ಅಂಡರ್‌ ಪಾಸ್‌ಗಳಲ್ಲಿ ರೆಡ್‌ ಲೈನ್‌ ಹಾಕಿ ವಾಹನ ಸವಾರರಿಗೆ ಎಚ್ಚರಿಕೆ

| Published : May 25 2024, 01:31 AM IST / Updated: May 25 2024, 01:08 PM IST

ಅಂಡರ್‌ ಪಾಸ್‌ಗಳಲ್ಲಿ ರೆಡ್‌ ಲೈನ್‌ ಹಾಕಿ ವಾಹನ ಸವಾರರಿಗೆ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಂಪು ಪಟ್ಟಿಗಿಂತ ಹೆಚ್ಚಿನ ನೀರಿದ್ದರೆ ವಾಹನ ಓಡಿಸದಂತೆ ಸೂಚನೆ. ಆದರೆ ಕೆಸರು, ಹೊಗೆಯಿಂದ ಪಟ್ಟಿ ಮುಚ್ಚಿ ಹೋಗುವ ಬಗ್ಗೆ ಕಳವಳ ವ್ಯಕ್ತವಾಗಿದೆ.

 ಬೆಂಗಳೂರು :  ಮಳೆಗಾಲ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಅಂಡರ್‌ ಪಾಸ್‌ಗಳಲ್ಲಿ ರೆಡ್‌ ಲೈನ್‌ ಹಾಕಿ ಡೇಂಜರ್ ಸೂಚನೆ ಮೂಲಕ ವಾಹನ ಸವಾರರಿಗೆ ಎಚ್ಚರಿಕೆ ಸಂದೇಶ ನೀಡಲು ಬಿಬಿಎಂಪಿ ಮುಂದಾಗಿದೆ.

ಕಳೆದ ವರ್ಷ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ನಲ್ಲಿ ನಿಂತ ಮಳೆ ನೀರಿನಲ್ಲಿ ಕಾರು ಮುಳುಗಿ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ರೀತಿ ಘಟನೆ ಮರುಕಳಿಸಬಾರದೆಂಬ ಕಾರಣಕ್ಕೆ ಬಿಬಿಎಂಪಿಯು ನಗರದ 18 ರೈಲ್ವೆ ಅಂಡರ್‌ ಪಾಸ್‌ ಸೇರಿದಂತೆ 56 ಅಂಡರ್‌ ಪಾಸ್‌ಗಳಲ್ಲಿ ಸುಮಾರು 1.5 ಅಡಿಯಿಂದ 2 ಅಡಿ ಎತ್ತರಕ್ಕೆ ಅಂಡರ್‌ ಪಾಸ್‌ನ ಗೋಡೆಗಳಿಗೆ ಕೆಂಪು ಬಣ್ಣದಿಂದ ಪಟ್ಟಿ ಹಾಕಿದೆ.

ಈ ಪಟ್ಟಿಗಿಂತ ಹೆಚ್ಚಿನ ಪ್ರಮಾಣದ ಮಳೆ ನೀರು ಶೇಖರಣೆ ಗೊಂಡಿದ್ದರೆ ಅಪಾಯ (ಡೇಂಜರ್‌) ಇದೆ. ವಾಹನ ಸವಾರರು ಅಂಡರ್‌ ಪಾಸ್‌ ಬಳಸಬಾರದು ಎಂಬ ಸಂದೇಶ ನೀಡುವುದಕ್ಕೆ ಮುಂದಾಗಿದೆ.

ಬಿಬಿಎಂಪಿ ಈ ಕ್ರಮವು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮಳೆ ಬಂದಾಗ ಕೆಸರು ನೀರು ಗೋಡೆಗಳಿಗೆ ಬರೆದ ಕೆಂಪು ಪಟ್ಟಿಗಳ ಮೇಲೆ ಬಿದ್ದು ಮುಚ್ಚಿ ಹೋಗಲಿದೆ. ಜತೆಗೆ, ವಾಹನಗಳ ಕಪ್ಪು ಹೊಗೆಯಿಂದ ಸಹ ಮುಚ್ಚುವ ಸಾಧ್ಯತೆ ಇದೆ. ಇದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅಂಡರ್‌ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ವಿವರಣೆ ನೀಡಿದ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಬಿ.ಎಸ್‌.ಪ್ರಹ್ಲಾದ್‌, ಮೂರು ಹಂತದಲ್ಲಿ ಅಂಡರ್‌ ಪಾಸ್‌ ಸಮಸ್ಯೆ ಪರಿಹಾರಕ್ಕೆ ಕೈಗೊಳ್ಳಲಾಗುತ್ತಿದೆ. ಮೊದಲನೇಯದಾಗಿ ಮಳೆ ಬಂದ ತಕ್ಷಣ ಬ್ಯಾರಿಕೇಡ್‌ ಅಳವಡಿಕೆ ಮಾಡುವುದು. ತಾತ್ಕಾಲಿಕವಾಗಿ ಕೆಂಪು ಪಟ್ಟಿ ಬಳಿದು ವಾಹನ ಸವಾರರಿಗೆ ಎಚ್ಚರಿಕೆ ನೀಡುವುದು. ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಅಂಡರ್‌ ಪಾಸ್‌ನಲ್ಲಿ ನೀರು ಶೇಖರಣೆ ಆಗದಂತೆ ಹೆಚ್ಚುವರಿ ಚರಂಡಿ ವ್ಯವಸ್ಥೆ ಮಾಲಾಗುತ್ತಿದೆ ಎಂದು ವಿವರಿಸಿದರು.