ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಿಸಿಲಿನ ಬೇಗೆಗೆ ಬಂಡೀಪುರ ಅರಣ್ಯ ಒಣಗಿ ನಿಂತ ಸಮಯದಲ್ಲಿ ಕಿಡಿಗೇಡಿಗಳು ಮದ್ದೂರು ಹಾಗು ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಇಟ್ಟು ಸುಮಾರು ೨೫ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ.ಸೋಮವಾರ ರಾತ್ರಿ ಸುಮಾರು ೭.೩೦ ಗಂಟೆ ಸಮಯದಲ್ಲಿ ಮದ್ದೂರು ವಲಯದ ಕರಡಿಕಲ್ ಬೆಟ್ಟದ ಬಳಿ ಹಾಗೂ ಗೋಪಾಲಸ್ವಾಮಿ ಬೆಟ್ಟ ವಲಯದ ಕುಳ್ಳನ ಬೆಟ್ಟದ ಕಡೆಯೂ ಬೆಂಕಿ ಹಾಕಿದ್ದಾರೆ. ಗಸ್ತಿನಲ್ಲಿದ್ದ ಸಿಬ್ಬಂದಿ ಗಮನಕ್ಕೆ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ.ಮದ್ದೂರು ಆರ್ಎಫ್ಒ ಬಿ.ಎಂ.ಮಲ್ಲೇಶ್ ಅವರು ಎಸಿಎಫ್ ಜಿ.ರವೀಂದ್ರ ಹಾಗೂ ಡಿಸಿಎಫ್ ಪ್ರಭಾಕರನ್‌ಗೆ ವಿಷಯ ತಿಳಿಸಿ ಬೆಂಕಿ ನಂದಿಸಲು ಆರಂಭಿಸಿದ್ದಾರೆ. ನೆರೆ ಹೊರೆಯ ವಲಯದ ಅರಣ್ಯ ಸಿಬ್ಬಂದಿ ಕರೆಸಿಕೊಂಡು ಮಂಗಳವಾರ ಬೆಳಗಿನ ಜಾವ ೪ ಗಂಟೆ ತನಕ ಬೆಂಕಿ ಆರಿಸುವವಲ್ಲಿ ಸಫಲರಾಗಿದ್ದಾರೆ. ಆದರೆ ಗೋಪಾಲಸ್ವಾಮಿ ಬೆಟ್ಟದ ಆರ್‌ಎಫ್‌ಒ ಮಂಜುನಾಥ್, ಎಸಿಎಫ್ ನವೀನ್ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಹಗಲು ರಾತ್ರಿ ಸಾಹಸ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆ ೧೦ ಗಂಟೆ ಸಮಯದಲ್ಲಿ ಬೆಂಕಿ ನಂದಿಸುವಲ್ಲಿ ಯಶ ಕಂಡಿದ್ದಾರೆ. ಆದರೂ ಕರಡಿಕಲ್ ಹಾಗೂ ಕುಳ್ಳನ ಬೆಟ್ಟ ಬಳಿ ಬೆಂಕಿ ನಂದಿಸಿದರೂ ಸಿಬ್ಬಂದಿ ಬೆಂಕಿಯ ಮುಡಿ ಕಟ್ಟುತ್ತಿದ್ದಾರೆ. ಬೆಂಕಿಗಾಹುತಿಯಾದ ಸ್ಥಳಕ್ಕೆ ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಸೋಮವಾರ ರಾತ್ರಿಯೇ ಭೇಟಿ ಕಾಡಿನಲ್ಲಿಯೇ ಮೊಕ್ಕಾಂ ಹೂಡಿ ಬೆಂಕಿ ಆರಿಸಲು ಸಿಬ್ಬಂದಿಯನ್ನು ಹುರಿದುಂಬಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮೂಲೆಹೊಳೆ, ಕುಂದಕೆರೆ, ಓಂಕಾರ, ಕಲ್ಕರೆ, ಹೆಡಿಯಾಲ ವಲಯದ ಸಿಬ್ಬಂದಿಯನ್ನು ಶೀಘ್ರವಾಗಿ ಕರೆಸಿಕೊಂಡು ಬೆಂಕಿಯನ್ನು ಆರಿಸುವಲ್ಲಿ ಎಸಿಎಫ್, ಆರ್‌ಎಫ್‌ಒ, ಅರಣ್ಯ ಸಿಬ್ಬಂದಿ ಶ್ರಮಿಸಿದ್ದಾರೆ ಎಂದು ಡಿಸಿಎಫ್ ಪ್ರಭಾಕರ್ ತಿಳಿಸಿದರು.ಬೆಂಕಿ ನಂದಿಸುವ ವೇಳೆ ಓಂಕಾರ ಆರ್‌ಎಫ್‌ಒ ಕೆ.ಪಿ.ಸತೀಶ್ ಕುಮಾರ್, ಕಲ್ಕೆರೆ ಆರ್‌ಎಫ್‌ಒ ಪುನೀತ್, ಎಸ್‌ಟಿಪಿಎಫ್ ಅರಣ್ಯ ಸಿಬ್ಬಂದಿ, ಫೈರ್ ವಾಚರ್‌ಗಳಿದ್ದರು. ಮದ್ದೂರು ವಲಯದ ಕರಡಿಕಲ್ ಬೆಟ್ಟಕ್ಕೆ ರಾತ್ರಿ ನಡೆದುಕೊಂಡು ಹೋಗಿ ಬೆಂಕಿ ಇಟ್ಟವರು ಹೊರಗಿನವರಲ್ಲ, ಒಳಗಿನವರೇ ಇರಬೇಕು ಎಂದು ಅರಣ್ಯ ಇಲಾಖೆ ಅನುಮಾನ ಪಟ್ಟಿದೆ. ಬೆಂಕಿ ಹಚ್ಚಿದವರ ಪತ್ತೆ ಹಚ್ಚಲು ಅರಣ್ಯ ಇಲಾಖೆ ಕಾರ್ಯ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಮದ್ದೂರು ವಲಯದಲ್ಲಿ ಮೊದಲಿಗೆ ಕರಡಿಕಲ್ ಬೆಟ್ಟ ಹಾಗೂ ಗೋಪಾಲಸ್ವಾಮಿ ಬೆಟ್ಟದ ಕುಳ್ಳನ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಸಿಬ್ಬಂದಿಗಳ ಶ್ರಮದ ಫಲವಾಗಿ ಬೆಂಕಿ ನಂದಿದೆ. ವನ್ಯಜೀವಿಗಳಿಗೇನು ತೊಂದರೆಯಾಗಿಲ್ಲ.
-ಪ್ರಭಾಕರನ್, ಡಿಸಿಎಫ್, ಬಂಡೀಪುರಮೊದಲಿಗೆ ಮದ್ದೂರು ವಲಯದಲ್ಲಿ ಬೆಂಕಿ ಕಾಣಿಸಿಕೊಂಡ ವಿಷಯ ತಿಳಿದ ತಕ್ಷಣ ನಾನು ಹಾಗೂ ಮದ್ದೂರು ಆರ್ಎಫ್ಒ ಬಿ.ಎಂ.ಮಲ್ಲೇಶ್ ಸ್ಥಳಕ್ಕೆ ಧಾವಿಸಿದೆವು. ಸಿಬ್ಬಂದಿ ಬೆಂಕಿಯನ್ನು ರಾತ್ರಿಯೇ ನಂದಿಸಿದರು.-ಜಿ.ರವೀಂದ್ರ, ಎಸಿಎಫ್, ಗುಂಡ್ಲುಪೇಟೆ