಸ್ಟೇಗಳಿಗೆ ಅನುಮತಿ ಇದೆ. ಆದರೆ ವಾಸದ ಮನೆ ಹೆಸರಲ್ಲಿ ಹೋಂ ಸ್ಟೇಗಳು ತಲೆ ಎತ್ತಿ ಮೋಜು, ಮಸ್ತಿಗೆ ಕಾರಣವಾಗುತ್ತಿದೆ. ಸೂಕ್ಷ್ಮ ಪರಿಸರ ವಲಯದಲ್ಲಿ ಶಾಶ್ವತ ಕಟ್ಟಡಗಳಿಗೆ ಅನುಮತಿ ನೀಡುತ್ತಿಲ್ಲ. ಆದರೂ ಕೆಲವರು ತಮ್ಮ ರಾಜಕೀಯ ಪ್ರಭಾವ ಬಳಸಿ ನಗರ ಪ್ರದೇಶದ ಜನರು ಆರ್‌ಟಿಸಿ ಮೂಲಕ ಆಧಾರ್‌ ಕಾರ್ಡ್‌ ಮಾಡಿಸಿಕೊಂಡು ಹೋಂ ಸ್ಟೇಗೆ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಿದ್ದಾರೆ.?

ಕೆಲವರು ವಾಸದ ಮನೆಗೆಂದು ಅನುಮತಿ ಪಡೆದು ಹೋಂ ಸ್ಟೇ ನಡೆಸಿ ಲಕ್ಷಾಂತರ ಆದಾಯ ಮಾಡಿಕೊಳ್ಳುತ್ತಿದ್ದರೂ ಅರಣ್ಯ, ಕಂದಾಯ ಹಾಗೂ ಗ್ರಾಪಂ ಕಣ್ಣುಮುಚ್ಚಿ ಕುಳಿತು ಕಾನೂನು ಉಲ್ಲಂಘಿಸುತ್ತಿವೆ. ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಹೋಂ ಸ್ಟೇ ಹಾಗೂ ವಾಸದ ಮನೆಯ ನೆಪದಲ್ಲಿ ಹೋಂ ಸ್ಟೇ ನಡೆಸುತ್ತಿದ್ದಾರೆ. ಅದು ಐಷಾರಾಮಿ ಬಂಗಲೆಯಂತಿವೆ. ಕೆಲ ಹೋಂ ಸ್ಟೇಗಳು. ಈಜುಕೊಳ, ದೊಡ್ಡ ಕೌಂಪೌಂಡ್‌ ಹಾಕಿದ್ದರು ಕೇಳುವ ತಾಕತ್ತು ಮೂರು ಇಲಾಖೆಗಳಿಗೆ ಇಲ್ಲ ಎಂದು ಜಿಲ್ಲಾ ರೈತಸಂಘದವರು ಆರೋಪಿಸಿದ್ದಾರೆ.

ಕಂದಾಯ ಭೂಮಿಯಲ್ಲಿ ಯಾವುದೇ ಅನುಮತಿ ಪಡೆಯದೆ ಮಂಗಲ ಬಳಿ ದೊಡ್ಡ ಕಟ್ಟಡ ಮೇಲೆಳುತ್ತಿದೆ. ಜೊತೆಗೆ ಗ್ರಾಪಂ ಅನುಮತಿ ಇಲ್ಲ, ಅರಣ್ಯ ಇಲಾಖೆ ಅನುಮತಿ ಇಲ್ಲ ಆದರೂ ಕೇಳಬೇಕಾದ ಅಧಿಕಾರಿಗಳು ಜಾಣಮೌನ ವಹಿಸಿ, ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ರೈತ ಸಂಘ ದೂರಿದೆ.

ದ್ವಂದ ನೀತಿ:

ಅರಣ್ಯ ಇಲಾಖೆ ಹೋಂಸ್ಟೇಗಳಿಗೆ ನಮ್ಮದೇನು ತಕರಾರಿಲ್ಲ. ಪ್ರವಾಸೋದ್ಯಮ ಇಲಾಖೆ ಕಾಯ್ದೆ, ನಿಬಂಧನೆಗಳ ಮೂಲಕ ಕ್ರಮ ತೆಗೆದುಕೊಳ್ಳಬಹುದು ಎಂದು ಒಂದು ಕಡೆ ಹೇಳಿದೆ. ಮತ್ತೊಂದು ಹಳೆ ಆದೇಶದಲ್ಲಿ ಹೋಂ ಸ್ಟೇ ಉದ್ದೇಶ ಪ್ರವಾಸೋದ್ಯಮ ಉದ್ದೇಶವಾಗಿದೆ. ಸೂಕ್ಷ್ಮ ಪರಿಸರ ವಲಯದ ನಿರ್ಬಂಧಿತ ಪ್ರದೇಶದ ಅಂಶ ಅಡ್ಡಿ ಬರುತ್ತಿದೆ. ಶಾಶ್ವತ ಕಟ್ಟಡ ಹೊರೆತು ಪಡಿಸಿ, ಬೇರೆ ಶಾಶ್ವತ ಕಟ್ಟಡಗಳಿಗೆ ಸದರಿ ಅಧಿಸೂಚನೆಯಲ್ಲಿ ಅವಕಾಶವಿಲ್ಲ ಎಂದು ಒತ್ತಿ ಹೇಳಿದೆ. ಕಂದಾಯ ಭೂಮಿಗಳಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಮತ್ತೊಂದೆಡೆ ಹೋಂ ಸ್ಟೇ ಹೆಸರಲ್ಲಿ ಕಟ್ಟಡಗಳು ಮೇಲೆಳುತ್ತಲೇ ಇವೆ ಮತ್ತೊಂದೆಡೆ ವಾಸದ ಮನೆ ಹೆಸರಲ್ಲೂ ಅಕ್ರಮ ಕಟ್ಟಡಗಳು ಕಟ್ಟುತ್ತಿದ್ದರೂ ಕಂದಾಯ, ಅರಣ್ಯ ಹಾಗು ಗ್ರಾಪಂ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ.

ಹೇಳೋರು ಕೇಳೋರು ಯಾರು ಇಲ್ವ?:ಬಂಡೀಪುರದಂತ ಸೂಕ್ಷ್ಮ ಪರಿಸರ ವಲಯದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಸೂಕ್ಷ್ಮ ಪರಿಸರ ನಿಯಮ, ನಿಬಂಧನೆ ಪಾಲಿಸಬೇಕಾದ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ರಾಜಕೀಯ ಪ್ರಭಾವಕ್ಕೆ ಒಳಗಾಗಿರುವುದೇ ಅಕ್ರಮಕ್ಕೆ ಕಾರಣ. ಜಿಲ್ಲೆಯಲ್ಲಿ ಅಕ್ರಮ, ಅಕ್ರಮ ಚಟುವಟಿಕೆಗೆ ಕಾರಣವಾದ ಹೋಂ ಸ್ಟೇ ಹಾಗೂ ಅಕ್ರಮ ಕಟ್ಡಡಗಳ ಡೆಮಾಲಿಷ್ ಮಾಡುವ ತಾಕತ್ತು ಇಲಾಖೆಗೆ ಇದ್ದಂತೆ ಕಾಣುತ್ತಿಲ್ಲ. ಜಿಲ್ಲೆಯಲ್ಲಿ ಅಕ್ರಮ, ಅನ್ಯಾಯ ಕೇಳೋರು ಯಾರು ಇಲ್ಲವೇ ಎಂದು ಪರಿಸರವಾದಿಗಳು ಪ್ರಶ್ನಿಸಿದ್ದಾರೆ.ಕಂದಾಯ ಭೂಮಿಯಲ್ಲಿ ಮನೆ, ಹೋಂ ಸ್ಟೇ ಕಟ್ಟಿದ್ದರೆ ತಪ್ಪು ಆದರೂ ಸೂಕ್ಷ್ಮ ಪರಿಸರ ವಲಯ ಬಂದ ಮೇಲೆ ಅರಣ್ಯ ಇಲಾಖೆ ತಡೆಯಬೇಕಿತ್ತು. ಆ ಕೆಲಸ ಮಾಡದ ಕಾರಣ ನಾನೇ ಗ್ರಾಮ ಆಡಳಿತ ಅಧಿಕಾರಿ ಕಳುಹಿಸಿ ಮಾಹಿತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.-ಟಿ.ರಮೇಶ್‌ ಬಾಬು, ತಹಸೀಲ್ದಾರ್‌ಅರಣ್ಯ ಇಲಾಖೆ ದ್ವಂದ್ವ ನೀತಿಯಿಂದ ಗ್ರಾಪಂ ಎನ್‌ಒಸಿ ಕೊಡಬೇಕಿದೆ. ಆದರೀಗ ಅರಣ್ಯ ಇಲಾಖೆಗೆ ಸಂಬಂಧವಿಲ್ಲ ಎಂದ ಮೇಲೆ ಗ್ರಾಪಂ ಏನು ಮಾಡಕ್ಕಾಗಲ್ಲ. ಪ್ರವಾಸೋದ್ಯಮ ಇಲಾಖೆಗೂ ಪತ್ರ ಬರೆದಿದ್ದೇನೆ. ಅರಣ್ಯ ಇಲಾಖೆ ಸಂಬಂಧ ಇಲ್ಲ ಎಂದಮೇಲೆ ಗ್ರಾಪಂ ಮೂವರಿಗೆ ಎನ್‌ಒಸಿ ನೀಡಲಾಗಿದೆ.

-ಮೋಹನ್‌ ಕುಮಾರ್‌ ಎಚ್.ಆರ್, ಪಿಡಿಒ