ನ.19ರಿಂದ ಬೆಂಗಳೂರು ಟೆಕ್‌ ಸಮ್ಮಿಟ್‌: ಖರ್ಗೆ

| Published : Jul 13 2024, 01:41 AM IST / Updated: Jul 13 2024, 08:38 AM IST

ಸಾರಾಂಶ

ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನದ ನಾಯಕವನ್ನಾಗಿಸುವ ಉದ್ದೇಶದೊಂದಿಗೆ 27ನೇ ಆವೃತ್ತಿಯ ಬೆಂಗಳೂರು ಟೆಕ್‌ ಸಮ್ಮಿಟ್‌ (ಬಿಟಿಎಸ್‌)ಅನ್ನು ನವೆಂಬರ್‌ 19ರಿಂದ 21ರವರೆಗೆ ಬೆಂಗಳೂರು ಅರಮನೆಯಲ್ಲಿ ಆಯೋಜಿಸಲಾಗುದೆ

  ಬೆಂಗಳೂರು :  ಬೆಂಗಳೂರನ್ನು ಜಾಗತಿಕ ತಂತ್ರಜ್ಞಾನದ ನಾಯಕವನ್ನಾಗಿಸುವ ಉದ್ದೇಶದೊಂದಿಗೆ 27ನೇ ಆವೃತ್ತಿಯ ಬೆಂಗಳೂರು ಟೆಕ್‌ ಸಮ್ಮಿಟ್‌ (ಬಿಟಿಎಸ್‌)ಅನ್ನು ನವೆಂಬರ್‌ 19ರಿಂದ 21ರವರೆಗೆ ಬೆಂಗಳೂರು ಅರಮನೆಯಲ್ಲಿ ಆಯೋಜಿಸಲಾಗುತ್ತಿದ್ದು, ಅನ್‌ಬೌಂಡ್‌ (ಮಿತಿ ರಹಿತ) ಘೋಷವಾಕ್ಯದೊಂದಿಗೆ ಸಮ್ಮಿಟ್‌ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಬಿಟಿಎಸ್‌ ಅನ್ನು ನಾವೀನ್ಯತೆ ಮತ್ತು ಜಾಗತಿಕ ಸಹಭಾಗಿತ್ವದೊಂದಿಗೆ ಆಯೋಜಿಸಲಾಗುತ್ತಿದೆ. ಈ ಬಾರಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ಇನ್ನಿತರ ತಂತ್ರಜ್ಞಾನಗಳ ಮೂಲಕ ಕೃಷಿ ಮತ್ತು ಕೃಷಿಕರು, ನಗರವಾಸಿಗಳು ಸೇರಿದಂತೆ ರಾಜ್ಯದ ಇತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. 3 ದಿನಗಳ ಶೃಂಗಸಭೆಯಲ್ಲಿ ಅದಕ್ಕೆ ಪೂರಕವಾದಂತಹ ಸಂವಾದ, ಉಪನ್ಯಾಸ ಕಾರ್ಯಕ್ರಮಗಳು, ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಈ ಬಾರಿಯ ಬಿಟಿಎಸ್‌ನಲ್ಲಿ 31ಕ್ಕೂ ಹೆಚ್ಚಿನ ದೇಶಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 700ಕ್ಕೂ ಹೆಚ್ಚಿನ ಪ್ರದರ್ಶಕರಿರಲಿದ್ದು, ಅದರಲ್ಲಿ 500ಕ್ಕೂ ಹೆಚ್ಚಿನ ಸ್ಟಾರ್ಟ್‌ಅಪ್‌ಗಳಾಗಿವೆ. ಜತೆಗೆ 460ಕ್ಕೂ ಹೆಚ್ಚಿನ ವಿಷಯ ಪರಿಣಿತರು 85ಕ್ಕೂ ಹೆಚ್ಚಿನ ಸಂವಾದ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. 5 ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, 50 ಸಾವಿರಕ್ಕೂ ಹೆಚ್ಚಿನ ಜನರು ಬಿಟಿಎಸ್‌ಗೆ ಭೇಟಿ ನೀಡಿ ತಮ್ಮ ಜ್ಞಾನವನ್ನು ಹಾಗೂ ಉದ್ಯಮವನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಬಿಟಿಎಸ್‌ ಮೂಲಕ ಸಣ್ಣ ಮತ್ತು ದೊಡ್ಡ ಪ್ರಮಾಣದ ಉದ್ಯಮ ಮತ್ತು ಉದ್ಯಮಿಗಳ ನಡುವೆ ಸಂವಹನ ನಡೆಯುವಂತೆ ಮಾಡಲಾಗುವುದು. ಅದಕ್ಕಾಗಿ 2 ಸಾವಿರಕ್ಕೂ ಹೆಚ್ಚಿನ ಆನ್‌ಲೈನ್‌ ಬಿ2ಬಿ ಹಾಗೂ 500ಕ್ಕೂ ಹೆಚ್ಚಿನ ನೇರ ಬಿ2ಬಿ ಆಯೋಜಿಸಲಾಗುತ್ತಿದೆ. ಜತೆಗೆ ಸಂಶೋಧನೆ ಮತ್ತು ಅಭಿವೃದ್ಧಿ, ಬಾಹ್ಯಾಕಾಶ, ಎಲೆಕ್ಟ್ರಾನಿಕ್ಸ್‌, ಕೃತಕ ಬುದ್ಧಿಮತ್ತೆ, ಸೆಮಿ ಕಂಡಕ್ಟರ್ ಹೀಗೆ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ಪೆವಿಲಿಯನ್‌ಗಳನ್ನು ಸ್ಥಾಪಿಸಲಾಗುತ್ತದೆ. ಈ ಬಾರಿಯ ಬಿಟಿಎಸ್‌ನಲ್ಲಿ ದೇಶದ 36ಕ್ಕೂ ಹೆಚ್ಚಿನ ನಗರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜತೆಗೆ ಜಾಗತಿಕ ಮಟ್ಟದಲ್ಲಿ ದೇಶದ ಮಾಹಿತಿ ತಂತ್ರಜ್ಞಾನವನ್ನು ವಿಸ್ತರಿಸುವ ನಿಟ್ಟಿನಲ್ಲಿ ಬಿಟಿಎಸ್‌ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

2ನೇ ಹಂತದ ನಗರಗಳಲ್ಲಿ ಕಾರ್ಯಕ್ರಮ

ಬಿಯಾಂಡ್‌ ಬೆಂಗಳೂರು ಪರಿಕಲ್ಪನೆಗೆ ಉತ್ತೇಜನ ನೀಡುವ ಸಲುವಾಗಿ ರಾಜ್ಯದ 2ನೇ ಹಂತದ ನಗರಗಳಲ್ಲೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಮುಖವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೆಳಗಾವಿ, ಮಂಗಳೂರುಗಳಲ್ಲಿ ಬಿಟಿಎಸ್‌ಗೆ ಪೂರಕವಾದಂತಹ ಕಾರ್ಯಕ್ರಮಗಳನ್ನು ನಡೆಸಿ ಆ ನಗರಗಳಲ್ಲೂ ಉದ್ಯಮಗಳ ಹೂಡಿಕೆಗೆ ಉತ್ತೇಜಿಸಲಾಗುವುದು ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಭಾರತ-ಅಮೆರಿಕಾ ಸಮಾವೇಶ

ಬಿಟಿಎಸ್‌ ಮೂಲಕ ಐಟಿ-ಬಿಟಿಗೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕಾದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡಲಾಗುವುದು. ಅದಕ್ಕಾಗಿ 2 ದಿನಗಳ ಕಾಲ ಭಾರತ-ಅಮೆರಿಕಾ ಸಮಾವೇಶ ಸಮಾವೇಶವನ್ನು ನಡೆಸಲಾಗುತ್ತಿದೆ. ಎರಡೂ ದೇಶಗಳ ವಿಷಯ ತಜ್ಞರಿಂದ ಸಂವಾದ, ಬಿ2ಬಿ, ತಂತ್ರಜ್ಞಾನ ಸಹಯೋಗ, ಹೂಡಿಕೆಗೆ ಒಪ್ಪಂದ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಪ್ರಿಯಾಂಕ್‌ ಖರ್ಗೆ ಮಾಹಿತಿ ನೀಡಿದರು.

ಗ್ರೀನ್‌ ಬಿಟಿಎಸ್ ಆಯೋಜನೆ

ಪರಿಸರ ಸ್ನೇಹಿ ಬಿಟಿಎಸ್‌ ಆಯೋಜನೆಗಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗುತ್ತಿದೆ. ಗ್ರೀನ್‌ ಬಿಟಿಎಸ್‌ ಮೂಲಕ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು. ಆಹಾರ ತ್ಯಾಜ್ಯವನ್ನು ಸಂಸ್ಕರಿಸಿ ಬಯೋ ಗ್ಯಾಸ್‌ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಜತೆಗೆ ಶೇ. 95ರಷ್ಟು ಕಡಿಮೆ ಪ್ಲಾಸ್ಟಿಕ್‌ ಬಳಕೆಗೂ ಆಯೋಜಕರಿಗೆ ಸೂಚಿಸಲಾಗಿದೆ ಎಂದು ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಏಕ್‌ರೂಪ್‌ ಕೌರ್‌ ತಿಳಿಸಿದರು.----

ಎಲೆಕ್ಟ್ರಾನಿಕ್ಸ್‌ಗೆ ಒತ್ತು ನೀಡಲಿರುವ ಕಿಯೋನಿಕ್ಸ್‌

ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಮಾತನಾಡಿ, ಎಲೆಕ್ಟ್ರಾನಿಕ್ಸ್‌ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಕಿಯೋನಿಕ್ಸ್‌ ವತಿಯಿಂದ 100 ಎಕರೆ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮ ಪಾರ್ಕ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಅದರ ಜತೆಗೆ ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. ಅದರಲ್ಲಿ ಮಂಗಳೂರಿನಲ್ಲಿ 3.5 ಎಕರೆ ಪ್ರದೇಶದಲ್ಲ ತಂತ್ರಜ್ಞಾನ ಕೇಂದ್ರ ಸ್ಥಾಪನೆಗೆ ಡಿಪಿಆರ್‌ ಸಿದ್ಧಪಡಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.