ಮಳೆಗೆ ಬಂಡೀಪುರ ಕೆರೆ, ಕಟ್ಟೆಗಳು ಭರ್ತಿ!

| Published : Jul 25 2024, 01:19 AM IST

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಬಂಡೀಪುರದ ಎಲ್ಲಾ ಕೆರೆ, ಕಟ್ಟೆಗಳು ತುಂಬುವ ಮೂಲಕ ವನ್ಯಜೀವಿ ಸಂಕುಲಕ್ಕೆ ನೀರಿನ ಬವಣೆ ನೀಗಿದೆ!

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆ ಸುರಿಯುತ್ತಿರುವ ಕಾರಣ ಬಂಡೀಪುರದ ಎಲ್ಲಾ ಕೆರೆ, ಕಟ್ಟೆಗಳು ತುಂಬುವ ಮೂಲಕ ವನ್ಯಜೀವಿ ಸಂಕುಲಕ್ಕೆ ನೀರಿನ ಬವಣೆ ನೀಗಿದೆ!

ಬಂಡೀಪುರ ಕಾಡಿನತ್ತ ಎತ್ತ ನೋಡಿದರೂ ಕಾಡು ಹಚ್ಚ ಹಸಿರಿನಿಂದ ಕಾಣುತ್ತಿದ್ದು, ಮೈಸೂರು-ಊಟಿ ಹಾಗೂ ಗುಂಡ್ಲುಪೇಟೆ-ಕೇರಳ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಹಸಿರು ಕಂಡು ಪುಳಕಿತರಾಗುತ್ತಿದ್ದಾರೆ. ಕಳೆದ ಮೇ ಹಾಗೂ ಜೂನ್‌ ತಿಂಗಳಲ್ಲಿ ಮಳೆ ಬಿದ್ದಿದೆ. ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಾಡಿನ ಪ್ರಾಣಿಗಳು ನೀರು ಕಂಡು ಸ್ವಚ್ಛಂದವಾಗಿ ಸಂಚರಿಸುತ್ತಿವೆ. ವರುಣ ದೇವನ ಕೃಪೆಯ ಫಲವಾಗಿ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ, ಮದ್ದೂರು, ಕುಂದಕೆರೆ, ಕಲ್ಕೆರೆ, ಬಂಡೀಪುರ, ಓಂಕಾರ, ಹೆಡಿಯಾಲ, ನುಗು, ಗುಂಡ್ರೆ, ಎನ್.ಬೇಗೂರು ವಲಯಗಳಲ್ಲಿನ ಕೆರೆ ಕಟ್ಟೆಗಳು ತುಂಬಿವೆ. ಇದರಿಂದ ಅಧಿಕಾರಿಗಳಿಗಿಂತ ವನ್ಯಜೀವಿಗಳಿಗ ಹೆಚ್ಚಿನ ಸಂತಸವಾಗಿವೆ.

ವರ್ಷದ ಆರಂಭದಿಂದಲೇ ಕಾಡಿಗೆ ಬೆಂಕಿ ಬೀಳದಂತೆ ನೋಡಿಕೊಳ್ಳುವುದೇ ಅರಣ್ಯ ಇಲಾಖೆಗೆ ಒಂದು ಸವಾಲು. ಇಂಥ ಸಮಯದಲ್ಲಿ ಮಳೆಗೆ ಕೆರೆ ಕಟ್ಟೆಗಳಿಗೆ ನೀರು ಬಂದು ಕಾಡು ಹಾಗೂ ಪ್ರಾಣಿಗಳ ದಾಹ ನೀಗಿಸಿದ್ದು, ಮಳೆಯ ನಡುವೆಯೇ ಕಾಡಾನೆಗಳು ಕೆರೆಯಲ್ಲಿ ಇಳಿದು ಒದ್ದಾಡುತ್ತಿವೆ. ಕಾಡಿನಲ್ಲಿ ನಿರೀಕ್ಷೆಯಂತೆ ಅಕ್ಟೋಬರ್‌, ನವಂಬರ್‌ ತಿಂಗಳ ಮಳೆಗೆ ಕೆರೆ ಕಟ್ಟೆಗಳು ನೀರು ತುಂಬಿಕೊಳ್ಳುತ್ತಿದ್ದದ್ದು ವಾಡಿಕೆ. ಆದರೆ ಈ ಬಾರಿ ಮೇ ತಿಂಗಳಲ್ಲೆ ಉತ್ತಮ ಮಳೆಯಾದ ಕಾರಣ ಕೆರೆ ಕಟ್ಟೆಗಳಿಗೆ ನೀರು ಬಂದಿತ್ತು. ಕೆರೆ ಕಟ್ಟೆಗಳಲ್ಲಿ ನೀರು ತುಂಬಿರುವ ಕಾರಣ ಪ್ರಾಣಿ, ಪಕ್ಷಿಗಳಿಗೆ ತುಸು ನೆಮ್ಮದಿ ಸಿಕ್ಕಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿರಿಕೆರೆ, ಹುಲಿ ಕಟ್ಟೆ, ಆನೆ ಕಟ್ಟೆ, ತಾಳಟ್ಟಿಕೆರೆ (ಪಿಕಪ್)‌, ಮಂಜೀ ಕಟ್ಟೆ, ಆನೆಕಟ್ಟೆವಾಡೆ, ವೆಂಕಟಕೆರೆ, ಶೆಟ್ಟಿ ಕೆರೆ, ಮಿನಿಸ್ಟ್ರೀ ಕೆರೆ, ಸೂಳೆಕೆರೆ ಸೇರಿದಂತೆ ಶೇ.೮೦ ರಷ್ಟು ಕೆರೆ ಭರ್ತಿಯಾಗಿವೆ. ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಈ ಬಾರಿ ಬಂಡೀಪುರ ಅರಣ್ಯ ಪ್ರದೇಶದಲ್ಲಿನ ಎಲ್ಲಾ ಕೆರೆ, ಕಟ್ಟೆಗಳು ಶೇ.೮೦ ರಷ್ಟು ತುಂಬಿವೆ. ನಿರೀಕ್ಷೆಗೂ ಮೀರಿ ಮಳೆ ಸುರಿದ ಕಾರಣ ಬಂಡೀಪುರ ಕಾಡು ಹಸಿರು ಮಯವಾಗಿದೆ ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರ್‌ ತಿಳಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಗ ಬಿದ್ದಿರುವ ಮಳೆಗೆ ಶೇ.೯೯ ರಷ್ಟು ಕೆರೆಗಳು ತುಂಬಿವೆ. ತಾವರೆ ಕೆರೆ, ಬಂಡೀಪುರ ಕೆರೆ, ಹಿರಿಕೆರೆ ತುಂಬಿ ಕೋಡಿ ಬಿದ್ದಿವೆ. ಮತ್ತೇ ಮಳೆ ಮುಂದುವರಿದರೆ ಇನ್ನಷ್ಟು ಕೆರೆಗಳು ಕೋಡಿ ಬೀಳಲಿವೆ ಎಂದರು. ನಾನು ಬಂಡೀಪುರ ಡಿಸಿಎಫ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ವಲಯಗಳಲ್ಲಿ ತಲಾ ೨ ಕೆರೆಗಳ ಹೂಳೆತ್ತಿಸಲಾಗಿದೆ ಆ ಎಲ್ಲಾ ಕೆರೆಗಳಲ್ಲಿ ನೀರು ತುಂಬಿವೆ ಎಂದರು.

ಮಳೆ ನಿಂತು ಬಂದರೆ ಅನುಕೂಲ! ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ಕೆರೆ, ಕೆಟ್ಟೆಗಳು ತುಂಬಿ ತುಳುಕುವ ಸಮಯದಲ್ಲೂ ಮಳೆ ನಿಂತಿಲ್ಲ. ಮಳೆ ಸ್ವಲ್ಪ ದಿನ ನಿಂತರೆ ಒಳ್ಳೆಯದೇ ಎಂದು ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಎಸ್.ಪ್ರಭಾಕರನ್‌ ಹೇಳಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ, ಈಗ ಬಿದ್ದಿರುವ ಮಳೆಗೆ ಕೆರೆ ಕಟ್ಟೆಗಳು ತುಂಬಿವೆ. 15 ದಿನ ಮಳೆ ನಿಂತು ಬಂದರೆ ಭೂಮಿ ನೀರು ಕುಡಿದು ಅಂತರ್ಜಲ ಹೆಚ್ಚಲಿದೆ ಎಂದರು.