ಸಾರಾಂಶ
ರಾಮನಗರ: ವಿಧಾನ ಪರಿಷತ್ ನ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಶೇ.78.88ರಷ್ಟು ಮತದಾನ ಆಗಿದೆ.
ಜಿಲ್ಲೆಯ ಒಟ್ಟು 28 ಮತಗಟ್ಟೆಗಳಲ್ಲಿಯೂ ಮತದಾನ ಶಾಂತಿಯುತವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡು ಸಂಜೆ 4 ಗಂಟೆವರೆಗೆ ನಡೆಯಿತು. ರಾಮನಗರ ಜಿಲ್ಲೆಯ ಒಟ್ಟು 18,997 ಪದವೀಧರ ಮತದಾರರಲ್ಲಿ 14,985 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 8,118 ಪುರುಷರು, 6866 ಮಹಿಳೆಯರು, 1 ಇತರೆ ಮತ ಚಲಾಯಿಸಿದ್ದಾರೆ.ಪ್ರಾರಂಭದಲ್ಲಿ ಮಂದಗತಿಯಲ್ಲಿ ಸಾಗಿದ ಮತದಾನ ಬೆಳಗ್ಗೆ 10 ಗಂಟೆಗೆ ಶೇ.13.33ರಷ್ಟು ಆಗಿತ್ತು. ಆನಂತರ ಬಿರುಸು ಪಡೆದ ಮತದಾನ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.53.36ರಷ್ಟಾಯಿತು. ಪದವೀಧರ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದರು.ಮತದಾನ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಮನಗರದ ತಾಲೂಕು ಆಡಳಿತ ಸೌಧದ ಮತಗಟ್ಟೆ ಆವರಣ ಜನಜಂಗುಳಿಯಿಂದ ತುಂಬಿತ್ತು. ಇದರಿಂದಾಗಿ ಹೆದ್ದಾರಿಯಲ್ಲಿ ಇಡೀ ದಿನ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಕೆಲವು ಪ್ರಭಾವಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಮತ ಕೇಂದ್ರದ ಹೊರಗೆ ತಮ್ಮ ಅಭ್ಯರ್ಥಿಗಳ ಪರ ಮತ ಚಲಾಯಿಸುವಂತೆ ಮತದಾರರನ್ನು ಓಲೈಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಕಾಂಗ್ರೆಸ್ ವತಿಯಿಂದ ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು, ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ ಹಾಗೂ ಬಿಜೆಪಿ - ಜೆಡಿಎಸ್ ಪರವಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತಯಾಚಿಸಿದರು.
ಜಿಲ್ಲಾ ವ್ಯಾಪ್ತಿಯ ಮತ ಕೇಂದ್ರಗಳಲ್ಲಿ ಸೂಕ್ತ ಬಂದೂಬಸ್ತ್ ಮಾಡಲಾಗಿತ್ತು. ಮತದಾನ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಬಿಗಿಭದ್ರತೆ ಮಾಡಲಾಗಿತ್ತು.ಬಾಕ್ಸ್ ..............28 ಮತಗಟ್ಟೆಗಳಲ್ಲಿ ಮತದಾನ
ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ, ಮಾಗಡಿ, ಕನಕಪುರ ಹಾಗೂ ಹಾರೋಹಳ್ಳಿ ತಾಲ್ಲೂಕು ಬೆಂಗಳೂರು ಪದವೀಧರರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಜಿಲ್ಲೆಯಲ್ಲಿ ಒಟ್ಟು 10,144 ಪುರುಷರು, 8849 ಮಹಿಳೆ, 4 - ಇತರೆ ಸೇರಿ ಒಟ್ಟು 18,997ಮತದಾರರಿದ್ದಾರೆ. ಇದಕ್ಕಾಗಿ ಜಿಲ್ಲಾ ವ್ಯಾಪ್ತಿಯ 28 ಮತಗಟ್ಟೆಗಳನ್ನು ತೆರೆಯಲಾಗಿತ್ತು.ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕುದೂರು ಗ್ರಾಮ ಪಂಚಾಯಿತಿ ಕಚೇರಿ, ತಿಪ್ಪಸಂದ್ರ ಹೋಬಳಿಯ ಗ್ರಾಪಂ ಕಚೇರಿ, ಸೋಲೂರು ಹೋಬಳಿಯ ಗ್ರಾಪಂ ಕಚೇರಿ, ಮಾಗಡಿ ತಹಸೀಲ್ದಾರ್ ಕಚೇರಿಯ ಕೋರ್ಟ್ ಹಾಲ್ ಕೊಠಡಿ ಸಂಖ್ಯೆ- 1 ಹಾಗೂ ತಹಸೀಲ್ದಾರ್ ಗ್ರೇಡ್- 1 ಕಚೇರಿಯ ಕೊಠಡಿ ಸಂಖ್ಯೆ-2, ತಹಸೀಲ್ದಾರ್ ಕಚೇರಿಯ ಆಡಳಿತಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ- 3ರಲ್ಲಿ ಮತದಾನ ನಡೆಯಿತು.
ರಾಮನಗರದ ಬಿ.ಎಂ. ರಸ್ತೆಯ ತಾಲೂಕು ಆಡಳಿತ ಸೌಧದ ತಹಸೀಲ್ದಾರರ ಕಚೇರಿಯ ಕೊಠಡಿ ಸಂಖ್ಯೆ- 1, 2, 3 ಹಾಗೂ 4, ಕೈಲಾಂಚ ಹೋಬಳಿಯ ಕೈಲಾಂಚ ಗ್ರಾಮದ ಜಿಎಚ್ ಪಿಎಸ್ ಶಾಲೆಯ ಕೊಠಡಿ ಸಂಖ್ಯೆ- 2, ಕೂಟಗಲ್ ಹೋಬಳಿಯ ಕೂಟಗಲ್ ಗ್ರಾಮದ ಜಿಎಚ್ ಪಿಎಸ್ ಶಾಲೆಯ ಕೊಠಡಿ ಸಂಖ್ಯೆ- 2, ಬಿಡದಿ ಪಟ್ಟಣದ ಪುರಸಭೆಯ ಜಿಎಚ್‌ಪಿಎಎಸ್‌ಎನ್ ಕೊಠಡಿ ಸಂಖ್ಯೆ-1 ಹಾಗೂ 2ರಲ್ಲಿ ಮತದಾನ ನಡೆಯಿತು.ಚನ್ನಪಟ್ಟಣ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿಯ ಕೊಠಡಿ ಸಂಖ್ಯೆ- 1 ಹಾಗೂ 2, ತಾಲೂಕು ಪಂಚಾಯತ್ ಕಚೇರಿ, ಸಾಮರ್ಥ್ಯ ಸೌಧದ ತರಬೇತಿ ಕೇಂದ್ರ, ದೊಡ್ಡ ಮಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ- 1 ಹಾಗೂ 2, ಕೋಡಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕೊಠಡಿ ಸಂಖ್ಯೆ-1 ಹಾಗೂ 2ರಲ್ಲಿ ಮತದಾನ ನಡೆಯಿತು. ಹಾರೋಹಳ್ಳಿ ತಾಲೂಕಿನ ಕೆಪಿಎಸ್ ಜಿಎಚ್ ಪಿಎಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 1 ಮತ್ತು 2ರಲ್ಲಿ ಮತದಾನ ನಡೆಯಿತು. ಕನಕಪುರ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿಯ ಕೊಠಡಿ ಸಂಖ್ಯೆ 1, 2, 3 ಹಾಗೂ 4ರಲ್ಲಿ ಮತದಾನ ನಡೆಯಿತು.
3ಕೆಆರ್ ಎಂಎನ್ 4,5.ಜೆಪಿಜಿ4.ಕನಕಪುರ ತಾಲೂಕು ಆಡಳಿತ ಸೌಧದಲ್ಲಿ ಪದವೀಧರ ಮತದಾರರು ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆಯಲ್ಲಿ ಮತದಾನ ಮಾಡಲು ಸಾಲಾಗಿ ನಿಂತಿರುವುದು.
5.ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಪದವೀಧರ ಮತದಾರರಲ್ಲಿ ಮತಯಾಚಿಸಿದರು.