ಬೆಂಗಳೂರು ಗ್ರಾಮಾಂತರ ಜಿಲ್ಲೆ: ಶೇ.77.03 ಮತದಾನ

| Published : Jun 04 2024, 12:31 AM IST

ಸಾರಾಂಶ

ದೊಡ್ಡಬಳ್ಳಾಪುರ: ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ಸೋಮವಾರ ನಡೆದ ಚುನಾವಣೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಶಾಂತಿಯುತ ಮತದಾನ ನಡೆದು, 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಾಸರಿ ಶೇ.77.03 ಮತದಾನ ನಡೆದಿದೆ.

ದೊಡ್ಡಬಳ್ಳಾಪುರ: ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ಸೋಮವಾರ ನಡೆದ ಚುನಾವಣೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಶಾಂತಿಯುತ ಮತದಾನ ನಡೆದು, 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಾಸರಿ ಶೇ.77.03 ಮತದಾನ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 8, ದೇವನಹಳ್ಳಿಯಲ್ಲಿ 6, ಹೊಸಕೋಟೆಯಲ್ಲಿ 6, ನೆಲಮಂಗಲದಲ್ಲಿ 5 ಸೇರಿದಂತೆ ಒಟ್ಟು 25 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎಲ್ಲ ಮತಗಟ್ಟೆಗಳ ವ್ಯಾಪ್ತಿಯಲ್ಲೂ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತದಾನಕ್ಕೆ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿತ್ತು.

ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಮತ್ತು ದೊಡ್ಡಬಳ್ಳಾಪುರ ಟೌನ್ ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ 4 ಮತಗಟ್ಟೆಗಳು, ದೊಡ್ಡಬೆಳವಂಗಲ, ಕನಸವಾಡಿ, ಸಾಸಲು, ತೂಬಗೆರೆ ಗ್ರಾಮಗಳಲ್ಲಿ ತಲಾ 1 ಮತಗಟ್ಟೆ, ದೇವನಹಳ್ಳಿ, ವಿಜಯಪುರ ಟೌನ್‌ಗಳಲ್ಲಿ ತಲಾ 2, ಚನ್ನರಾಯಪಟ್ಟಣ, ಕುಂದಾಣದಲ್ಲಿ 1 ಮತಗಟ್ಟೆ, ಹೊಸಕೋಟೆ ಟೌನ್‌ನಲ್ಲಿ 2, ಆನುಗೊಂಡನಹಳ್ಳಿ, ಜಡಿಗೇನಹಳ್ಳಿ, ನಂದಗುಡಿ, ಸೂಲಿಬೆಲೆಗಳಲ್ಲಿ ತಲಾ 1 ಮತಗಟ್ಟೆ, ನೆಲಮಂಗಲ ಟೌನ್‌ನಲ್ಲಿ 3, ತ್ಯಾಮಗೊಂಡ್ಲು, ಸೋಂಪುರಗಳಲ್ಲಿ ತಲಾ 1 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

14,729 ಪದವೀಧರರಿಂದ ಮತ ಚಲಾವಣೆ:

ಜಿಲ್ಲಾ ವ್ಯಾಪ್ತಿಯ 25 ಮತಗಟ್ಟೆಗಳಲ್ಲಿ ಒಟ್ಟು 10240 ಪುರುಷರು, 8882 ಮಹಿಳೆಯರು ಸೇರಿದಂತೆ 19,122 ಮತದಾರರರು ಮತದಾನದ ಹಕ್ಕು ಪಡೆದಿದ್ದರು. ಈ ಪೈಕಿ 8229 ಪುರುಷರು, 6500 ಮಹಿಳಾ ಮತದಾರರು ಸೇರಿದಂತೆ ಒಟ್ಟು 14,729 ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಮತದಾನ ಕೇಂದ್ರಗಳಲ್ಲಿ 5515 ಪದವೀಧರ ಮತದಾರರ ಪೈಕಿ 4261 ಮತದಾರರು ಮತ ಚಲಾಯಿಸಿದ್ದು ಶೇ.77.26 ರಷ್ಟು ಮತದಾನವಾಗಿದೆ. ದೇವನಹಳ್ಳಿ ತಾಲೂಕಿನ ಮತದಾನ ಕೇಂದ್ರಗಳಲ್ಲಿ 4739 ಪದವೀಧರ ಮತದಾರರ ಪೈಕಿ 3459 ಮತದಾರರು ಮತ ಚಲಾಯಿಸಿದ್ದು ಶೇ. 72.80 ರಷ್ಟು ಮತದಾನವಾಗಿದೆ, ಹೊಸಕೋಟೆ ತಾಲೂಕಿನ ಮತದಾನ ಕೇಂದ್ರಗಳಲ್ಲಿ 5611 ಪದವೀಧರ ಮತದಾರರ ಪೈಕಿ 4318 ಮತದಾರರು ಮತ ಚಲಾಯಿಸಿದ್ದು ಶೇ. 76.95 ರಷ್ಟು ಮತದಾನವಾಗಿದೆ. ನೆಲಮಂಗಲ ತಾಲೂಕಿನ ಮತದಾನ ಕೇಂದ್ರಗಳಲ್ಲಿ 3257 ಪದವೀಧರ ಮತದಾರರ ಪೈಕಿ 2700 ಮತದಾರರು ಮತ ಚಲಾಯಿಸಿದ್ದು ಶೇ. 82.89 ಮತದಾನವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ ಎನ್ ಶಿವಶಂಕರ್ ತಿಳಿಸಿದ್ದಾರೆ.

ಮತಗಟ್ಟೆ ಹೊರಗೆ ಪ್ರಚಾರ ಭರಾಟೆ:

ಮತಗಟ್ಟೆಗಳ ಹೊರಗೆ ಪ್ರಚಾರದ ಭರಾಟೆ ಜೋರಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿಗೌಡ, ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಬೆಂಬಲಿಗರು ತಮ್ಮ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಮತಗಟ್ಟೆಗಳ ಹೊರಗೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದು, ಅಂತಿಮ ಹಂತದಲ್ಲಿ ಮತದಾರರ ಒಲವು ಗಳಿಸುವ ಪ್ರಯತ್ನ ನಡೆಸಿದ್ದರು.

ಪಕ್ಷೇತರರಿಂದಲೂ ಪ್ರಬಲ ಸ್ಪರ್ಧೆ:

ಪ್ರಸ್ತುತ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಪುಟ್ಟಸ್ವಾಮಿ ಸೇರಿದಂತೆ ಕೆಲ ಪ್ರಭಾವಿ ಅಭ್ಯರ್ಥಿಗಳ ಪರ ಪ್ರಚಾರ ಭರಾಟೆ ಹೆಚ್ಚಿತ್ತು. ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ರೀತಿಯಲ್ಲೇ ಪ್ರತಿ ಮತದಾರರನ್ನು ತಲುಪುವ ಪ್ರಯತ್ನವನ್ನು ಪಕ್ಷೇತರ ಅಭ್ಯರ್ಥಿಗಳು ಕೈಗೊಂಡಿದ್ದು ವಿಶೇಷವಾಗಿತ್ತು.

ಆಮಿಷಗಳ ಭರಾಟೆ:

ಮತಗಟ್ಟೆಗಳ ಸುತ್ತಮುತ್ತ ವಿವಿಧ ಅಭ್ಯರ್ಥಿಗಳ ಪರ ಆಮಿಷಗಳ ಭರಾಟೆ ಹೆಚ್ಚಿತ್ತು. ಮತದಾನ ಆರಂಭವಾದ ಸಮಯದಿಂದ ಮಧ್ಯಾಹ್ನದವರೆಗೆ ಕೆಲವೆಡೆ ಕೆಲ ಅಭ್ಯರ್ಥಿಗಳ ಪರ ಹಣ, ಉಡುಗೊರೆಗಳ ಹಂಚಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಆಡಳಿತಯಂತ್ರ ಇದನ್ನು ನಿಯಂತ್ರಿಸುವ ಕೆಲಸಕ್ಕೆ ಕೈಹಾಕಲಿಲ್ಲ. ಅಧಿಕಾರಿಗಳು ಈ ಬಗ್ಗೆ ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಜಿಲ್ಲೆಯಲ್ಲಿ ಶೇ 77.02 ಮತದಾನ:

ಇಂದು ನಡೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.77.02 ಮತದಾನ ನಡೆದಿದೆ. ನೆಲಮಂಗಲ ತಾಲೂಕಿನಲ್ಲಿ ಅತಿ ಹೆಚ್ಚು ಶೇ.82.89 ಮತ ಚಲಾವಣೆಗೊಂಡಿದೆ. ದೇವನಹಳ್ಳಿಯಲ್ಲಿ ಅತಿ ಕಡಿಮೆ ಶೇ.72.80 ಮತದಾನ ನಡೆದಿದೆ. ಉಳಿದಂತೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಶೇ.77.26, ಹೊಸಕೋಟೆ ತಾಲೂಕಿನಲ್ಲಿ ಶೇ.76.95 ಮತದಾನವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

6ರಂದು ಮತ ಎಣಿಕೆ:

ಸೊಮವಾರ ಮುಕ್ತಾಯವಾಗಿ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ ಮತಗಳ ಎಣಿಕೆ ಪ್ರಕ್ರಿಯೆ ಜೂನ್ 6ರಂದು ಗುರುವಾರ ನಡೆಯಲಿದೆ.3ಕೆಡಿಬಿಪಿ7-

ದೊಡ್ಡಬಳ್ಳಾಪುರ ತಾಲೂಕಿನ ಮತಗಟ್ಟೆಯೊಂದರಲ್ಲಿ ಮತದಾನಕ್ಕಾಗಿ ಸಾಲುಗಟ್ಟಿ ಕಾದಿರುವ ಪದವೀಧರ ಮತದಾರರು.3ಕೆಡಿಬಿಪಿ8-

ದೇವನಹಳ್ಳಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಪದವೀಧರ ಯುವ ಮತದಾರರ ಉತ್ಸಾಹ.