ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲಿದ್ದು, ಅವರು ನಾಡಿನ ಭವಿಷ್ಯದ ಮತ್ತು ಮುಂದಿನ ಪೀಳಿಗೆಯ ಏಳಿಗೆಗಾಗಿ ಜಾರಿಗೆ ತಂದ ಹಲವು ಯೋಜನೆಗಳಿಂದ ಇಂದು ಬೆಂಗಳೂರು ಇಡೀ ವಿಶ್ವದ ಗಮನವನ್ನು ಸೆಳೆದಿದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.
ಉಡುಪಿ: ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಟಿಯಿಂದ ನಿರ್ಮಿಸಿದ ಬೆಂಗಳೂರು ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲಿದ್ದು, ಅವರು ನಾಡಿನ ಭವಿಷ್ಯದ ಮತ್ತು ಮುಂದಿನ ಪೀಳಿಗೆಯ ಏಳಿಗೆಗಾಗಿ ಜಾರಿಗೆ ತಂದ ಹಲವು ಯೋಜನೆಗಳಿಂದ ಇಂದು ಬೆಂಗಳೂರು ಇಡೀ ವಿಶ್ವದ ಗಮನವನ್ನು ಸೆಳೆದಿದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಶನಿವಾರ ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಉದ್ಘಾಟಿಸಿ, ಮಾತನಾಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ. ಎ. ಗಫೂರ್ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಬೆಂಗಳೂರಿನ ಇಂದಿನ ಅಭಿವೃದ್ಧಿಗೆ ಕೆಂಪೇಗೌಡರ ಕೊಡುಗೆ ಅಪಾರವಾಗಿದೆ. ಕೇವಲ ಒಂದೇ ಜಾತಿಗೆ ಸೀಮಿತವಾಗಿರದೇ ಸರ್ವಧರ್ಮಿಯರನ್ನೂ ಸಮಾನವಾಗಿ ಕಾಣುತ್ತಿದ್ದ ಕೆಂಪೇಗೌಡರ ಆದರ್ಶಗಳು ನಮ್ಮೆಲ್ಲರಿಗೂ ಹಾಗೂ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗಲಿ ಎಂದರು. ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಉಪನ್ಯಾಸಕ ದಯಾನಂದ ಡಿ. ಕಿದಿಯೂರು, ಪ್ರಗತಿಪರ ಚಿಂತನೆಯನ್ನು ಹೊಂದಿದ್ದ ನಾಡಪ್ರಭು ಕೆಂಪೇಗೌಡರು. ಸಮಾಜದಲ್ಲಿದ್ದ ಪ್ರತಿಯೊಂದು ಜನಾಂಗದ ಕುಲಕಸುಬು ಹಾಗೂ ವೃತ್ತಿ ಆಧಾರಿತವಾಗಿ ಜನರ ಆರ್ಥಿಕ ಅಭಿವೃದ್ಧಿಗೆ ಅನೇಕ ಪೇಟೆಗಳನ್ನು ನಿರ್ಮಿಸಿದ್ದರು. ಅಪಾರವಾದ ಪರಿಸರ ಕಾಳಜಿಯನ್ನು ಹೊಂದಿದ್ದ ಕೆಂಪೇಗೌಡರು ಕೃಷಿ ಮತ್ತು ಕುಡಿಯುವ ನೀರಿಗಾಗಿ ಹಲವು ಕೆರೆಗಳ ನಿರ್ಮಾಣವನ್ನು ವೈಜ್ಞಾನಿಕವಾಗಿ ಮಾಡಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ, ಉಡುಪಿ ಜಿಲ್ಲಾ ಒಕ್ಕಲಿಗ ಸೇವಾ ಸಂಘದ ಕಾರ್ಯದರ್ಶಿ ಹೇಮಾನಂದ ಹಲ್ದಡ್ಕ, ಪದಾಧಿಕಾರಿಗಳು, ಶಾಲೆಯ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವರ್ಷಾ ಬಿ. ಕೋಟ್ಯಾನ್ ನಿರೂಪಿಸಿ, ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಬಿ. ವಂದಿಸಿದರು.